Site icon Welcome to CYBER MITHRA

ಇಂಟರ್ನೆಟ್‌ನಲ್ಲಿ ಸಿಕ್ಕಿದರೆ ಉಚಿತವೇ? ಸಾಮಾಜಿಕ ಮಾಧ್ಯಮದಲ್ಲಿ ಕಾಪಿರೈಟ್ ಸ್ಟ್ರೈಕ್!

ಕಾಪಿರೈಟ್ ಸ್ಟ್ರೈಕ್

ಇತ್ತೀಚಿನ ದಿನಗಳಲ್ಲಿ ನಮ್ಮ ಊರಿನ ಅನೇಕ ಯುವಕರು, ಗೃಹಿಣಿಯರು, ವ್ಯಾಪಾರಿಗಳು — ಎಲ್ಲರೂ YouTube, Instagram, Facebook ನಲ್ಲಿ ವೀಡಿಯೋಸ್ ಮತ್ತು ರೀಲ್ಸ್ ಮಾಡಲು ಶುರು ಮಾಡಿದ್ದಾರೆ. ಅಡುಗೆ ವಿಡಿಯೋ, ಹಾಡು, ವಿಮರ್ಶೆ, ಹಾಸ್ಯ ತುಣುಕು, ಕ್ರಿಕೆಟ್ ಹೈಲೈಟ್ಸ್ — ಹೀಗೆ ಎಲ್ಲ ರೀತಿಯ ವಿಷಯಗಳನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಂತಹ ಹಲವರಿಗೆ ಇದ್ದಕ್ಕಿದ್ದಂತೆ ಒಂದು ದಿನ ಎಚ್ಚರಿಕೆ ಬರುತ್ತದೆ — “ನಿಮ್ಮ ವಿಡಿಯೋ ತೆಗೆಯಲಾಗಿದೆ” ಅಥವಾ “ಕಾಪಿರೈಟ್ ಸ್ಟ್ರೈಕ್ ಬಂದಿದೆ” ಎಂದು. ಆಗ ಅವರ ಮನಸ್ಸಿನಲ್ಲಿ ಒಂದೇ ಪ್ರಶ್ನೆ — “ನಾನು ಏನು ತಪ್ಪು ಮಾಡಿದೆ?”, ನಿಮಗೂ ಈ ರೀತಿ ಆಗಿದ್ಯಾ?. ಅನೇಕ ಬಾರಿ ಜನರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದುಕೊಂಡರೂ, ಕಾಪಿರೈಟ್ ಸ್ಟ್ರೈಕ್ ನಿಂದ ಅವರ ವಿಡಿಯೋ ತೆಗೆದುಹಾಕಲ್ಪಡುತ್ತದೆ ಅಥವಾ ಖಾತೆಯೇ ಸ್ಥಗಿತಗೊಳ್ಳುತ್ತದೆ.

