CCTV ಈಗ ಕೇವಲ ಕಚೇರಿ, ಅಂಗಡಿ, ಅಥವಾ ಕಾರ್ಖಾನೆಗಳಲ್ಲಿ ಮಾತ್ರವಲ್ಲ ನಮ್ಮ ನಿಮ್ಮೆಲ್ಲರ ಮನೆಯಲ್ಲೂ ಕೂಡ ಅವಶ್ಯ ಭಾಗವಾಗಿದೆ. CCTV ನಮಗೆ ಏನಾಯಿತು, ಯಾರು ಮಾಡಿದರು, ಹೇಗೆ ಮಾಡಿದರು ಮತ್ತಿತರ ವಿವರಗಳನ್ನು ಹಿಂದೆ ನಡೆದ ಘಟನೆ ಬಗ್ಗೆ ತಿಳಿಸಿ ಕೊಡುವುದಲದೆ, ಕಳ್ಳರಿಗೆ ತಾವು ಸಿಗಹಾಕೋಬಹುದು ಎಂಬ ಹೆದರಿಕೆ ಉಂಟುಮಾಡಿ ಮುಂದಾಗುವ ಕಳ್ಳತನ ತಪ್ಪಿಸುತ್ತದೆ. ಈ CCTV ಕೇವಲ ಮನೆಯ ಹೊರ ಭಾಗದಲ್ಲಷ್ಟೇ ಅಲ್ಲದೆ ಮನೆಯ ಒಳಗೆ, ನಮ್ಮ ಮಗುವಿನ ತೊಟ್ಟಿಲು ಮತ್ತು ವಯಸ್ಸಾದ ತಂದೆ ತಾಯಿಯರ ಮಲಗುವ ಕೋಣೆ ಮತ್ತಿತರ ಭಾಗಕ್ಕೂ ಹರಡಲು ಪ್ರಾರಂಭಿಸಿದೆ. ಈಗಿನ CCTV ತಂತ್ರಜ್ಞಾನವು ಎಷ್ಟು ಮುಂದುವರಿದಿದೆಯೆಂದರೆ, ಚಿತ್ರವನ್ನಷ್ಟೆ ಅಲ್ಲದೆ ಆ ಜಾಗದಲ್ಲಿ ನಡೆಯುವ ಸಂಭಾಷಣೆಯನ್ನು ಕೂಡ ಸೆರೆ ಹಿಡಿಯುತ್ತದೆ ಮತ್ತು ಅದರ ಕ್ಯಾಮೆರಾದ ಲೆನ್ಸ್ ಪ್ರಖರತೆಯು ನೋಡುವವರಿಗೆ ಸಣ್ಣ ಅಕ್ಷರಗಳು ಮತ್ತು ವಸ್ತುಗಳು ಸುಲಭವಾಗಿ ಕಾಣುವಂತೆ ಝೂಮ್ ಮಾಡಬಹುದಾಗಿದೆ. ಸೈಬರ್ ಅಪರಾಧಿಗಳು ನಿಮ್ಮ ಈ CCTV ಯನ್ನು ಹ್ಯಾಕ್ ಮಾಡಿ ಅದರಲ್ಲಿ ಸೆರೆ ಹಿಡಿದ ವಿಷಯವನ್ನು ಬಳಸಿ ನಿಮ್ಮ ಅಥವಾ ನಿಮ್ಮ ಆಸ್ತಿಯ ಮೇಲೆ ದರೋಡೆ, ಬ್ಲಾಕ್ಮೇಲ್, ಹಣಕಾಸಿನ ಅಪರಾಧಗಳು ಮತ್ತಿತರ ಅನೇಕ ಸೈಬರ್ ಅಪರಾಧಗಳನ್ನು ಎಸಗುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಮಿರೈ ಎಂಬ ಮಾಲ್ವೇರ್ ಬಳಸಿ ಜನಪ್ರಿಯ ತೈವಾನ್ ಮೂಲದ AVTECH ಸಂಸ್ಥೆಯ CCTV ಗಳನ್ನೂ ಹ್ಯಾಕ್ ಮಾಡಿದ ಸುದ್ದಿ ವರದಿಯಾಗಿತ್ತು. ಈ ಅಂಕಣದಲ್ಲಿ ನಾನು ಸೈಬರ್ ಅಪರಾಧಿಗಳು CCTV ಯನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳುತಿದ್ದಾರೆ, ನೀವು ಹೇಗೆ ನಿಮ್ಮ CCTV ಯನ್ನು ಸಂರಕ್ಷಿಸಿಕೊಳ್ಳಬಹುದು ಮತ್ತು ಸಂತ್ರಸ್ಥರಿಗಿರುವ ಕಾನೂನು ಮತ್ತಿತರ ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ. ಹೊಸ CCTV ಗಳು ಒಂದು ಸ್ಮಾರ್ಟ್ ಅಥವಾ ಇಂಟರ್ನೆಟ್ ಆಫ್ ಥಿಂಗ್ಸ್(IoT) ಸಾಧನವಾಗಿದ್ದು , ಅದರ ಇನ್ನಿತಿರ ಸಂರಕ್ಷಣಾ ಮಾರ್ಗಗಳನ್ನು ತಿಳಿಯಲು, ನೀವು ನನ್ನ IoT ಕುರಿತಾದ ಲೇಖನವನ್ನು ಓದಬಹುದು.
