ನಾನು ಇತಿಹಾಸ ಉತ್ಸಾಹಿಗಳ ಗುಂಪಿನ ಸದಸ್ಯನಾಗಿದ್ದೇನೆ, ಅವರು ಮೈಸೂರಿನ ಸಿಲ್ವರ್‌ಹೌಸ್ ಬುಕ್‌ಶಾಪ್‌ನಲ್ಲಿ ಪ್ರತಿ ಹದಿನೈದು ದಿನಕ್ಕೊಮ್ಮೆ ಭೇಟಿಯಾಗುತ್ತಾರೆ ಮತ್ತು ವಿವಿಧ ವಸ್ತುಗಳ ಅಥವಾ ಜನಾಂಗಗಳ ಅಥವಾ ವಿಜ್ಞಾನದ ಇತಿಹಾಸದ ಬಗ್ಗೆ ಚರ್ಚಿಸುತ್ತಾರೆ. ಕಳೆದ ವಾರಾಂತ್ಯದಲ್ಲಿ, ನಾನು ಸೈಬರ್‌ಕ್ರೈಮ್‌ಗಳ ಇತಿಹಾಸದ ಬಗ್ಗೆ ಉಪನ್ಯಾಸ ಕೊಟ್ಟಿದ್ದೆ. ಅದನ್ನು ಕೇಳಿದ ಜನರು ತುಂಬ ಇಷ್ಟಪಟ್ಟರು ಮತ್ತು ಅದಾದ ನಂತರ ನನಗೆ ಅವರಿಂದ ನನ್ನ ಉಪನ್ಯಾಸದ ಬಗ್ಗೆ ಉತ್ತಮ ವಿಮರ್ಶೆಗಳನ್ನುಕೊಟ್ಟರು. ಈ ಪ್ರಸ್ತುತಿಗಾಗಿ ತಯಾರಿ ನಡೆಸುವಾಗ ನಾನು ಬಹಳಷ್ಟು ಕಲಿತಿದ್ದೇನೆ ಮತ್ತು ಇತಿಹಾಸದಲ್ಲಿ ನಡೆದ ಸೈಬರ್‌ಕ್ರೈಮ್‌ಗಳಿಗೆ ಸಂಬಂಧಿಸಿದ ಘಟನೆಗಳು ಮತ್ತು ಕಥೆಗಳನ್ನು ಓದಿ ಆಶ್ಚರ್ಯಚಕಿತನಾದೆ. ಹಾಗಾಗಿ ನನ್ನ ಸೈಬರ್‌ಮಿತ್ರ ಓದುಗರಿಗೆ ಅದನ್ನೇ ಏಕೆ ಪ್ರಸ್ತುತಪಡಿಸಬಾರದು ಎಂದು ಯೋಚಿಸಿದೆ ಮತ್ತು ವಿವಿಧ ಸೈಬರ್‌ಕ್ರೈಮ್‌ಗಳ ಇತಿಹಾಸದ ಕಥೆಗಳನ್ನು ಓದಿ ನೀವು ಕೂಡ ಆಶ್ಚರ್ಯಚಕಿತರಾಗುತ್ತೀರಿ ಮತ್ತು ವಿಸ್ಮಯಗೊಳ್ಳುತ್ತೀರಿ ಎಂದು ನನಗೆ ಖಾತರಿಯಿದೆ. ಮುಂದಿನ ಕೆಲವು ವಾರಗಳವರೆಗೆ, ನಾನು ನನ್ನ ಸೈಬರ್‌ಮಿತ್ರ ಲೇಖನದಲ್ಲಿ ವಿಶ್ವದಾದ್ಯಂತ ಮತ್ತು ಭಾರತದ ಸೈಬರ್ ಅಪರಾಧಗಳ ಇತಿಹಾಸದ ಬಗ್ಗೆ ವಿವರಿಸುತ್ತೇನೆ, ಓದಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.
