Site icon

ಸೈಬರ್ ಅಪರಾಧಗಳ ಇತಿಹಾಸ – ಭಾಗ 2

History of Cybercrimes

ಸೈಬರ್ ಅಪರಾಧಗಳ ಇತಿಹಾಸ ತುಂಬ ರೋಚಕವಾಗಿದೆ, ಕಳೆದ ವಾರ ನಾನು ಸೈಬರ್ ಅಪರಾಧಗಳು ಯಾವಾಗ ಮತ್ತು ಹೇಗೆ ಪ್ರಾರಂಭವಾಯಿತು ಮತ್ತು ಹೇಗೆ ವಿಕಸನಗೊಂಡವು ಎಂಬುದನ್ನು ತಿಳಿಸಲು, 1834 – 1962 ಕಾಲಘಟ್ಟಕ್ಕೆ ಸಂಬಂಧಿಸಿದ ಕೆಲವು ಐತಿಹಾಸಿಕ ಸಂಗತಿಗಳು ಮತ್ತು ಕಥೆಗಳನ್ನು ವಿವರಿಸಿದ್ದೆ. ನೀವು ನೋಡಿದಂತೆ ಹೆಚ್ಚಿನ ದಾಳಿಗಳು ಟೆಲಿಗ್ರಾಫ್, ದೂರವಾಣಿ ಮತ್ತು ವೈಯಕ್ತಿಕ ಕಂಪ್ಯೂಟರ್‌ಗಳ ಆರಂಭಿಕ ರೂಪಗಳೊಂದಿಗೆ ಸಂಬಂಧಿಸಿವೆ. ಇಂಟ್ರನೆಟ್‌ನ ಆವಿಷ್ಕಾರವು ಸೈಬರ್‌ಕ್ರೈಮ್ ಜಗತ್ತನ್ನು ತುಂಬಾ ಬದಲಾಯಿಸಿತು. ಈ ಲೇಖನದಲ್ಲಿ, ನಾನು 1962 ರಿಂದ 2005 ರವರೆಗಿನ ಪ್ರಪಂಚದಾದ್ಯಂತ ನಡೆದ ಸೈಬರ್ ಅಪರಾಧದ ಇತಿಹಾಸದ ಬಗ್ಗೆ ಮಾತನಾಡಲಿದ್ದೇನೆ, 2005 ನಂತರ ಸೈಬರ್ ಅಪರಾಧವು ಮುಖ್ಯವಾಹಿನಿಗೆ ಬಂದಿತು, ಅನೇಕ ಸಂಘಟಿತ ಗ್ಯಾಂಗ್‌ಗಳು ಮತ್ತು ಕಂಪನಿಗಳು ಇವುಗಳಲ್ಲಿ ತೊಡಗಿಸಿಕೊಂಡಿತು ಮತ್ತು ಹಣದ ಪ್ರಮಾಣವೂ ಕೂಡ ಗುಣಿಸಲ್ಪಟ್ಟಿತು ಹಾಗು 2005 ರ ನಂತರ ನಡೆದ ಸಂಗತಿಗಳ ಬಗ್ಗೆ ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿರುತ್ತದೆ.