ನಮ್ಮಲ್ಲಿ ಒಂದು ದೊಡ್ಡ ತಪ್ಪು ಕಲ್ಪನೆಯಿದೆ – “ಇಂಟರ್ನೆಟ್‌ನಲ್ಲಿ ಸಿಗುವ ಫೋಟೋಗಳು, ಲೇಖನಗಳು, ಯೂಟ್ಯೂಬ್‌ನಲ್ಲಿ ಸಿಗುವ ವಿಡಿಯೋಗಳು ಉಚಿತವಾಗಿ ಲಭ್ಯವಿವೆ, ಹಾಗಾಗಿ ನಾವು ಅದನ್ನು ಹೇಗೆ ಬೇಕಾದರೂ ಬಳಸಬಹುದು” ಎಂದುಕೊಳ್ಳುತ್ತಾರೆ. ಆದರೆ ನೆನಪಿಡಿ, ಇಂಟರ್ನೆಟ್‌ನಲ್ಲಿ ವೀಕ್ಷಿಸಲು ಸಿಗುವ ಪ್ರತಿಯೊಂದು ವಸ್ತುವಿಗೂ ಒಬ್ಬ ಮಾಲೀಕನಿರುತ್ತಾನೆ. ಕೆಲವರು ವಿಡಿಯೋ ಕೆಳಗೆ ‘ಕ್ರೆಡಿಟ್ಸ್: ಅಸಲಿ ಮಾಲೀಕರಿಗೆ ಸಲ್ಲುತ್ತದೆ’ಎಂದು ಬರೆಯುತ್ತಾರೆ. ಇನ್ನು ಕೆಲವರು ‘ನಾನು ಕೇವಲ ಮನೋರಂಜನೆಗಾಗಿ ಮಾಡಿದ್ದೇನೆ, ಹಣ ಗಳಿಸುತ್ತಿಲ್ಲ’ ಎಂದು ಡಿಸ್ಕ್ಲೈಮರ್ ಹಾಕುತ್ತಾರೆ. ಆದರೆ ಕಾನೂನಿನ ಪ್ರಕಾರ, ಇಂತಹ ಯಾವುದೇ ಸಾಲುಗಳು ನಿಮ್ಮನ್ನು ಶಿಕ್ಷೆಯಿಂದ ರಕ್ಷಿಸುವುದಿಲ್ಲ. ಅನುಮತಿ ಇಲ್ಲದೆ ಬಳಸುವುದು ಕಾನೂನುಬದ್ಧವಾಗಿ ಅಪರಾಧವೇ ಸರಿ.

ಹೀಗಾದರೆ ಕಾಪಿರೈಟ್ ಸ್ಟ್ರೈಕ್ ಎಂದರೇನು? ಅದು ಏಕೆ ಬರುತ್ತದೆ? ಭಾರತದ ಕಾನೂನು ಏನು ಹೇಳುತ್ತದೆ? ಅದರಿಂದ ಹೇಗೆ ರಕ್ಷಿಸಿಕೊಳ್ಳಬೇಕು? ನಿಮ್ಮ ಪ್ರತಿಕ್ರಿಯೆ ಏನಿರಬೇಕು ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ.

ಕಾಪಿರೈಟ್ ಎಂದರೇನು?

ಕಳೆದ ಲೇಖನದಲ್ಲಿ ನಾನು ವಿವಿಧ ಬೌದ್ಧಿಕ ಆಸ್ತಿ ಹಕ್ಕುಗಳ (Intellectual Property Rights – IPR) ಬಗ್ಗೆ ತಿಳಿಸಿಕೊಡುತ್ತಾ ಕಾಪಿರೈಟ್ ಎಂದರೇನು ಎಂದು ಸುದೀರ್ಘವಾಗಿ ತಿಳಿಸಿಕೊಟ್ಟಿದ್ದೆ, ಅದನ್ನು ಓದಲು ನೀವು ನನ್ನ ದ್ವಿಭಾಷಾ ಬ್ಲಾಗ್ www.cybermithra.in ಸಂದರ್ಶಿಸಿ. ಅದನ್ನು ಇನ್ನೊಮ್ಮೆ ಇಲ್ಲಿ ಸರಳವಾಗಿ ತಿಳಿಸುವೆ. ಒಬ್ಬ ವ್ಯಕ್ತಿ ತನ್ನ ಬುದ್ಧಿಶಕ್ತಿ ಮತ್ತು ಸೃಜನಶೀಲತೆಯಿಂದ ರಚಿಸಿದ ಕೃತಿ ಮೇಲೆ ಅವನಿಗೆ ದೊರೆಯುವ ಕಾನೂನುಬದ್ಧ ಹಕ್ಕನ್ನು ‘ಕಾಪಿರೈಟ್’ ಅಥವಾ ‘ಹಕ್ಕುಸ್ವಾಮ್ಯ’ ಎಂದು ಕರೆಯುತ್ತಾರೆ. ಉದಾಹರಣೆಗೆ, ನೀವು ಒಂದು ಹಾಡು ರಚಿಸಿದರೆ, ಚಿತ್ರ ತೆಗೆದರೆ, ಕಥೆ ಬರೆದರೆ ಅದು ನಿಮ್ಮದು. ಇತರರು ಅದನ್ನು ನಿಮ್ಮ ಅನುಮತಿ ಇಲ್ಲದೆ ಬಳಸಬಾರದು.  “ನನ್ನ ಕೃತಿ, ನನ್ನ ಹಕ್ಕು.” ಇದೇ ಕಾಪಿರೈಟ್‌ನ ಸರಳ ಅರ್ಥ. ಕಾಪಿರೈಟ್ ನಿಮ್ಮ ಸಾಹಿತ್ಯ, ಸಂಗೀತ, ಸಿನಿಮಾ, ಚಿತ್ರಕಲೆ, ಛಾಯಾಚಿತ್ರ, ಸಾಫ್ಟ್‌ವೇರ್, ವಿಡಿಯೋ ಮತ್ತು ಕವನವನ್ನು ನಿಮ್ಮ ಜೀವಮಾನ + ೬೦ ವರ್ಷಗಳವರೆಗೆ ರಕ್ಷಣೆ ಕೊಡುತ್ತದೆ.

