ಕಳೆದ ಮೂರು ಅಂಕಣಗಳಿಂದ ನಾನು ವೈಯಕ್ತಿಕ ಮಾಹಿತಿಯ ಮಹತ್ವ, ಮತ್ತು ಭಾರತದ ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯಿದೆ(DPDPA), 2023 ಹಾಗು ಕರಡು ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ ನಿಯಮಗಳ(DPDPR), 2025 ಮುಖ್ಯಾಂಶಗಳ ಬಗ್ಗೆ ನಾನು ತಿಳಿಸಿಕೊಟ್ಟಿದ್ದೆ. ಇಂದಿನ ಅಂಕಣದಲ್ಲಿ ನಾನು ಭಾರತದಲ್ಲಿ ಹಾಗು ವಿಶ್ವದಲ್ಲಿ, ಈ ಮಾಹಿತಿ ರಕ್ಷಣೆ ಮತ್ತು ಗೌಪ್ಯತೆ ವಿಷಯದಲ್ಲಿ ಹಾಗು ಭಾರತದ ಹೊಸ ಕಾನೂನಿನ ಪರಿಣಾಮವಾಗಿ ಸೃಷ್ಟಿಯಾಗಿರುವ ವೃತ್ತಿಗಳು ಮತ್ತು ಅವಕಾಶಗಳ ಬಗ್ಗೆ, ಅದಕ್ಕೆ ಬೇಕಾದ ಕಲಿಕೆ, certifications ಮತ್ತು ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಕಾನೂನು ಹಾಗು IT ವಿಭಾಗದಲ್ಲಿ ದುಡಿಯುತ್ತಿರುವವರಿಗೆ ತಿಳಿಸಿಕೊಡಲಿದ್ದೇನೆ.
ಮೇಲೆ ತಿಳಿಸಿದ ಎರಡು ಕಾನೂನುಗಳ ವ್ಯಾಪ್ತಿ ಎಲ್ಲಾ ವೈಯಕ್ತಿಕ ಮಾಹಿತಿ ಸಂಗ್ರಹಿಸುವ, ಸಂಸ್ಕರಿಸುವ, ಬಳಸುವ, ಮಾರ್ಪಡಿಸುವ ಮತ್ತು ವರ್ಗಾವಣೆ ಮಾಡುವ ಸಂಸ್ಥೆಗಳು ಹಾಗು ಮಧ್ಯವರ್ತಿ ಸಂಸ್ಥೆಗಳ ಮೇಲೆ ಇರುತ್ತದೆ, ಅಂದರೆ ಭಾರತದಲ್ಲಿರುವ ಮತ್ತು ಭಾರತದ ಜನರೊಂದಿಗೆ ವ್ಯವಹರಿಸುವ ಎಲ್ಲಾ ಜಾಗತಿಕ ಸಂಸ್ಥೆಗಳಿಗೂ ಅನ್ವಯವಾಗುತ್ತದೆ. ಹಾಗಾಗಿ ಇದು GST ತರಹದ ಅವಕಾಶವಾಗಿದ್ದು, ಕೆಲಸದ ಮಾರುಕಟ್ಟೆಯಲ್ಲಿ ಅನೇಕ ಹೊಸ ಬಗೆಯ ಉತ್ತಮ ಸಂಬಳ ನೀಡುವ ವೃತ್ತಿಗಳಿಗೆ ನಾಂದಿ ಹಾಡಬಹುದು. ನೀತಿ ಆಯೋಗದ ವರದಿಯ ಪ್ರಕಾರ ಮಾಹಿತಿ ಸೋರಿಕೆ ಸಂಬಂದಿತ ಸೈಬರ್ ಅಪರಾಧಗಳು ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ 18.33% ವೇಗದಲ್ಲಿ ಬೆಳೆಯಲಿದೆ, ಹೊಸ ಕಾನೂನಿನ ಪ್ರಕಾರ ಇಂತಹ ಅಪರಾಧಗಳಿಗೆ 250 ಕೋಟಿ ರೂಪಾಯಿಗಳವರೆಗೆ ದಂಡವನ್ನು ಸಂಸ್ಥೆಗಳು ಎದುರಿಸಬಹುದು. ಆದ್ದರಿಂದ, ದಂಡವನ್ನು ತಪ್ಪಿಸಲು ಮತ್ತು ಹೊಸ ಕಾನೂನನ್ನು ಅನುಸರಿಸಲು, ಮಾಹಿತಿ ಗೌಪ್ಯತೆ ಮತ್ತು ಸುರಕ್ಷತೆಗಾಗಿ ಸಂಸ್ಥೆಗಳು ಹೊಸ ಉದ್ಯೋಗಗಳು ಮತ್ತು ವೃತ್ತಿ ಅವಕಾಶಗಳಿಗೆ ಜನರನ್ನು ನೇಮಿಸಿಕೊಳ್ಳಬೇಕಾಗುತ್ತದೆ.