ಸೈಬರ್ ಅಪರಾಧಗಳ ಇತಿಹಾಸ (1962 – 2005) :-

U.S. ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ ನೆಟ್‌ವರ್ಕ್ (ARPANET) ಪ್ರಸ್ತುತ ಇಂಟರ್ನೆಟ್‌ನ ಮೊದಲ ಆವೃತ್ತಿ, 1969 ರಲ್ಲಿ ರಕ್ಷಣಾ ಕಂಪ್ಯೂಟರ್ ಗಳ ನೆಟ್‌ವರ್ಕ್‌ ಮಾಡಲು ಪ್ರಾರಂಭವಾದ ಇದು, ನಂತರ ಸಾರ್ವಜನಿಕಗೊಳಿಸಲಾಯಿತು ಹಾಗಾಗಿ ಇಂದು ನಮಗೆ ತಿಳಿದಿರುವ ಇಂಟರ್ನೆಟ್ ಜನವರಿ 1, 1983 ರಂದು ಜನಿಸಿತು. ಮೊದಲ ಕಂಪ್ಯೂಟರ್ ವೈರಸ್ (ಕ್ರೀಪರ್ ವೈರಸ್) ಅನ್ನು ಬಾಬ್ ಥಾಮಸ್ ಅನ್ನುವವನು 1971 ರಲ್ಲಿ ARPANET ನಲ್ಲಿ ಪ್ರಯೋಗಿಸಿದ, ಇಲ್ಲಿ ಕಂಪ್ಯೂಟರ್ ವೈರಸ್ ಜೈವಿಕ ವೈರಸ್ ನಂತೆ ಸ್ವಯಂ ಪುನರಾವರ್ತನೆಯ ಕಂಪ್ಯೂಟರ್ ಪ್ರೋಗ್ರಾಂ ಆಗಿರುತ್ತದೆ (ಇದು ಕ್ರಿಮಿನಲ್ ಗೆ ನಿರ್ದಿಷ್ಟ ವಿವರಗಳನ್ನು ಕಳುಹಿಸುವುದು ಅಥವಾ ನಿಮ್ಮ ಕಂಪ್ಯೂಟರ್ ಅನ್ನು ಪ್ರವೇಶಿಸಲು ದ್ವಾರವನ್ನು ರಚಿಸುವಂತಹ ನಿರ್ದಿಷ್ಟ ಕಾರ್ಯಗಳನ್ನು ಮಾಡುತ್ತದೆ).
1979 ರಲ್ಲಿ, 16 ವರ್ಷ ವಯಸ್ಸಿನ ಕೆವಿನ್ ಮಿಟ್ನಿಕ್ ಅನ್ನುವವನು ಆಪರೇಟಿಂಗ್ ಸಿಸ್ಟಮ್‌ಗಳನ್ನು ಅಭಿವೃದ್ಧಿಪಡಿಸುವ ಡಿಜಿಟಲ್ ಎಕ್ವಿಪ್ಮೆಂಟ್ ಕಾರ್ಪೊರೇಷನ್‌ನ ಕಂಪ್ಯೂಟರ್‌ ಹ್ಯಾಕ್ ಮಾಡಿ, ಅಲ್ಲಿಂದ ಸಾಫ್ಟ್‌ವೇರ್‌ನ ಕದ್ದು ಅದನ್ನು ಕಾನೂನುಬಾಹಿರವಾಗಿ ಬಳಸಿದಾಗ/ಹಂಚಿದಾಗ ಮೊದಲ ಸಾಫ್ಟ್‌ವೇರ್ ಪೈರಸಿ(ಕೃತಿಚೌರ್ಯ) ದಾಖಲಾಯಿತು. 1981 ರಲ್ಲಿ ಸೈಬರ್ ಕ್ರೈಮ್‌ಗೆ ಮೊದಲ ಅಪರಾಧ ನಿರ್ಣಯವು(ಕನ್ವಿಕ್ಷನ್) ಸಂಭವಿಸಿತು, ಇಯಾನ್ ಮರ್ಫಿ ಎಂಬಾತ AT&T ಸಂಸ್ಥೆಯ ಆಂತರಿಕ ವ್ಯವಸ್ಥೆಗಳನ್ನು ಹ್ಯಾಕ್ ಮಾಡಿ ಅಲ್ಲಿನ ಕಂಪ್ಯೂಟರ್‌ಗಳ ಗಡಿಯಾರಗಳನ್ನು ಬದಲಾಯಿಸಿ ಸಂಸ್ಥೆಯ ವ್ಯವಹಾರಕ್ಕೆ ಗಮನಾರ್ಹ ಹಾನಿಯನ್ನುಂಟುಮಾಡಿದಕ್ಕೆ ಶಿಕ್ಷೆಗೊಳಗಾದ. ಮೊದಲ ದಾಖಲಾದ ಸೈಬರ್ ಬೇಹುಗಾರಿಕೆ ಪ್ರಕರಣವು 1986 ರಲ್ಲಿ ಸಂಭವಿಸಿತು, ಜರ್ಮನ್ ಹ್ಯಾಕರ್ ಮಾರ್ಕಸ್ ಹೆಸ್ ಎಂಬುವವನು ಪೆಂಟಗನ್‌ನಲ್ಲಿನ ಮೇನ್‌ಫ್ರೇಮ್‌ಗಳು ಸೇರಿದಂತೆ 400 ಯುಎಸ್ ಮಿಲಿಟರಿ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಿ, ಅಲ್ಲಿಂದ ಕದ್ದ ಮಾಹಿತಿಯನ್ನು ರಷ್ಯಾದ ಕೆಜಿಬಿಗೆ ಮಾರಾಟ ಮಾಡುವ ಪ್ರಯತ್ನದಲ್ಲಿ ಸಿಕ್ಕಿಬಿದ್ದ.