ಕಾಪಿರೈಟ್ ಸ್ಟ್ರೈಕ್ ಎಂದರೇನು?

ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ನೀವು ಇನ್ನೊಬ್ಬರ ಕಾಪಿರೈಟ್ ಹೊಂದಿರುವ ವಿಷಯವನ್ನು ಅನುಮತಿ ಇಲ್ಲದೆ ಬಳಸಿದರೆ, ಆ ಹಕ್ಕುದಾರರು ನಿಮ್ಮ ವಿರುದ್ಧ ದೂರು ಸಲ್ಲಿಸಬಹುದು. ಈ ದೂರಿನ ಆಧಾರದ ಮೇಲೆ ವೇದಿಕೆ ನಿಮ್ಮ ವಿಷಯವನ್ನು ತೆಗೆದುಹಾಕಬಹುದು. ಇದನ್ನೇ ಸಾಮಾನ್ಯವಾಗಿ “ಕಾಪಿರೈಟ್ ಸ್ಟ್ರೈಕ್” ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ನೀವು ಹೊಸ ಚಲನಚಿತ್ರದ ಹಾಡನ್ನು ನಿಮ್ಮ ವಿಡಿಯೋದಲ್ಲಿ ಬಳಸಿದ್ದೀರಿ ಎಂದುಕೊಳ್ಳಿ. ಆ ಹಾಡಿನ ಹಕ್ಕು ಸಂಗೀತ ಕಂಪನಿಗೆ ಸೇರಿರುತ್ತದೆ. ಆ ಕಂಪನಿಯು ದೂರು ನೀಡಿದರೆ, ನಿಮ್ಮ ವಿಡಿಯೋ ಅಳಿಸಬಹುದು ಅಥವಾ ನಿಮ್ಮ ಖಾತೆಗೆ ಸ್ಟ್ರೈಕ್ ಬರಬಹುದು.

ಸಾಮಾಜಿಕ ಮಾಧ್ಯಮದಲ್ಲಿ ಕಾಪಿರೈಟ್ ಸ್ಟ್ರೈಕ್ ಹೇಗೆ ಕೆಲಸ ಮಾಡುತ್ತದೆ?

೧. ಕಾಪಿರೈಟ್ ಕ್ಲೈಮ್ : ಇದು ಒಂದು ರೀತಿಯ ಮೃದುವಾದ ಎಚ್ಚರಿಕೆ. ನಿಮ್ಮ ವಿಡಿಯೋ ತೆಗೆಯಲ್ಪಡುವುದಿಲ್ಲ, ಆದರೆ ನಿಮ್ಮ ವಿಡಿಯೋದಿಂದ ಬರುವ ಹಣ (ಜಾಹೀರಾತು ಆದಾಯ) ಮೂಲ ಮಾಲೀಕನಿಗೆ ಹೋಗುತ್ತದೆ ಅಥವಾ ವಿಡಿಯೋ ಕೆಲವು ದೇಶಗಳಲ್ಲಿ ತೋರಿಸಲ್ಪಡುವುದಿಲ್ಲ.