ಮಾಹಿತಿ ಗೌಪ್ಯತೆ ಮತ್ತು ಸುರಕ್ಷತೆ ಕ್ಷತ್ರದಲ್ಲಿರುವ ಪ್ರಮುಖ ಉದ್ಯೋಗಗಳು ಮತ್ತು ವೃತ್ತಿಗಳು :-
- ಆರಂಭಿಕ ಹಂತದ ಉದ್ಯೋಗ ಶೀರ್ಷಿಕೆಗಳು – ಮಾಹಿತಿ ಗೌಪ್ಯತೆ ವಿಶ್ಲೇಷಕ, ಗೌಪ್ಯತೆ ಅನುಸರಣಾ ಸಂಯೋಜಕ, ಜೂನಿಯರ್ ಗೌಪ್ಯತೆ ಸಲಹೆಗಾರ, ಮಾಹಿತಿ ಆಡಳಿತ ಸಹಾಯಕ ಮತ್ತು ಮಾಹಿತಿ ಸಂರಕ್ಷಣಾ ಇಂಟರ್ನ್.
- ಮಧ್ಯಮ ಹಂತದ ಉದ್ಯೋಗ ಶೀರ್ಷಿಕೆಗಳು – ಹಿರಿಯ ಮಾಹಿತಿ ಗೌಪ್ಯತೆ ವಿಶ್ಲೇಷಕ, ಮಾಹಿತಿ ಸಂರಕ್ಷಣಾ ಅಧಿಕಾರಿ (DPO), ಗೌಪ್ಯತೆ ಕಾರ್ಯಕ್ರಮ ವ್ಯವಸ್ಥಾಪಕ, ಗೌಪ್ಯತೆ ಸಲಹೆಗಾರ ಮತ್ತು ಗೌಪ್ಯತೆ ಎಂಜಿನಿಯರ್.
- ಹಿರಿಯ ಹಂತದ ಉದ್ಯೋಗ ಶೀರ್ಷಿಕೆಗಳು – ಮಾಹಿತಿ ಗೌಪ್ಯತೆ ಮತ್ತು ರಕ್ಷಣಾ ಸಲಹೆಗಾರ, ಮಾಹಿತಿ ಗೌಪ್ಯತೆ ಮತ್ತು ರಕ್ಷಣೆಯ ನಿರ್ದೇಶಕ, ಮಾಹಿತಿ ಗೌಪ್ಯತೆ ಅನುಸರಣೆ ಮತ್ತು ಕಾನೂನು ವ್ಯವಹಾರಗಳ ನಿರ್ದೇಶಕ, ಮುಖ್ಯ ಮಾಹಿತಿ ಗೌಪ್ಯತೆ ಅಧಿಕಾರಿ ಮತ್ತು ಮಾಹಿತಿ ಗೌಪ್ಯತೆ ಎಂಜಿನಿಯರಿಂಗ್ ನಿರ್ದೇಶಕ.
ನೀವು ಮಾಹಿತಿ ಗೌಪ್ಯತೆ ವೃತ್ತಿಪರರಾಗಲು :-
- ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಕಾನೂನು, ಕಂಪ್ಯೂಟರ್ ವಿಜ್ಞಾನ ಅಥವಾ ಯಾವುದೇ ಮಾಹಿತಿ ತಂತ್ರಜ್ಞಾನ ಸಂಬಂಧಿತ ಕ್ಷೇತ್ರದಲ್ಲಿ ಮೂಲಭೂತ ಪದವಿ ಪಡೆಯಿರಿ, ಜೊತೆಗೆ ಮಾಹಿತಿ ಗೌಪ್ಯತೆ ಸಂಬಂಧಿತ ವಿಷಯದ ಕುರಿತು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ಗಳು ಮತ್ತು ಪ್ರಾಜೆಕ್ಟ್ ಮಾಡಿ.
- ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಪ್ರೈವಸಿ ಪ್ರೊಫೆಷನಲ್ಸ್ (AIPP) ನಿಂದ ಸರ್ಟಿಫೈಡ್ ಇನ್ಫರ್ಮೇಷನ್ ಪ್ರೈವಸಿ ಟೆಕ್ನಾಲಜಿಸ್ಟ್ (CIPT), ಸರ್ಟಿಫೈಡ್ ಇನ್ಫರ್ಮೇಷನ್ ಪ್ರೈವಸಿ ಪ್ರೊಫೆಷನಲ್ (CIPP), ಸರ್ಟಿಫೈಡ್ ಇನ್ಫರ್ಮೇಷನ್ ಪ್ರೈವಸಿ ಮ್ಯಾನೇಜ್ಮೆಂಟ್ (CIPM), DSCI ಸರ್ಟಿಫೈಡ್ ಪ್ರೈವಸಿ ಪ್ರೊಫೆಷನಲ್ (DCPP©), DSCI ಸರ್ಟಿಫೈಡ್ ಡೇಟಾ ಪ್ರೊಟೆಕ್ಷನ್ ಆಫೀಸರ್ (DCDPO) ಮತ್ತು DSCI ಸರ್ಟಿಫೈಡ್ ಪ್ರೈವಸಿ ಲೀಡ್ ಅಸೆಸರ್ (DCPLA) ನಂತಹ ಸರ್ಟಿಫಿಕೇಟ್ಗಳು ಒಳ್ಳೆಯ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುತ್ತವೆ.
- ಇದರ ಜೊತೆಗೆ ತಾಂತ್ರಿಕವಲ್ಲದ ಕೌಶಲ್ಯಗಳಾದ ವಿಶ್ಲೇಷಣಾತ್ಮಕ ಚಿಂತನೆ, ಸಂವಹನ, ಮಾಹಿತಿ ಆಡಳಿತ, ನೈತಿಕತೆ, ತಂಡ ಪ್ರವೃತ್ತಿ, ಸೂಕ್ಷ್ಮ ದೃಷ್ಟಿ, ಯೋಜನಾ ನಿರ್ವಹಣೆ, ಕಾನೂನು ಜ್ಞಾನದ ಕಲಿಕೆ ಸಹಾಯವಾಗುತ್ತದೆ.
- ಆನ್ಲೈನ್ (ಯೂಟ್ಯೂಬ್, ಸಿಂಪ್ಲಿಲರ್ನ್ ಇತ್ಯಾದಿ) ಮತ್ತು ಆಫ್ಲೈನ್ (ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು) ಪ್ಲಾಟ್ಫಾರ್ಮ್ಗಳಲ್ಲಿ ಅನೇಕ ಉಚಿತ ಮತ್ತು ಪಾವತಿಸಿದ ತರಬೇತಿ ಕಾರ್ಯಕ್ರಮಗಳು ಲಭ್ಯವಿದೆ, ಇವುಗಳನ್ನು ಮಾಹಿತಿ ರಕ್ಷಣೆ ಮತ್ತು ಗೌಪ್ಯತೆ ಕೌಶಲ್ಯಗಳೊಂದಿಗೆ ಒಬ್ಬರ ಬಯೋಡೇಟಾವನ್ನು ವೃದ್ಧಿಸಲು ಬಳಸಬಹುದು.
ಮಾಹಿತಿ ಗೌಪ್ಯತೆ ವೃತ್ತಿಪರರ ಕೆಲಸ ಏನಿರುತ್ತದೆ :-
- ಮಾಹಿತಿ ಭದ್ರತಾ ನೀತಿ ರಚನೆ, ಅನುಷ್ಠಾನ ಬೆಂಬಲ ಮತ್ತು ನಿಯಂತ್ರಣ.
- ಆಯಾ ದೇಶದ ಕಾನೂನುಗಳು ಮತ್ತು ಬಳಕೆಯ ಆಧಾರದ ಮೇಲೆ ವೈಯಕ್ತಿಕ ಮಾಹಿತಿಯ ವಿಂಗಡಣೆ ಮತ್ತು ವರ್ಗೀಕರಣ.
- ಅಪಾಯದ ಮೌಲ್ಯಮಾಪನಗಳನ್ನು ನಡೆಸುವುದು ಮತ್ತು ಅಪಾಯದ ತಗ್ಗಿಸುವಿಕೆಯ ಕ್ರಮಗಳನ್ನು ರೂಪಿಸುವುದು
- ಅನುಸರಣೆ ಲೆಕ್ಕಪರಿಶೋಧನೆಗಳನ್ನು ನಡೆಸುವುದು ಮತ್ತು ವರದಿ ಮಾಡುವುದು
- ಮಾಹಿತಿ ಉಲ್ಲಂಘನೆ ಘಟನೆಯ ಪ್ರತಿಕ್ರಿಯೆ ಮತ್ತು ನಿರ್ವಹಣೆ
- ಸಿಬ್ಬಂದಿ ತರಬೇತಿ ಮತ್ತು ಜಾಗೃತಿ ಅಧಿವೇಶನವನ್ನು ನಡೆಸುವುದು
- ದಾಖಲೆಗಳ ತಯಾರಿ ಮತ್ತು ನಿರ್ವಹಣೆ.