ಮದುವೆ ಸೀಸನ್ ಶುರುವಾಗಿದೆ, ಈಗ ಮುಂಚಿನ ಹಾಗೆ ಕುಟುಂಬಸ್ಥರು ಆಪ್ತರ ಮನೆಗಳಿಗೆ ತೆರಳಿ ಮದುವೆ ಆಮಂತ್ರಣ ಕೊಡುವುದು ಕಷ್ಟವಾಗಿದೆ ಹಾಗಾಗಿ ಈ ಡಿಜಿಟಲ್ ಯುಗದಲ್ಲಿ ಆಮಂತ್ರಣ ಕೂಡ ಡಿಜಿಟಲ್ ಮಾರ್ಗವನ್ನು ಪಡೆಯುತ್ತಿದೆ. ವಾಟ್ಸಪ್ಪ್ ಅಥವಾ ಫೇಸ್ಬುಕ್ ನಲ್ಲಿ ಮದುವೆ, ಹುಟ್ಟು ಹಬ್ಬ ಹಾಗು ಇನ್ನಿತರ ಕಾರ್ಯಕ್ರಮಗಳ ಆಮಂತ್ರಣ ನಮಗೆಲ್ಲರಿಗೂ ಒಮ್ಮೆಯಾದರೂ ಬಂದಿರುತ್ತದೆ. ಡಿಜಿಟಲ್ ಆಮಂತ್ರಣದ ಹೆಚ್ಚಿನ ಬಳಕೆಗೆ ಮತ್ತೊಂದು ಕಾರಣ ಸಮಯದ ಕೊರತೆ, ವಾಹನ ದಟ್ಟಣೆ, ದೂರ ಮತ್ತು ಅಂಚೆ ಪತ್ರಕ್ಕಿಂತಲೂ ಅಗ್ಗವಾಗಿರೋದು. ಸೈಬರ್ ಅಪರಾಧಿಗಳು ಇದೆ ಡಿಜಿಟಲ್ ಆಮಂತ್ರಣದ ಹೆಸರಿನಲ್ಲಿ ನಿಮ್ಮ ನಂಬಿಕೆಯನ್ನು ಪಡೆದು ನಿಮ್ಮ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಿ ಅದರಲ್ಲಿರುವ ಮಾಹಿತಿಯನ್ನು ಕದ್ದು ಅನೇಕ ಸೈಬರ್ ಅಪರಾಧಗಳನ್ನು ಎಸಗುತ್ತಾರೆ. ನಾಲ್ಕು ರಾಜ್ಯಗಳ ಪೊಲೀಸ್ ಈ ಡಿಜಿಟಲ್ ಆಮಂತ್ರಣ ಸೈಬರ್ ವಂಚನೆಗಳ ಕುರಿತು ಈಗಾಗಲೇ ಮಾಧ್ಯಮಗಳಲ್ಲಿ ಮುನ್ನೆಚ್ಚರಿಕೆ ಸಂದೇಶಗಳನ್ನು ಬಿತ್ತರಿಸಿರುತ್ತಾರೆ. ಈ ಅಂಕಣದಲ್ಲಿ ನಾನು ಸೈಬರ್ ಅಪರಾಧಿಗಳು ಹೇಗೆ ಡಿಜಿಟಲ್ ಆಮಂತ್ರಣವನ್ನು ದುರುಪಯೋಗ ಪಡಿಸಿಕ್ಕೊಂಡು ಸೈಬರ್ ಅಪರಾಧಗಳನ್ನು ಎಸಗುತ್ತಾರೆ, ಅದರಿಂದ ನಿಮನ್ನು ನೀವು ಹೇಗೆ ಕಾಪಾಡಿಕ್ಕೊಳಬಹುದು, ಸಂತ್ರಸ್ಥರಿಗಿರುವ ಕಾನೂನು ಮತ್ತಿತರ ಪರಿಹಾರಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಸೈಬರ್ ಅಪರಾಧಿಗಳು ನಿಮಗೆ ಇಮೇಲ್, ವಾಟ್ಸಪ್ಪ್, ಫೇಸ್ಬುಕ್ ಅಥವಾ ಇತರ ಸೋಶಿಯಲ್ ಮೀಡಿಯಾ ಆಪ್ ಮೂಲಕ ಮದುವೆ ಅಥವಾ ಯಾವುದೊ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಲ್ಪಡುವ ಕುರಿತು ಕೆಲವು ಸಾಲುಗಳ ಜೊತೆಗೆ ಡಿಜಿಟಲ್ ಆಮಂತ್ರಣದ ಫೈಲ್/ಅಟ್ಯಾಚ್ಮೆಂಟ್ ಅಥವಾ ಲಿಂಕ್ ಅನ್ನು ಕಳುಹಿಸುತ್ತಾರೆ. ಕುತೂಹಲದಿಂದ ಯಾರ ಮದುವೆ ಅಥವಾ ಕಾರ್ಯಕ್ರಮವಿದು ಎಂದು ತಿಳಿಯಲು ನೀವೇನಾದರೂ ಆ ಫೈಲ್/ಅಟ್ಯಾಚ್ಮೆಂಟ್ ಅಥವಾ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಮುಗಿತು ಅದರಲ್ಲಿರುವ ಕುತಂತ್ರಾಂಶ/ಮಾಲ್ವೇರ್(ಒಂದು ಮಾದರಿಯ ಸಾಫ್ಟ್ವೇರ್ ವೈರಸ್ ಪ್ರೋಗ್ರಾಮ್) ನಿಮ್ಮ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ ನಲ್ಲಿ ಒಂದು ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುತ್ತದೆ. ಅದು ಸೈಬರ್ ಅಪರಾಧಿಗಳಿಗೆ ನಿಮ್ಮ ಉಪಕರಣವನ್ನು(ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್) ಹತೋಟಿಗೆ ತೆಗೆದುಕ್ಕೊಳಲು ಅಥವಾ ಅದರಲ್ಲಿರುವ ಮಾಹಿತಿಯನ್ನು ಕದಿಯಲು ಅಥವಾ ನೀವು ಟೈಪ್ ಮಾಡುವ ಎಲ್ಲಾ ಅಕ್ಷರಗಳನ್ನು ಇಂಟರ್ನೆಟ್ ಮುಖಾಂತರ ಕಳುಹಿಸುತ್ತದೆ. ಸೈಬರ್ ಅಪರಾಧಿಗಳು ಆ ಮಾಹಿತಿಯನ್ನು ಉಪಯೋಗಿಸಿ ನಿಮ್ಮ ವಿರುದ್ಧ ಹಣಕಾಸು ವಂಚನೆ ಮತ್ತಿತರ ಸೈಬರ್ ಅಪರಾಧಗಳನ್ನು ಎಸಗುತ್ತಾರೆ.
ಡಿಜಿಟಲ್ ಆಮಂತ್ರಣದ ಸೈಬರ್ ಹಗರಣಗಳಿಂದ ನಿಮ್ಮನ್ನು ರಕ್ಷಿಸಿಕ್ಕೊಳಲು ನೀವು :-
- ಅಪರಿಚಿತ ಸಂಖ್ಯೆಗಳಿಂದ ಬರುವ ಎಲ್ಲಾ ಕರೆ/ಸಂದೇಶಗಳು/ಆಮಂತ್ರಣ ಮತ್ತು ಡಿಜಿಟಲ್ ವಹಿವಾಟುಗಳಲ್ಲಿ ಯಾವಾಗಲೂ ‘ಶೂನ್ಯ ವಿಶ್ವಾಸ, ತಾಳ್ಮೆ ಮತ್ತು ದೃಢೀಕರಣ’ ತತ್ವವನ್ನು ಅನುಸರಿಸಿ.
- ಅಪರಿಚಿತರಿಂದ ಬರುವ ಸಂದೇಶದಲ್ಲಿನ ಹೈಪರ್ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ ಅಥವಾ ಸಂದೇಶ/ಇಮೇಲ್ನಲ್ಲಿ ಒದಗಿಸಲಾದ ಯಾವುದೇ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಡಿ.
- ನಿಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಅನ್ನು ಲಾಕ್ ಮಾಡಿ ಅಥವಾ ಖಾಸಗಿಯಾಗಿ ಇರಿಸಿ.
- ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸದೆ ಬರುವ ಸ್ನೇಹಿತರ ವಿನಂತಿಗಳನ್ನು ಸ್ವೀಕರಿಸಬೇಡಿ.
- ಉತ್ತಮ ಆಂಟಿವೈರಸ್ ಸಾಫ್ಟ್ವೇರ್ ಅನ್ನು ಉಪಯೋಗಿಸಿ ಮತ್ತು ಅದನ್ನು ನಿಯಮಿತವಾಗಿ ನವೀಕರಿಸಿ.
- ನಿಮಗೆ ಬಂದಿರುವ ಲಿಂಕ್ ಸುರಕ್ಷಿತವೇ ಎಂದು ತಿಳಿಯಲು ಜಾಲತಾಣಗಳಾದ www.sitechecker.pro ಅಥವಾ www.f-secure.com/en/link-checker ಅಥವಾ www.urlvoid.com ಬಳಸಿ, ಅದು ಸುರಕ್ಷಿತವೆಂದು ತಿಳಿದ ನಂತರವೇ ಕ್ಲಿಕ್ ಮಾಡಿ.
- ಅಟ್ಯಾಚ್ಮೆಂಟ್ ಅಥವಾ ಫೈಲುಗಳನ್ನು ಕೂಡ ನಿಮ್ಮ ಉಪಕರಣದಲ್ಲಿರುವ ಆಂಟಿವೈರಸ್ ಆಪ್ ನಲ್ಲಿ ಅಥವಾ ಜಾಲತಾಣಗಳಾದ www.attachmentscanner.com ಅಥವಾ www.f-secure.com/en/online-scanner ನಲ್ಲಿ ಪರೀಕ್ಷಿಸಿದ ನಂತರವೇ ತೆರೆಯಿರಿ.
