OLX ಸೈಬರ್ ವಂಚನೆಗೆ ಇತ್ತೀಚಿಗೆ ದೆಹಲಿಯ ಮುಖ್ಯಮಂತ್ರಿಯ ಮಗಳು ಮೂವತ್ತು ಸಾವಿರ ರೂಪಾಯಿಗಳನ್ನು ಕಳೆದುಕೊಂಡಿದ್ದಳು. ಇಲ್ಲಿ ಸೈಬರ್ ವಂಚಕರು OLX, Quickr, Facebook ಶಾಪಿಂಗ್ ಇತ್ಯಾದಿ ನೇರ ಸಾಮಾಜಿಕ ಮಾಧ್ಯಮ ಶಾಪಿಂಗ್ ಜಾಲತಾಣಗಳಲ್ಲಿ ಸಾಮಾನ್ಯ ಜನರ ಮುಗ್ಧತೆ, ದುರಾಸೆ, ಅಜಾಗರೂಕತೆ, ಅತಿಯಾದ ಆತ್ಮವಿಶ್ವಾಸ ಮತ್ತು ನಿರ್ಲಕ್ಷ್ಯವನ್ನು ಬಂಡವಾಳವನ್ನಾಗಿಸಿ ಅದೇ ಜನರನ್ನು ವಂಚಿಸಲು ಬಳಸುತ್ತಾರೆ. ಇಲ್ಲಿ ಆಸಕ್ತಿದಾಯಕ ಭಾಗವೆಂದರೆ ವಂಚಕನು ಖರೀದಿದಾರನಾಗಿ ಅಥವಾ ಮಾರಾಟಗಾರನಾಗಿ ನಿಮ್ಮನ್ನು ವಂಚಿಸಬಹುದು, ಆದರೆ ಅವರು ನಿಮ್ಮನ್ನು ವಂಚಿಸುವ ವಿಧಾನವು ಬಹುತೇಕ ಒಂದೇ ಆಗಿರುತ್ತದೆ. ಅದೆಂದರೆ, ಅವರು ಮೊದಲು ನಿಮ್ಮ ವಿಶ್ವಾಸವನ್ನು ಗಳಿಸುತ್ತಾರೆ ಅಥವಾ ತ್ವರಿತ ಘಟನೆಗಳೊಂದಿಗೆ ನಿಮ್ಮನ್ನು ಗೊಂದಲಗೊಳಿಸುತ್ತಾರೆ ಅಥವಾ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುತ್ತಾರೆ ಅಥವಾ ನಿಮ್ಮನ್ನು ಆತುರಪಡಿಸುತ್ತಾರೆ ಅಥವಾ ನಿಮಗೆ ವಂಚನೆ ಮಾಡಲು ತಂತ್ರಜ್ಞಾನವನ್ನು (QR ಕೋಡ್) ಬಳಸುತ್ತಾರೆ ಇತ್ಯಾದಿ ವಿಧಗಳಿಂದ ನಿಮ್ಮನ್ನು ವಂಚಿಸುತ್ತಾರೆ. ನಾನು ಈ ಮೊದಲು ವಿವರಿಸಿದ್ದ QR ಕೋಡ್ ವಂಚನಗೆಗಳು ಅಂಕಣಕ್ಕೆ, ಇದು ಅದರ ಒಂದು ಪ್ರಯೋಗವೆನ್ನಬಹುದು.
OLX ಸೈಬರ್ ವಂಚನೆಗಳನ್ನು ಹೇಗೆ ನಡೆಸಲಾಗುತ್ತದೆ:-
- ವಂಚಕರು OLX ನಲ್ಲಿ ಮಾರಾಟಗಾರರಾಗಿ ಸೈನ್ ಅಪ್ ಮಾಡುತ್ತಾರೆ, ನಿಜವಾದ ಮಾರಾಟಗಾರರ ಆಕರ್ಷಕ ವಸ್ತು ವಿಷಯವನ್ನು ತಮ್ಮದೆಂದು ಮರುಬಳಕೆ ಮಾಡುವ ಮೂಲಕ ನಂಬಿಕೆಯನ್ನು ಗಳಿಸುತ್ತಾರೆ, ಆದರೆ ಪಟ್ಟಿ ಮಾಡಲಾದ ಬೆಲೆಯನ್ನು ಮಾತ್ರ ತುಂಬ ಕಡಿಮೆ ಮಟ್ಟಕ್ಕೆ ಬದಲಾಯಿಸುತ್ತಾರೆ. ಯಾರಾದರು ಆಸಕ್ತಿ ತೋರಿಸಿದರೇ, ವಂಚಕರು ಅವರ ಆಧಾರ್, ಪ್ಯಾನ್ ಸಂಖ್ಯೆ ಅಥವಾ ಬ್ಯಾಂಕ್ ವಿವರಗಳಂತಹ ಖಾಸಗಿ ಮಾಹಿತಿಯನ್ನು ಪಡೆಯುತ್ತಾರೆ ಮತ್ತು ಅದನ್ನು ವಂಚನೆಗೆ ಬಳಸುತ್ತಾರೆ ಅಥವಾ ಮುಂಗಡ ಮೊತ್ತ ಅಥವಾ ಶಿಪ್ಪಿಂಗ್ ಶುಲ್ಕಗಳು