ಕಳೆದ ವಾರ ಪರಿಚಿತರೊಬ್ಬರು ಗಾಬರಿಯಿಂದ ಕರೆ ಮಾಡಿದರು: “ಫಾಸಬುಕ್ನಲ್ಲಿ ಒಂದು ಸುದ್ದಿ ಓದಿದೆ, ಸುಪ್ರೀಂ ಕೋರ್ಟ್ ಇತ್ತೀಚಿಗೆ ಹೊರಡಿಸಿದ ಹೊಸ ಆಜ್ಞೆಯ ಪ್ರಕಾರ ನಾವು ಮನೆಯಲ್ಲಿ ರಸೀದಿ ಇಲ್ಲದೆ ಯಾವುದೇ ಚಿನ್ನವನ್ನು ಇಟ್ಟಿಕ್ಕೊಂಡಿದ್ದರೆ ಅದಕ್ಕೆ ತೆರಿಗೆ ಕಟ್ಟಬೇಕಂತೆ ಹೌದ?” ಎಂದು ಕೇಳಿದರು. ಇದು ಬಂಗಾರವನ್ನು ಕೇವಲ ಆಭರಣವಾಗಿ ನೋಡದೆ ಭಾವನೆ, ಕುಟುಂಬದ ಗೌರವ ಹಾಗೂ ಸಂಕಷ್ಟದ ಕಾಲದ ಉಳಿತಾಯವೆಂದು ನಂಬಿರುವ ಕೋಟ್ಯಂತರ ಭಾರತೀಯರ ಮನದಾಳದ ನೈಜ ಭಯ. ಭಾರತೀಯ ಹೆಣ್ಣುಮಕ್ಕಳ ‘ಸ್ತ್ರೀಧನ’ಕ್ಕೆ ನಮ್ಮ ಪರಂಪರೆಯಲ್ಲಿ ಎಷ್ಟರಮಟ್ಟಿಗೆ ಸ್ಥಾನವಿದೆಯೋ, ಅಷ್ಟೇ ಗೊಂದಲಗಳು ನಮ್ಮ ತೆರಿಗೆ ಕಾನೂನುಗಳ ಸುತ್ತಲೂ ಬೆಳೆದುಕೊಂಡಿವೆ. ಹಾಗೆಯೇ ನನಗೆ ವಿದೇಶದಿಂದ ಡ್ಯೂಟಿ ಇಲ್ಲದೆ ಎಷ್ಟು ಚಿನ್ನ ತರಬಹುದು ಎಂಬ ಪ್ರಶ್ನೆಗಳು ಬರುತ್ತಿರುತ್ತವೆ, ಈ ಅಂಕಣದಲ್ಲಿ ನಾನು ಇವೆರಡು ಪ್ರಶ್ನೆಗಳಿಗೆ ಕಾನೂನು, ಆದಾಯ ತೆರಿಗೆ ಮತ್ತು ನ್ಯಾಯಾಲಯಗಳು ಏನು ಹೇಳುತ್ತವೆ ಎಂಬುದನ್ನು ಸರಳ ಬಾಷೆಯಲ್ಲಿ ತಿಳಿಸಲು ಪ್ರಯತ್ನಿಸುವೆ.
ಸರಳವಾಗಿ ಹೇಳಬೇಕೆಂದರೆ, ಭಾರತದಲ್ಲಿ 1990ರಲ್ಲಿ ಚಿನ್ನದ ನಿಯಂತ್ರಣ ಕಾಯ್ದೆ ರದ್ದಾದ ಮೇಲೆ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಎಂಬುದಕ್ಕೆ ಯಾವುದೇ ಕಾನೂನು ಮಿತಿ ಇಲ್ಲ. ನೀವು ನೂರು ಗ್ರಾಂ ಇಟ್ಟುಕೊಳ್ಳಬಹುದು ಅಥವಾ ಐದು ಕಿಲೋ, ಮುಖ್ಯವಾದುದು ಅದರ ಮೂಲವನ್ನು ವಿವರಿಸಬಲ್ಲಿರಾ ಎಂಬುದು. ಚಿನ್ನ ಘೋಷಿತ ಆದಾಯದಿಂದ, ಪಿತ್ರಾರ್ಜಿತದಿಂದ, ಮದುವೆ ಅಥವಾ ಕುಟುಂಬ ಸಮಾರಂಭಗಳಲ್ಲಿ ಬಂದ ಉಡುಗೊರೆಯಿಂದ, ಅಥವಾ ವರ್ಷಗಳ ಕಾಲದ ಮನೆಯ ಉಳಿತಾಯದಿಂದ ಬಂದಿರಬೇಕು. 2016ರ ಡಿಸೆಂಬರ್ 1ರಂದು ಹಣಕಾಸು ಸಚಿವಾಲಯ ನೀಡಿದ ಸ್ಪಷ್ಟನೆ ಕೂಡ ಇದೇ ಮಾತನ್ನು ಹೇಳಿತ್ತು: ವಿವರಿಸಬಹುದಾದ ಆದಾಯದಿಂದ, ಅಥವಾ ಪಿತ್ರಾರ್ಜಿತವಾಗಿ ಬಂದಿದ್ದರೆ, ಚಿನ್ನದ ಒಡವೆ ಇಟ್ಟುಕೊಳ್ಳುವುದಕ್ಕೆ ನಿಗದಿತ ಮಿತಿ ಇಲ್ಲ.