ನಿಮ್ಮ ಕಂಪ್ಯೂಟರ್‌ ನಲ್ಲಿನ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ ಮೂಲಕ ಅಥವಾ ಅದಕ್ಕೆ ಪ್ರವೇಶವನ್ನು ನಿರಾಕರಿಸುವ ಮೂಲಕ ಕಂಪನಿಗಳ ವ್ಯವಹಾರಗಳು ಮತ್ತು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ Ransomware ಸಾಫ್ಟ್ವೇರ್ ವೈರಸ್ ಅನ್ನು ಮೊದಲು 1989 ರಲ್ಲಿ ರಚಿಸಲಾಯಿತು, ಖದೀಮರು 20,000 ಸಾಫ್ಟ್‌ವೇರ್ ವೈರಸ್ ಸೋಂಕಿತ ಡಿಸ್ಕೆಟ್‌ಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಏಡ್ಸ್ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ವಿತರಿಸಿದರು ಮತ್ತು ಅವರು ಅದನ್ನು ತಮ್ಮ ಕಂಪ್ಯೂಟರ್ ನಲ್ಲಿ ಬಳಸಿದಾಗ ವೈರಸ್ ಹರಡಿ ಅದು ಲಾಕ್ ಆದವು ಮತ್ತು ಅದನ್ನು ಅನ್‌ಲಾಕ್ ಮಾಡಲು ಪನಾಮದಲ್ಲಿರುವ PO ಬಾಕ್ಸ್‌ಗೆ US$189 ಅನ್ನು ಕಳುಹಿಸಲು ಬಲಿಪಶುಗಳಿಗೆ ಸಂದೇಶವನ್ನು ರವಾನಿಸಲಾಯಿತು.
ಮೊದಲ ಸೈಬರ್ ಭಯೋತ್ಪಾದನೆ ಘಟನೆಯು 1994 ರಲ್ಲಿ ದಾಖಲಾಯಿತು, ರೋಮ್‌ನಲ್ಲಿರುವ ಯುಎಸ್ ಏರ್‌ಫೋರ್ಸ್ ಮಿಲಿಟರಿ ಲ್ಯಾಬ್ ಕಂಪ್ಯೂಟರ್‌ಗಳನ್ನು 16 ವರ್ಷದ ಯುಕೆ ಮೂಲದ ಹ್ಯಾಕರ್ ಮೋಜಿಗಾಗಿ ದಾಳಿ ಮಾಡಿದ ಅದರಿಂದ ಆ ಏರ್ಪೋರ್ಟಿನಿಂದ 26 ದಿನಗಳವರೆಗೆ ಹಾರಾಟದ ಕಾರ್ಯಾಚರಣೆಗೆ ಅಡ್ಡಿಯಾಯಿತು ಮತ್ತು ತನ್ನ ಹ್ಯಾಕ್ ನ ಪುರಾವೆಯಾಗಿ ಅವನು ಅಲ್ಲಿನ ಗೌಪ್ಯ ಡೇಟಾವನ್ನು ವೆಬ್ಸೈಟ್ ನಲ್ಲಿ ಹಾಕಿದಾಗ ಸಿಕ್ಕಿಬಿದ್ದನು. ಮೊದಲ ಆನ್‌ಲೈನ್ ಬ್ಯಾಂಕ್ ದರೋಡೆಯನ್ನು 1995 ರಲ್ಲಿ ಮಾಡಲಾಯಿತು, ರಷ್ಯಾದ ಸೈಬರ್ ಕ್ರಿಮಿನಲ್ ವಾಲ್ಡಿಮಿರ್ ಲೆವಿನ್ ಎಂಬುವವನು ಪ್ರಮುಖ US ಬ್ಯಾಂಕ್‌ನಿಂದ $400,000 ಕದ್ದ, ಆದರೆ ಹಣವನ್ನು ಪಡೆಯಲು ಅವನು US ಗೆ ಬಂದಾಗ ಅವನನ್ನು ಹಿಡಿಯಲಾಯಿತು.