ಇತ್ಯಾದಿಯಾಗಿ ಪೂರ್ವ-ಪಾವತಿಯನ್ನು ಮಾಡಲು ಅವರನ್ನು ಆಮಿಷಿಸುತ್ತಾರೆ ಮತ್ತು ಹಣ ಬಂದ ನಂತರ ಪ್ರತಿಕ್ರಿಯಿಸುವುದನ್ನು ನಿಲ್ಲಿಸುತ್ತಾರೆ ಅಥವಾ ಬಲಿಪಶು ತಾನು ವಂಚನೆ ಹೋಗುತ್ತಿದ್ದೇನೆ ಎಂದು ತಿಳಿಯುವವರೆಗೆ ಗಡಿ ಪ್ರವೇಶ ಶುಲ್ಕಗಳು, ಟೋಲ್ ಶುಲ್ಕಗಳು, ಸೇವಾ ಶುಲ್ಕಗಳು ಇತ್ಯಾದಿ ಹೆಸರಿನಲ್ಲಿ ಇನ್ನು ಹೆಚ್ಚಿನ ಹಣವನ್ನು ವಸೂಲಿ ಮಾಡುವುದನ್ನು ಮುಂದುವರಿಸುತ್ತಾರೆ.
- ವಂಚಕರು OLX ಮತ್ತು Quikr ನಂತಹ ವೆಬ್ಸೈಟ್ಗಳಲ್ಲಿ ಉತ್ಪನ್ನವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ವ್ಯಕ್ತಿಯನ್ನು, ಅವರ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಪಡೆಯಲು ಸೇನೆಯ ವ್ಯಕ್ತಿಯ ಸೋಗಿನಲ್ಲಿ ಸಂಪರ್ಕಿಸುತ್ತಾರೆ. ಬಲಿಪಶುವಿಗೆ ನ್ಯಾಯಸಮ್ಮತವಾಗಿ ತೋರುವ ಸಂಭಾಷಣೆಯ ಮೂಲಕ ಪ್ರಾರಂಭಿಸಿ, ಎರಡೂ ಪಕ್ಷಗಳು ಒಂದು ನಿರ್ದಿಷ್ಟ ಬೆಲೆಗೆ ಒಪ್ಪಿಕೊಂಡ ನಂತರ, ವಂಚಕನು ತಾನು ವೈಯಕ್ತಿಕವಾಗಿ ಬರಲು ಸಾಧ್ಯವಿಲ್ಲ ಎಂದು ಹೇಳಿಕೊಂಡು UPI ಮೂಲಕ ಹಣವನ್ನು ಪಾವತಿಸಲು ಒತ್ತಾಯಿಸುತ್ತಾನೆ. ನಂತರ ವಂಚಕನು ಹೇಳಿದ ಮೊತ್ತವನ್ನು ಮಾರಾಟಗಾರನ Paytm ಖಾತೆಗೆ ವರ್ಗಾಯಿಸಲಾಗಿದೆ ಎಂದು ತೋರಿಸಲು ಮಾರಾಟಗಾರನಿಗೆ ನಕಲಿ ಸ್ಕ್ರೀನ್ ಶಾಟ್ ಕಳುಹಿಸುತ್ತಾನೆ. ಯಾವಾಗ ಮಾರಾಟಗಾರನು ತನಗೆ ಇನ್ನು ಹಣ ಬಂದಿಲ್ಲ ಎನ್ನುತ್ತಾನೋ ಅವಾಗ ವಂಚಕನು ಸರಿ ಪಡಿಸುವ ನೆಪದಲ್ಲಿ ಹಣವನ್ನು ಸ್ವೀಕರಿಸಲು ಬಲಿಪಶುವಿಗೆ QR ಕೋಡ್ ಅನ್ನು ಕಳುಹಿಸುತ್ತಾರೆ. ಬಲಿಪಶು QR ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಹಣ ಸ್ವೀಕರಿಸುವ ಬದಲು ಅಲ್ಲಿ ನಮೂದಿಸಿರುವ ಹಣ ಅವನ ಬ್ಯಾಂಕ್ ಖಾತೆಯಿಂದ ವಂಚಕನ ಖಾತೆಗೆ ಹೋಗುತ್ತದೆ.
OLX ಸೈಬರ್ ವಂಚನೆಯಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು:-
- ಹಣವನ್ನು ಸ್ವೀಕರಿಸಲು ಎಂದಿಗೂ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ.
- ಪಾವತಿ ಮಾಡುವ ಅಥವಾ ಸ್ವೀಕರಿಸುವ ಮೊದಲು ಖರೀದಿದಾರ/ಮಾರಾಟಗಾರರ ರುಜುವಾತುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ.
- ಖರೀದಿದಾರ/ಮಾರಾಟಗಾರನು ಅಸಮಂಜಸ ಆತುರ ತೋರಿಸಿದರೆ ಅಥವಾ ಸೇನೆ ಅಥವಾ ಪ್ರತಿಷ್ಠಿತ ಸರ್ಕಾರಿ ಉದ್ಯೋಗದ ಗುರುತಿನ ಚೀಟಿಗಳನ್ನು ಕೇಳದೇ ತೋರಿಸಿದರೆ ಅವನು ಭಾಗಶಃ ವಂಚಕನಾಗಿರಬಹುದು.
- ಅಪರಿಚಿತರಿಂದ ಬಂದ ಯಾವುದೇ ಸಂದೇಶದಲ್ಲಿರುವ ಹೈಪರ್ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ. ನೀವು ಹಣವನ್ನು ಕಳೆದುಕೊಳ್ಳಬಹುದು ಅಥವಾ ನಿಮ್ಮ ಉಪಕರಣಕ್ಕೆ ವೈರಸ್ ಹಿಡಿಯಬಹುದು.
- ಮುಂಗಡ ಪಾವತಿಯನ್ನು ಸ್ವೀಕರಿಸುವುದನ್ನು ಅಥವಾ ಮಾಡುವುದನ್ನು ಮಾಡಬೇಡಿ. ಇದು ನಿಮ್ಮನ್ನು ವಂಚಿಸುವ ಬಲೆಯಾಗಿರಬಹುದು.
- ಅಪರಿಚಿತರೊಂದಿಗೆ ಆಧಾರ್, ಪ್ಯಾನ್ ಸಂಖ್ಯೆ ಅಥವಾ ಬ್ಯಾಂಕ್ ವಿವರಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ, ನಿಜವಾಗಿಯೂ ಅಗತ್ಯವಿದ್ದರೆ ಗುರುತಿಗಾಗಿ ಮತದಾರರ ಐಡಿ ಅಥವಾ ಚಾಲನಾ ಪರವಾನಗಿಯನ್ನು ಮಾತ್ರ ಹಂಚಿಕೊಳ್ಳಿ.
- ಚೆಕ್ ಅನ್ನು ಎಂದಿಗೂ ಸ್ವೀಕರಿಸಬೇಡಿ ಅದು ಬೌನ್ಸ್ ಆಗಬಹುದು, ಹಾಗೂ ನೀವು ತೆಗೆದುಕೊಂಡರೆ, ಹಣ ಸಂದಾಯವಾದ ನಂತರವೇ ನೀವು ಸರಕುಗಳನ್ನು ಕೊಡುವಿರೆಂದು ತಿಳಿಸಿರಿ.
ನೀವು OLX ಸೈಬರ್ ವಂಚನೆಗೆ ಒಳಗಾಗಿದ್ದರೆ :-
ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ದೂರು ಸಲ್ಲಿಸಿ. ನೀವು ಯಾರೊಂದಿಗಾದರೂ ಆಧಾರ್ ಅನ್ನು ಹಂಚಿಕೊಂಡಿದ್ದರೆ, uidai.gov.in ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಿ. ಆಯಾ ಸಾಮಾಜಿಕ ಮಾಧ್ಯಮ, ವೆಬ್ಸೈಟ್ನಲ್ಲಿನ ನಕಲಿ ಖಾತೆ ಅಥವಾ ಪ್ರೊಫೈಲ್ ಬಗ್ಗೆ ಮತ್ತು ಅದರ ಹೋಸ್ಟಿಂಗ್ ಸೇವಾ ಪೂರೈಕೆದಾರರೊಂದಿಗೆ ನಕಲಿ ವೆಬ್ಸೈಟ್ಗಳ ಬಗ್ಗೆ ದೂರು ನೀಡಿ ಮತ್ತು ಅದನ್ನು ನಿರ್ಬಂಧಿಸಲು ಹೇಳಿ. ಹಣವನ್ನು ಫ್ರೀಜ್ ಮಾಡಲು ಸಂಬಂಧಿಸಿದ ಬ್ಯಾಂಕ್ಗೆ ಕರೆ ಮಾಡಿ ಮತ್ತು ದೂರು ನೀಡಿ. QR ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ಅಥವಾ ಹೈಪರ್ಲಿಂಕ್ ಅನ್ನು ಒತ್ತಿದ ನಂತರ ಮಾಲ್ವೇರ್/ವೈರಸ್ ದಾಳಿಯ ಬಗ್ಗೆ ನಿಮಗೆ ಸಂದೇಹವಿದ್ದರೆ, ಸಾಧನವನ್ನು ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.
ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.