ನಮ್ಮ ಪ್ರಸ್ತುತ ಜಗತ್ತಿನಲ್ಲಿ, ಸೈಬರ್ ಅಪರಾಧವು ಒಂದು ಆತಂಕಕಾರಿ ಬೆಳವಣಿಗೆಯಾಗಿ ಪ್ರಚಲಿತವಾಗಿದೆ, ಇದಕ್ಕೆ ಬಹು ದೊಡ್ಡ ಕಾರಣ ಎಂದರೆ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಿನ ವಹಿವಾಟುಗಳನ್ನು ಡಿಜಿಟಲ್ ಪ್ಲಾಟ್ ಫಾರ್ಮ್ಗಳನ್ನು ಬಳಸಿಕೊಂಡು ಆನ್ಲೈನ್ನಲ್ಲಿ ನಡೆಸಲು ಸರಕಾರ ಮತ್ತು ವಹಿವಾಟುಗಳು ಪ್ರೋತ್ಸಾಹಿಸುತ್ತಿದೆ. ವ್ಯಕ್ತಿಗಳು, ವ್ಯವಹಾರಗಳು ಮತ್ತು ಸರ್ಕಾರಿ ಘಟಕಗಳಿಗೆ ಸೈಬರ್ ಕ್ರೈಮ್ ಗಂಭೀರ ಅಪಾಯವನ್ನುಂಟು ಮಾಡುತ್ತದೆ ಮತ್ತು ಅವು ಗಮನಾರ್ಹವಾದ ಹಣಕಾಸಿನ ನಷ್ಟ, ಗೌಪ್ಯತೆ ಸಮಸ್ಯೆಗಳು, ಖ್ಯಾತಿಹಾನಿ ಮತ್ತು ಕಿಡಗೇಡಿತನಕ್ಕೆ ಕಾರಣವಾಗಬಹುದು. ಪ್ರಸ್ತುತ ಸೈಬರ್ ಕ್ರೈಮ್ ಟ್ರೆಂಡ್ಗಳ ಆಧಾರದ ಮೇಲೆ, ಸ್ಟಾಟಿಸ್ಟಾ ಸಂಶೋಧನಾ ಕಂಪನಿಯ ಮುದ್ರಿತ ಅಂಕಿಅಂಶದ ಪ್ರಕಾರ 2023 ರಲ್ಲಿ ಇದು $8 ಟ್ರಿಲಿಯನ್ ಆಗಿತ್ತು ಮತ್ತು 2026 ರ ವೇಳೆಗೆ ಅಂತಹ ದಾಳಿಗಳಿಂದ ಆಗುವ ನಷ್ಟವು ವಿಶ್ವದಾದ್ಯಂತ $20 ಟ್ರಿಲಿಯನ್ಗೆ ತಲುಪಬಹುದು. ನಾವು ವೆಚ್ಚವನ್ನು ಒಂದು ದೇಶದ ಜಿಡಿಪಿ ಎಂದು ಪರಿಗಣಿಸಿದರೆ ಆ ದೇಶ ಜಿಡಿಪಿ ಆಧಾರದಲ್ಲಿ ಮೂರನೇ ಅತಿದೊಡ್ಡ ದೇಶವಾಗಿದೆ.
ಹೆಚ್ಚಿನ ಜನರು ಸೈಬರ್ ಅಪರಾಧಗಳು ಕಳೆದ ಇಪ್ಪತ್ತು ಮೂವತ್ತು ವರ್ಷಗಳ ವಿದ್ಯಮಾನವೆಂದು ಭಾವಿಸಿರುತ್ತಾರೆ, ಆದರೆ ಸೈಬರ್ ಅಪರಾಧದ ಮೊದಲ ನಿದರ್ಶನವು 1834 ರಷ್ಟು ಹಿಂದಿನದು ಎಂದು ನೀವು ನಂಬುವುದಿಲ್ಲ, ಆಗ ಇಬ್ಬರು ಕಳ್ಳರು ಫ್ರೆಂಚ್ ಟೆಲಿಗ್ರಾಫ್ ವ್ಯವಸ್ಥೆಯಲ್ಲಿ ಕಳ್ಳತನದಿಂದ ನುಸುಳಿ ಎರಡು ಸಂಸ್ಥೆಗಳ ಮದ್ಯೆ ಟೆಲಿಗ್ರಾಫ್ ಮೂಲಕ ರವಾನಿಸಲಾದ ಹಣಕಾಸು ಮಾರುಕಟ್ಟೆಗಳಿಗೆ ಸಂಬಂಧ ಪಟ್ಟ ಗೋಪ್ಯ ಮಾಹಿತಿಯನ್ನು ಕದ್ದು ಸ್ವಂತ ಲಾಭಕ್ಕಾಗಿ ಬಳಸಿದ್ದರು. ‘ಸೈಬರ್’ ಪದವು ಇಂಗ್ಲಿಷ್ ಭಾಷೆಗೆ ಮೊದಲು ‘ಸೈಬರ್ನೆಟಿಕ್ಸ್’ ಪದದ ಮೂಲಕ ಪ್ರವೇಶಿಸಿತು, ಮತ್ತು “ಸೈಬರ್ ಕ್ರೈಮ್” ಪದವನ್ನು 1982 ರಲ್ಲಿ ವಿಲಿಯಂ ಗಿಬ್ಸನ್ ಅವರು ಮೊದಲು ಸೃಷ್ಟಿಸಿದರು ಆದರೆ ಅದು 1984 ರಲ್ಲಿ ಅವರ ಜನಪ್ರಿಯ ಕಾದಂಬರಿ ‘ನ್ಯೂರೋಮ್ಯಾನ್ಸರ್’ ಮೂಲಕ ಜನಪ್ರಿಯತೆಯನ್ನು ಗಳಿಸಿತು.