ಇತ್ತೀಚಿನ ದಿನಗಳಲ್ಲಿ ಡೇಟಾ ಉಲ್ಲಂಘನೆ ಅಥವಾ ಡೇಟಾ ಸೋರಿಕೆ ದೊಡ್ಡ ಸಮಸ್ಯೆಯಾಗಿದೆ, ಖದೀಮರು ಜನರ ವೈಯಕ್ತಿಕ ಮತ್ತು ಆರ್ಥಿಕವಾಗಿ ಸೂಕ್ಷ್ಮ ಮಾಹಿತಿಯನ್ನು ಕದ್ದು ಮಾರಾಟ ಮಾಡುತ್ತಾರೆ ಅಥವಾ ಅದನ್ನು ಬಳಸಿ ಅನೇಕ ಸೈಬರ್ ಕ್ರೈಮ್‌ಗಳನ್ನು ಮಾಡುತ್ತಾರೆ. ಜಾಗತಿಕ ಗಮನ ಸೆಳೆದ ಮೊದಲ ಪ್ರಮುಖ ಡೇಟಾ ಉಲ್ಲಂಘನೆಯು 2005 ರಲ್ಲಿ ಸಂಭವಿಸಿತು, US ನಲ್ಲಿ DSW ವೇರ್‌ಹೌಸ್ ಕಾರ್ಪೊರೇಷನ್‌ನಿಂದ 14 ಲಕ್ಷ ಕ್ರೆಡಿಟ್ ಕಾರ್ಡ್ ವಿವರಗಳು ಸೋರಿಕೆಯಾಯಿತು ಮತ್ತು ಇಲ್ಲಿಯವರೆಗೆ ದಾಖಲಾದ ಅತಿದೊಡ್ಡ ಡೇಟಾ ಉಲ್ಲಂಘನೆಯೆಂದರೆ ಮಾರ್ಚ್ 2020 ರಲ್ಲಿ ಸಂಭವಿಸಿದ CAM4 ಡೇಟಾಬೇಸ್‌ನಿಂದ 108.8 ಕೋಟಿ ವೈಯಕ್ತಿಕ ದಾಖಲೆಗಳು ಸೋರಿಕೆಯಾಗಿದ್ದು.
ಮೇಲೆ ತಿಳಿಸಿದ ವಿಶ್ವದ ಇತಿಹಾಸದಲ್ಲಿ ನಡೆದ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಕಥೆಗಳು ಮತ್ತು ಸಂಗತಿಗಳು ನಿಮಗೆ ಆಸಕ್ತಿದಾಯಕವಾಗಿತ್ತು ಎಂದು ಭಾವಿಸುತ್ತೇನೆ ಮತ್ತು ಮುಂದಿನ ವಾರದ ಲೇಖನದಲ್ಲಿ ನಾನು ಭಾರತದಲ್ಲಿ ನಡೆದ ಪ್ರಮುಖ ಸೈಬರ್ ಅಪರಾಧಗಳ ಬಗ್ಗೆ ಮಾತನಾಡಲಿದ್ದೇನೆ.

Exit mobile version