ಹಾಗಾದರೆ ವಿವಾಹಿತ ಮಹಿಳೆಗೆ 500, ಅವಿವಾಹಿತ ಮಹಿಳೆಗೆ 250 ಮತ್ತು ವಿವಾಹಿತ ಅಥವಾ ಅವಿವಾಹಿತ ಪುರುಷರಿಗೆ 100 ಗ್ರಾಂಗಳ ಲೆಕ್ಕ ಎಲ್ಲಿಂದ ಬಂತು? ಅದು 1994ರ ಮೇ 11ರಂದು ಕೇಂದ್ರ ನೇರ ತೆರಿಗೆ ಮಂಡಳಿ (CBDT) ಹೊರಡಿಸಿದ ಸೂಚನೆ ಸಂಖ್ಯೆ 1916 ಯಿಂದ ಬಂದಿದ್ದು. ಆದಾಯ ತೆರಿಗೆ ಶೋಧದ ವೇಳೆ ಕಂಡುಬರುವ ಒಡವೆಗಳನ್ನು ಯಾವ ಪ್ರಮಾಣದವರೆಗೆ ಸಾಮಾನ್ಯವಾಗಿ ವಶಪಡಿಸಿಕೊಳ್ಳಬಾರದು ಎಂಬುದೇ ಅದರ ಉದ್ದೇಶ. ಅದರಂತೆ ವಿವಾಹಿತ ಮಹಿಳೆಯ ಬಳಿ 500 ಗ್ರಾಂ, ಅವಿವಾಹಿತ ಮಹಿಳೆಯ ಬಳಿ 250 ಗ್ರಾಂ ಮತ್ತು ಕುಟುಂಬದ ಪ್ರತಿ ಪುರುಷ ಸದಸ್ಯನ ಬಳಿ 100 ಗ್ರಾಂ ಚಿನ್ನದ ಒಡವೆ ಇದ್ದರೆ, ಆದಾಯದ ದಾಖಲೆಗಳಿಗೆ ತಕ್ಷಣ ಹೊಂದಿಕೆಯಾಗುತ್ತಿಲ್ಲವೆಂದು ಮಾತ್ರ ಅವುಗಳನ್ನು ವಶಪಡಿಸಿಕೊಳ್ಳಬಾರದು. ಕುಟುಂಬದ ಸಾಮಾಜಿಕ ಸ್ಥಿತಿ, ಸಂಪ್ರದಾಯ ಮತ್ತು ಇತರ ಸಂದರ್ಭಗಳನ್ನು ನೋಡಿ ಇದಕ್ಕಿಂತ ಹೆಚ್ಚಿನ ಒಡವೆಯನ್ನೂ ವಶಪಡಿಸಿಕೊಳ್ಳದೆ ಇರಲು ಶೋಧಾಧಿಕಾರಿಗೆ ಅಧಿಕಾರವಿದೆ. ಇದು “ಇಷ್ಟು ಚಿನ್ನದವರೆಗೆ ಬಿಲ್ ಬೇಡ”ಎನ್ನುವ ಕಾನೂನು ಅಲ್ಲ; ಶೋಧದ ವೇಳೆ ಒಡವೆ ವಶಪಡಿಸಿಕೊಳ್ಳುವ ಕ್ರಮಕ್ಕೆ ನೀಡಿದ ಮಾರ್ಗಸೂಚಿ.