ಅಲೆಕ್ಸಾಂಡರ್ ಗ್ರಹಾಂ ಬೆಲ್ ಅವರು 1876 ರಲ್ಲಿ ದೂರವಾಣಿಯನ್ನು ಸಂಶೋದಿಸಿದರು, ಎರಡು ವರ್ಷಗಳ ನಂತರ ಕೆಲವು ಹದಿಹರೆಯದ ಹುಡುಗರು ಬೆಲ್‌ನ ಟೆಲಿಫೋನ್ ಕಂಪನಿಗೆ ನುಗ್ಗಿದರು ಮತ್ತು ವೈಯಕ್ತಿಕ ಲಾಭಕ್ಕಾಗಿ ಕರೆಗಳನ್ನು ನಿರ್ದೇಶಿಸಿದರು ಮತ್ತು ಆ ಮೂಲಕ ಫೋನ್ ಫ್ರೀಕಿಂಗ್ (ಬೇರೊಬ್ಬರ ದೂರವಾಣಿ ಬಳಸಿ ಉಚಿತ ಕರೆಗಳನ್ನು ಮಾಡುವುದು ಅಥವಾ ದೂರದ ಟೋಲ್‌ಗಳನ್ನು ಕಾನೂನು ಬಾಹಿರವಾಗಿ ತಪ್ಪಿಸುವುದು) ಟೆಲಿಫೋನ್ ಸೈಬರ್ ಹಗರಣಗಳನ್ನು ಹುಟ್ಟು ಹಾಕಿದರು. ಫ್ರೆಂಚ್ ಪಂಚ್ ಕಾರ್ಡ್(ಹಿಂದೆ ನಿಮ್ಮ ಪ್ರೋಗ್ರಾಮ್/ಡಾಟಾವನ್ನು ಇದರಲ್ಲಿ ಸ್ಟೋರ್ ಮಾಡುತ್ತಿದ್ದರು) ಕಂಪ್ಯೂಟರ್ ಪರಿಣಿತ ರೆನೆ ಕಾರ್ಮಿಲ್, ನಾಜಿ ಡೇಟಾ ನೋಂದಾವಣೆ ವ್ಯವಸ್ಥೆಯನ್ನು ಹ್ಯಾಕ್ ಮಾಡಿ ನಾಜಿ ಪಂಚ್ ಕಾರ್ಡ್ ಯಂತ್ರಗಳನ್ನು ರಿಪ್ರೊಗ್ರಾಮ್ ಮಾಡಲು ತನ್ನ ಪರಿಣತಿಯನ್ನು ಬಳಸಿದ ಮತ್ತು ಯಹೂದಿ ಜನರನ್ನು ನೋಂದಾಯಿಸಲು ಮತ್ತು ಟ್ರ್ಯಾಕ್ ಮಾಡಲು ನಾಜಿಗಳ ಪ್ರಯತ್ನಗಳನ್ನು ನಿರ್ಬಂಧಿಸಿದ, ಇದರಿಂದ ಸೈಬರ್ ಹ್ಯಾಕಿಂಗ್ ಅನ್ನು ಉತ್ತಮ ಕಾರಣಕ್ಕೆ ಬಳಕೆ ಮಾಡಿ ಎಥಿಕಲ್ ಹ್ಯಾಕಿಂಗ್ ಅನ್ನು ಜಗಕ್ಕೆ ಪರಿಚಯಿಸಿದರು. ಪ್ರಪಂಚದಾದ್ಯಂತ ಸಾಕಷ್ಟು ಸುದ್ದಿ ಮಾಡಿದ ಮೊದಲ ಪ್ರಮುಖ ಸೈಬರ್ ದಾಳಿಯೆಂದರೆ, 1962 ರಲ್ಲಿ ಅಮೇರಿಕಾದ MIT ಯೂನಿವರ್ಸಿಟಿ ವಿದ್ಯಾರ್ಥಿಯಾದ ಅಲೆನ್ ಶೆರ್ ಮಾಡಿದ MIT ಕಂಪ್ಯೂಟರ್ ನೆಟ್‌ವರ್ಕ್‌ಗಳ ಮೇಲಿನ ಸೈಬರ್ ಹ್ಯಾಕಿಂಗ್, ಅವರ ಪಂಚ್ ಕಾರ್ಡ್ ಡೇಟಾಬೇಸ್‌ನಿಂದ ಶಿಕ್ಷಕರ ಪಾಸ್‌ವರ್ಡ್‌ಗಳನ್ನು ಕದಿಯುತ್ತಾರೆ ಮತ್ತು ನಂತರ ಅದನ್ನು ಬಳಸಿಕೊಂಡು ಪ್ರಶ್ನೆ ಪತ್ರಿಕೆಗಳನ್ನು ಕದಿಯುವುದು ಮತ್ತು ನಿಗದಿಪಡಿಸಿದ ಅಂಕಗಳನ್ನು ಮಾರ್ಪಡಿಸುವುದು ಮುಂತಾದ ಸೈಬರ್ ಅಪರಾಧಗಳನ್ನು ಮಾಡುತ್ತಾರೆ.
ಮುಂದಿನ ವಾರ, ಸೈಬರ್ ಕ್ರೈಮ್‌ಗಳ ಇತಿಹಾಸವನ್ನು ವ್ಯಾಖ್ಯಾನಿಸುವ ಇನ್ನು ಹೆಚ್ಚಿನ ಕಥೆಗಳು ಮತ್ತು ಸತ್ಯ ಸಂಗತಿಗಳೊಂದಿಗೆ ಬರುವೆ.