CCTV ಯನ್ನು ಸೈಬರ್ ಅಪರಾಧಿಗಳು ಹೇಗೆ ಬಳಸಿಕೊಳ್ಳುತ್ತಿದ್ದಾರೆ :-
ಬೇರೆಲ್ಲಾ ತಂತ್ರಜ್ಞಾನಗಳಂತೆ CCTV ಗಳು ಕೂಡ ಅನಲಾಗ್ ನಿಂದ ಡಿಜಿಟಲ್/IP(ಇಂಟರ್ನೆಟ್) ಕಡೆಗೆ ಸಾಗುತ್ತಿದೆ. ಸೈಬರ್ ಅಪರಾಧಿಗಳು ಹೊಸ ಡಿಜಿಟಲ್ ಇಂಟರ್ನೆಟ್ ಬೆಂಬಲಿಸುವ CCTV ಗಳನ್ನು ಹ್ಯಾಕ್ ಮಾಡಿ ಅದನ್ನು ತಮ್ಮ ವಶಕ್ಕೆ ಪಡೆದೋ ಅಥವಾ ಅದರೊಳಗೆ ಒಂದು ಮಾಲ್ವೇರ್ ತಂತ್ರಾಂಶವನ್ನು(ಆಪ್) ಸ್ಥಾಪಿಸಿ ಅದು ಎಲ್ಲ ಚಿತ್ರಗಳನ್ನು ಇಂಟರ್ನೆಟ್ ಮುಖಾಂತರ ಪೂರ್ವನಿರ್ಧಾರಿತ ಜಾಲತಾಣಕ್ಕೋ ಅಥವಾ ಕಂಪ್ಯೂಟರಿಗೂ ರವಾನಿಸುವಂತೆ ಮಾಡುತ್ತಾರೆ. ನಿಮ್ಮ ಇಂಟರ್ನೆಟ್ ಬೆಂಬಲಿಸುವ ಡಿಜಿಟಲ್ CCTV ಯನ್ನು ಹ್ಯಾಕ್ ಮಾಡಲು ಅವರು
೧. ಬ್ರೂಟ್ ಫೋರ್ಸ್ ದಾಳಿ : ನಮ್ಮಲ್ಲಿ ಬಹಳಷ್ಟು ಜನರು CCTV ಯ ಡಿಫಾಲ್ಟ್ ಪಾಸ್‌ವರ್ಡ್ ಅಥವಾ CCTV ಸ್ಥಾಪಿಸಿದಾಗ ಇಟ್ಟ ಸಾಮಾನ್ಯ ಪಾಸ್ವರ್ಡ್ ಅನ್ನು ಸುಮಾರು ಜನ ಬದಲಾಯಿಸುವುದೇ ಇಲ್ಲಾ, ಖದೀಮರು ಅದನ್ನು ಬಳಸಿ ನಿಮ್ಮ CCTV ಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ. ಅಮೇರಿಕಾದಲ್ಲಿ ಸಾವಿರಾರು HiKVision CCTV ಕ್ಯಾಮೆರಾಗಳು ಇದೆ ರೀತಿ 2017 ರಲ್ಲಿ ಹ್ಯಾಕ್ ಆಗಿದ್ದು, ಅದು ಮೊದಲ ಈ ಮಾದರಿಯ ದಾಳಿಯಾಗಿತ್ತು.