ನ್ಯಾಯಾಲಯಗಳ ತೀರ್ಪುಗಳಲ್ಲಿಯೂ ಈ ವಿಚಾರ ಚರ್ಚೆಯಾಗಿದೆ. 1999ರಲ್ಲಿ ಕರ್ನಾಟಕ ಹೈಕೋರ್ಟ್ನ ‘ಎಸ್. ಪತಿದೇವಿ ವಿರುದ್ಧ ಆದಾಯ ತೆರಿಗೆ ಅಧಿಕಾರಿ’ ಪ್ರಕರಣವು CBDT ಸೂಚನೆಯಲ್ಲಿನ ಪ್ರಮಾಣಕ್ಕೆ ಮಹತ್ವ ನೀಡಿದ ತೀರ್ಪುಗಳ ಪೈಕಿ ಒಂದಾಗಿದೆ. 2011ರಲ್ಲಿ ದೆಹಲಿ ಹೈಕೋರ್ಟ್ನ ‘ಅಶೋಕ್ ಚಡ್ಡಾ’ ಪ್ರಕರಣದಲ್ಲಿ, ಸುಮಾರು 25ರಿಂದ 30 ವರ್ಷಗಳ ದಾಂಪತ್ಯ ಜೀವನದಲ್ಲಿ ಪತ್ನಿಗೆ ಸ್ತ್ರೀಧನವಾಗಿ ಮತ್ತು ವಿವಿಧ ಸಂದರ್ಭಗಳಲ್ಲಿ ಬಂದಿದ್ದ 906.9 ಗ್ರಾಂ ಒಡವೆ ಅಸಾಮಾನ್ಯವಲ್ಲ ಎಂದು ನ್ಯಾಯಾಲಯ ಹೇಳಿತು. ಕೇವಲ ಊಹೆಯ ಆಧಾರದಲ್ಲಿ ಒಂದು ಪ್ರಮಾಣವನ್ನು ಒಪ್ಪಿ ಉಳಿದುದನ್ನು ತೆರಿಗೆಗೆ ಸೇರಿಸುವುದು ಸರಿಯಲ್ಲ ಎಂದು ಅದು ಅಭಿಪ್ರಾಯಪಟ್ಟಿತು. 2026ರ ಜುಲೈ 30ರಂದು ‘ಚಿಕ್ಕಹನುಮಪ್ಪ ಹರೀಶಬಾಬು’ ಪ್ರಕರಣದಲ್ಲಿ, ಕುಟುಂಬದ ಫೋಟೋಗಳು ಮಾತ್ರ ಸಾಕಾಗುವುದಿಲ್ಲ ಎಂದು ನ್ಯಾಯಮಂಡಳಿ ಹೇಳಿ, ಸುಮಾರು ₹1.03 ಕೋಟಿ ಮೌಲ್ಯದ ಸೇರ್ಪಡೆಯನ್ನು ಎತ್ತಿಹಿಡಿಯಿತು. ಅಂದರೆ, ಕುಟುಂಬದ ಸಂಪ್ರದಾಯವನ್ನು ನ್ಯಾಯಾಲಯಗಳು ಪರಿಗಣಿಸುತ್ತವೆ; ಆದರೆ ವಿವರಣೆ ಮತ್ತು ಸಾಕ್ಷಿಯನ್ನೂ ಕೇಳುತ್ತವೆ. ಈ ಚರ್ಚೆಗೆ ಹೊಸ ತಿರುವು ನೀಡಿದ್ದು 2026ರ ನವೆಂಬರ್ 2ರ ಸುಪ್ರೀಂ ಕೋರ್ಟ್ ಆದೇಶ(ಇದನ್ನೇ ಆ ನನ್ನ ಪರಿಚಿತರು ಓದಿ ಹೆದರಿಕ್ಕೊಂಡಿದ್ದು). ‘ಬಿಹಾರ ರಾಜ್ಯ ವಿರುದ್ಧ ಫುಲ್ಪರಿ ಕುಮಾರಿ’ ಪ್ರಕರಣದಲ್ಲಿ, ಆದಾಯಕ್ಕೆ ಮೀರಿದ ಆಸ್ತಿ ಹೊಂದಿದ ಆರೋಪ ಎದುರಿಸುತ್ತಿದ್ದ ಸರ್ಕಾರಿ ಅಧಿಕಾರಿಣಿ 500 ಮತ್ತು 250 ಗ್ರಾಂಗಳ CBDT ಮಾರ್ಗಸೂಚಿಯನ್ನು ತೋರಿಸಿ ಪ್ರಕರಣ ರದ್ದುಪಡಿಸಲು ಯತ್ನಿಸಿದ್ದರು. ಪಾಟ್ನಾ ಹೈಕೋರ್ಟ್ ಅದನ್ನು ಒಪ್ಪಿಕೊಂಡಿತ್ತು. ಆದರೆ ಸುಪ್ರೀಂ ಕೋರ್ಟ್, ಇಷ್ಟು ಚಿನ್ನ ಇಟ್ಟುಕೊಳ್ಳಲು ಅವಕಾಶವಿದೆ ಎನ್ನುವ ಸರ್ಕಾರಿ ಸೂಚನೆ ತೋರಿಸುವುದರಿಂದ ಆ ಚಿನ್ನದ ಮೂಲ ಅಥವಾ ಆದಾಯಕ್ಕೆ ಸಂಬಂಧಿಸಿದ ಲೆಕ್ಕ ಸಾಬೀತಾಗುವುದಿಲ್ಲ ಎಂದಿತು. ಹಾಗಾಗಿ ಸಾಧ್ಯವಾದಷ್ಟು ನಿಮ್ಮ ಮನೆಯಲ್ಲಿರುವ ಚಿನ್ನದ ಮೂಲದ ಬಗ್ಗೆ ರಸೀದಿ ಅಥವಾ ವಿಲ್ ಅಥವಾ ಗಿಫ್ಟ್ ಡೀಡ್ ನಂತಹ ದಾಖಲೆ ಇಟ್ಟಿಕ್ಕೋಳ್ಳುವುದು ಉತ್ತಮ.
ಅನೇಕ ಕನ್ನಡಿಗರು ದುಬೈ, ಸಿಂಗಾಪುರ ಅಥವಾ ಕೊಲ್ಲಿ ರಾಷ್ಟ್ರಗಳಿಗೆ ಹೋದಾಗ “ಅಲ್ಲಿ ಬಂಗಾರ ಅಗ್ಗ, ತರಬಹುದೇ?” ಎಂದು ಯೋಚಿಸುತ್ತಾರೆ. ಆದರೆ ಅಲ್ಲಿಂದ ತರುವಾಗ ಪ್ರಸ್ತುತ ಬ್ಯಾಗೇಜ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇವತ್ತಿನ ನಿಯಮಗಳ ಪ್ರಕಾರ, ಚಿನ್ನ ತರುವ ಪ್ರಯಾಣಿಕರು ಕನಿಷ್ಠ ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಿದೇಶದಲ್ಲಿ ನೆಲೆಸಿರಬೇಕು, ಅಂತಹ ಮಹಿಳೆಯರು 40 ಗ್ರಾಂ ಮತ್ತು ಪುರುಷರು 20 ಗ್ರಾಂ ವರೆಗಿನ ಆಭರಣವನ್ನು ಸುಂಕ ರಹಿತವಾಗಿ ತರಬಹುದು. ಈ ಸೌಲಭ್ಯ ಸಾಮಾನ್ಯವಾಗಿ ಧರಿಸುವ ಆಭರಣಗಳಿಗೆ; ಚಿನ್ನದ ಗಟ್ಟಿ ಅಥವಾ ನಾಣ್ಯಗಳಿಗೆ ಅಲ್ಲ. ಸಂಶಯವಿದ್ದರೆ ಏರ್ಪೋರ್ಟ್ ನಲ್ಲಿರುವ ರೆಡ್ ಚಾನೆಲ್ ಮೂಲಕ ಹೊರಬಂದು ತಂದಿರುವ ಚಿನ್ನದ ಬಗ್ಗೆ ಘೋಷಿಸುವುದು ಸೂಕ್ತ, ಇಲ್ಲದಿದ್ದರೆ ಡ್ಯೂಟಿಯ ಜೊತೆ ಪೆನಾಲ್ಟಿ ಕೂಡ ಬರಿಸಬೇಕಾಗಬಹುದು, ಹಾಗು ಚಿನ್ನದ ಮೊತ್ತದ ಮೇಲೆ ಅದು ಕ್ರಿಮಿನಲ್ ಅಪರಾಧ ಕೂಡ ಆಗಬಹುದು.