ನೀವು ಡಿಜಿಟಲ್ ಆಮಂತ್ರಣದ ವಂಚನೆಗೆ ಬಲಿಯಾಗಿದ್ದರೆ :-
ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್ಸೈಟ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ವಂಚನೆಯ ಬಗ್ಗೆ ಬ್ಯಾಂಕ್ ನಲ್ಲಿ ವರದಿ ಮಾಡಿ, ದೂರು ಸಲ್ಲಿಸಿ ಮತ್ತು ವರ್ಗಾವಣೆಯಾದ ಮೊತ್ತದ ಮೇಲೆ ಡೆಬಿಟ್ ಫ್ರೀಜ್ ಮಾಡಿ. ನಿಮ್ಮ ಸಾಧನವು ಮಾಲ್ವೇರ್ ಸೋಂಕಿಗೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ಅದನ್ನು ಬ್ಯಾಕಪ್ ತೆಗೆದುಕೊಂಡ ನಂತರ ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.
ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಪರಿಹಾರಗಳು :-
ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಸೆಕ್ಷನ್ ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಿಸಬಹುದು:
- ಭಾರತೀಯ ನ್ಯಾಯ ಸಂಹಿತ (BNS) ಸೆಕ್ಷನ್ 303(ಕಳ್ಳತನ), 319 (ಸೋಗು ಹಾಕುವ ಮೂಲಕ ವಂಚನೆಗೆ ಶಿಕ್ಷೆ) 336ಮತ್ತು 318 (ವಂಚನೆ), ಸೆಕ್ಷನ್ 323(ಕಾನೂನುಬಾಹಿರವಾಗಿ ಡೇಟಾವನ್ನು ಹೊರತೆಗೆಯುವುದು), ಸೆಕ್ಷನ್ 329(ಕ್ರಿಮಿನಲ್ ಅತಿಕ್ರಮಣ), ಸೆಕ್ಷನ್ 338 (ಫೋರ್ಜರಿ), ಸೆಕ್ಷನ್ 337( ಫೋರ್ಜರಿ/ನಕಲಿಗಾಗಿ ಶಿಕ್ಷೆ), ಮತ್ತು ಸೆಕ್ಷನ್ 340 (ಫೋರ್ಜರಿ/ನಕಲಿ ದಾಖಲೆಯ ಬಳಕೆ).
- ಮಾಹಿತಿ ತಂತ್ರಜ್ಞಾನ ಕಾಯಿದೆ (IT) ಕಾಯಿದೆ 2000/08 ಸೆಕ್ಷನ್ 43 (ಕಂಪ್ಯೂಟರ್, ಕಂಪ್ಯೂಟಿಂಗ್ ಸಾಧನ ಇತ್ಯಾದಿಗಳಿಗೆ ಹಾನಿಗಾಗಿ ದಂಡ ಮತ್ತು ಪರಿಹಾರ), ಸೆಕ್ಷನ್ 65 (ಕಂಪ್ಯೂಟರ್ ಅನ್ನು ಹಾಳುಮಾಡುವುದು), ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿತ ಅಪರಾಧಗಳಿಗೆ ಶಿಕ್ಷೆ – ಡೇಟಾ ಕಳ್ಳತನ ಮಾಡುವ ವ್ಯಕ್ತಿ, ಸಿಸ್ಟಮ್ಗೆ ವೈರಸ್ ಹರಡುವುದು, ಡೇಟಾ ನಾಶಪಡಿಸುವುದು, ಹ್ಯಾಕಿಂಗ್ , ಅಥವಾ ಅಧಿಕೃತ ವ್ಯಕ್ತಿಗೆ ಕಂಪ್ಯೂಟರ್ ಅಥವಾ ನೆಟ್ವರ್ಕ್ಗೆ ಪ್ರವೇಶವನ್ನು ನಿರಾಕರಿಸುವುದು), ಸೆಕ್ಷನ್ 66C (ಇದು ಗುರುತಿನ ಕಳ್ಳತನಕ್ಕೆ ದಂಡವನ್ನು ಸೂಚಿಸುತ್ತದೆ ಮತ್ತು ವ್ಯಕ್ತಿಯ ಗುರುತಿನ ಮಾಹಿತಿಯನ್ನು ಮೋಸದಿಂದ ಅಥವಾ ಅಪ್ರಾಮಾಣಿಕವಾಗಿ ಬಳಸುವುದು) ಮತ್ತು ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಸೋಗು ಹಾಕುವ ಮೂಲಕ ಮಾಡಿದ ವಂಚನೆಗೆ ಶಿಕ್ಷೆ).