೨. Backdoor exploits : ಈ ಮಾದರಿ ದಾಳಿಗಳಲ್ಲಿ ಖದೀಮರು CCTV ನಲ್ಲಿರುವ ಸಾಫ್ಟ್ವೇರ್ ನ ಬಗ್ ಅಥವಾ ದೋಷವನ್ನು ಬಳಸಿ ಅಥವಾ ಮಾಲ್ವೇರ್ ಸ್ಥಾಪಿಸಿ ಅದರ ಮೇಲೆ ಹತೋಟಿ ಸಾಧಿಸುತ್ತಾರೆ.
೩. ಲೋಕಲ್ WiFi/ಇಂಟರ್ನೆಟ್ ದಾಳಿ : ಇಲ್ಲಿ ಸೈಬರ್ ಖದೀಮರು, ಮೊದಲು ನಿಮ್ಮ ಇಂಟರ್ನೆಟ್ ನ WiFi ನ ಹ್ಯಾಕ್ ಮಾಡಿ ಅಥವಾ ಫಿಸಿಕಲ್ ಆಗಿ ನಿಮ್ಮ ಇಂಟರ್ನೆಟ್ ಗೆ ಪ್ರವೇಶ ಪಡೆಯುತ್ತಾರೆ ನಂತರ ನಿಮ್ಮ CCTV ಯನ್ನು ವಶಕ್ಕೆ ತೆಗೆದುಕ್ಕೊಳ್ಳುತ್ತಾರೆ.
೪. ಮ್ಯಾನ್ ಇನ್ ದಿ ಮಿಡ್ಲ್ ದಾಳಿ : ಇಲ್ಲಿ ಅವರು CCTV ಯಿಂದ DVR ಗೆ ಹೋಗುವ ನೆಟ್ವರ್ಕ್ ಅಥವಾ ವೈರ್ ಅನ್ನು ಭೇದಿಸಿ, ಅಲ್ಲಿ ರವಾನೆಯಾಗುತ್ತಿರುವ ಮಾಹಿತಿಯನ್ನು ಕದಿಯುತ್ತಾರೆ.
CCTV ದುರುಪಯೋಗವನ್ನು ತಡೆಯಲು ನೀವು :-
೧. ಯಾವಾಗಲು ಒಳ್ಳೆ ಸಂಸ್ಥೆಯ CCTV ಸಾಧನಗಳನ್ನೆ ಖರೀದಿಸಿ.
೨. CCTV ಸ್ಥಾಪಿಸಿದ ಮೇಲೆ ಅದಕ್ಕೆ ನಿಮ್ಮದೇ ಆದ ಪ್ರಭಲವಾದ ಪಾಸ್ವರ್ಡ್ ಸೆಟ್ ಮಾಡಿ.
೩. CCTV ಸಾಫ್ಟ್ವೇರ್ ಅನ್ನು ನಿಯಮಿತವಾಗಿ ಸೆಕ್ಯೂರಿಟಿ ಅಪ್ಡೇಟ್ಸ್ ಗಳಿಂದ ನವೀಕರಿಸುತ್ತಿರಿ.
೪. ನಿಮ್ಮ CCTV DVR ಅನ್ನು ಮತ್ತು ಅದಕ್ಕೆ ಕನೆಕ್ಟ್ ಮಾಡುವ ಇಂಟರ್ನೆಟ್ ನೆಟ್ವರ್ಕ್ ಅನ್ನು ಅಪರಿಚಿತರಿಂದ ಸಂರಕ್ಷಿಸಿ.
೫. ನಿಮ್ಮ CCTV ಕನೆಕ್ಟ್ ಮಾಡುವ WIFI ಇಂಟರ್ನೆಟ್ ಗೂ ಬಲವಾದ ಪಾಸ್ವರ್ಡ್ ಅಳವಡಿಸಿ.
೬. ನಿಮ್ಮ CCTV ಕನೆಕ್ಟ್ ಮಾಡುವ WIFI ಇಂಟರ್ನೆಟ್ ಮತ್ತು ನಿಮ್ಮ ಸಂಸ್ಥೆಯ ಇಂಟರ್ನೆಟ್ ಎರಡು ಬೇರೆ ಬೇರೆ ಇಡಿ.
ನೀವು CCTV ಸೈಬರ್ ಅಪರಾಧದ ಸಂತ್ರಸ್ಥರಾಗಿದ್ದರೆ :-
ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್ಸೈಟ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಸೈಬರ್ ಅಪರಾಧಿಗಳ ಬೆದರಿಕೆ ಅಥವಾ ಬ್ಲಾಕ್ಮೇಲ್ ತಂತ್ರಗಳಿಗೆ ನೀವು ಸ್ಪಂದಿಸಬೇಡಿ. ನಿಮ್ಮ CCTV ಮತ್ತು ಇಂಟರ್ನೆಟ್ ನ ಪಾಸ್ವರ್ಡ್ ಬದಲಾಯಿಸಿ, ಅಥವಾ ಅದು ಮಾಲ್ವೇರ್ ದಾಳಿಗೆ ತುತ್ತಾಗಿದ್ದರೆ ಅದನ್ನು ಫ್ಯಾಕ್ಟರಿ ರಿಸೆಟ್ ಮಾಡಿ. ನಿಮ್ಮ CCTV ಮತ್ತು ಇಂಟರ್ನೆಟ್ ಸಾಧನಗಳ ಸಂರಕ್ಷಣೆಯನ್ನು ವೃದ್ಧಿಗೊಳಿಸಿ.
ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಪರಿಹಾರಗಳು :-
ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಸೆಕ್ಷನ್ ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಿಸಬಹುದು :
- ಭಾರತೀಯ ನ್ಯಾಯ ಸಂಹಿತ (BNS) ಸೆಕ್ಷನ್ 303(ಕಳ್ಳತನ), 319 (ಸೋಗು ಹಾಕುವ ಮೂಲಕ ವಂಚನೆಗೆ ಶಿಕ್ಷೆ) 336ಮತ್ತು 318 (ವಂಚನೆ), ಸೆಕ್ಷನ್ 323(ಕಾನೂನುಬಾಹಿರವಾಗಿ ಡೇಟಾವನ್ನು ಹೊರತೆಗೆಯುವುದು), ಸೆಕ್ಷನ್ 329(ಕ್ರಿಮಿನಲ್ ಅತಿಕ್ರಮಣ), ಸೆಕ್ಷನ್ 338 (ಫೋರ್ಜರಿ), ಸೆಕ್ಷನ್ 337( ಫೋರ್ಜರಿ/ನಕಲಿಗಾಗಿ ಶಿಕ್ಷೆ), ಮತ್ತು ಸೆಕ್ಷನ್ 340 (ಫೋರ್ಜರಿ/ನಕಲಿ ದಾಖಲೆಯ ಬಳಕೆ).
- ಮಾಹಿತಿ ತಂತ್ರಜ್ಞಾನ ಕಾಯಿದೆ (IT) ಕಾಯಿದೆ 2000/08 ಸೆಕ್ಷನ್ 43 (ಕಂಪ್ಯೂಟರ್, ಕಂಪ್ಯೂಟಿಂಗ್ ಸಾಧನ ಇತ್ಯಾದಿಗಳಿಗೆ ಹಾನಿಗಾಗಿ ದಂಡ ಮತ್ತು ಪರಿಹಾರ), ಸೆಕ್ಷನ್ 65 (ಕಂಪ್ಯೂಟರ್ ಅನ್ನು ಹಾಳುಮಾಡುವುದು), ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿತ ಅಪರಾಧಗಳಿಗೆ ಶಿಕ್ಷೆ – ಡೇಟಾ ಕಳ್ಳತನ ಮಾಡುವ ವ್ಯಕ್ತಿ, ಸಿಸ್ಟಮ್ಗೆ ವೈರಸ್ ಹರಡುವುದು, ಡೇಟಾ ನಾಶಪಡಿಸುವುದು, ಹ್ಯಾಕಿಂಗ್ , ಅಥವಾ ಅಧಿಕೃತ ವ್ಯಕ್ತಿಗೆ ಕಂಪ್ಯೂಟರ್ ಅಥವಾ ನೆಟ್ವರ್ಕ್ಗೆ ಪ್ರವೇಶವನ್ನು ನಿರಾಕರಿಸುವುದು), ಸೆಕ್ಷನ್ 66C (ಇದು ಗುರುತಿನ ಕಳ್ಳತನಕ್ಕೆ ದಂಡವನ್ನು ಸೂಚಿಸುತ್ತದೆ ಮತ್ತು ವ್ಯಕ್ತಿಯ ಗುರುತಿನ ಮಾಹಿತಿಯನ್ನು ಮೋಸದಿಂದ ಅಥವಾ ಅಪ್ರಾಮಾಣಿಕವಾಗಿ ಬಳಸುವುದು) ಮತ್ತು ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಸೋಗು ಹಾಕುವ ಮೂಲಕ ಮಾಡಿದ ವಂಚನೆಗೆ ಶಿಕ್ಷೆ).