೨. ಕಾಪಿರೈಟ್ ಸ್ಟ್ರೈಕ್ : ಇದು ನೇರ ದೂರು. ಮೂಲ ಮಾಲೀಕನು “DMCA Takedown” ಎಂಬ ಕಾನೂನಿನ ಅಡಿ ದೂರು ಸಲ್ಲಿಸುತ್ತಾನೆ. ನಿಮ್ಮ ವಿಡಿಯೋ ತೆಗೆಯಲ್ಪಡುತ್ತದೆ. ಒಂದು ಸ್ಟ್ರೈಕ್ ಬಂದರೆ ನಿಮ್ಮ ಚಾನೆಲ್‌ಗೆ ಕೆಲ ಹೊತ್ತಿನ ತೊಂದರೆ; ಆದರೆ ಮೂರು ಸ್ಟ್ರೈಕ್ ಬಂದರೆ ನಿಮ್ಮ ಇಡೀ ಚಾನೆಲ್ ಶಾಶ್ವತವಾಗಿ ಮುಚ್ಚಲ್ಪಡುತ್ತದೆ. ಸಾಮಾನ್ಯವಾಗಿ ೯೦ ದಿನಗಳಲ್ಲಿ ಸ್ಟ್ರೈಕ್ ಅವಧಿ ಮುಗಿಯುತ್ತದೆ, ಆದರೆ ಆದ ಗಂಭೀರ ಪರಿಣಾಮಗಳು ದೀರ್ಘ ಕಾಲ ಉಳಿಯಬಹುದು.

೩. ಕಾನೂನು ಕ್ರಮ : ಬಹಳ ತೀವ್ರ ಪ್ರಕರಣಗಳಲ್ಲಿ ಮೂಲ ಮಾಲೀಕರು ನ್ಯಾಯಾಲಯಕ್ಕೆ ಹೋಗಬಹುದು. ದಂಡ, ಪರಿಹಾರ ನೀಡಬೇಕಾಗಬಹುದು.

ಯೌಟ್ಯೂಬ್ ತನ್ನ ವೇದಿಕೆಯಲ್ಲಿ “Content ID” ಎಂಬ ಒಂದು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತದೆ. ನೀವು ವಿಡಿಯೋ ಅಪ್‌ಲೋಡ್ ಮಾಡಿದ ತಕ್ಷಣ, ಈ ಯಂತ್ರ ನಿಮ್ಮ ವಿಡಿಯೋದ ಪ್ರತಿಯೊಂದು ಸೆಕೆಂಡನ್ನೂ ಪರಿಶೀಲಿಸುತ್ತದೆ. ಅದರಲ್ಲಿ ಯಾರಾದರೂ ಮೊದಲೇ ನೋಂದಾಯಿಸಿದ ಹಾಡು, ಸಿನಿಮಾ ತುಣುಕು, ಅಥವಾ ಇನ್ನಾವುದೇ ವಿಷಯ ಕಂಡುಬಂದರೆ — ತಕ್ಷಣ ಎಚ್ಚರಿಕೆ ಕಳಿಸುತ್ತದೆ. ನಿಮ್ಮ ಚಾನೆಲ್‌ಗೆ ಮೊದಲ ಸ್ಟ್ರೈಕ್ ಬಂದಾಗ, ಯೂಟ್ಯೂಬ್ ನಿಮಗೆ ಒಂದು ಎಚ್ಚರಿಕೆ ನೀಡುತ್ತದೆ. ಒಂದು ವಾರದ ಮಟ್ಟಿಗೆ ನಿಮಗೆ ಹೊಸ ವಿಡಿಯೋ ಅಪ್‌ಲೋಡ್ ಮಾಡಲು, ಲೈವ್ ಸ್ಟ್ರೀಮ್ ಮಾಡಲು ಅವಕಾಶ ಸಿಗುವುದಿಲ್ಲ. ಈ ಸ್ಟ್ರೈಕ್ ನಿಮ್ಮ ಖಾತೆಯಲ್ಲಿ ೯೦ ದಿನಗಳ ಕಾಲ ಜೀವಂತವಾಗಿರುತ್ತದೆ. ಆ ಸಮಯದಲ್ಲಿ ಮತ್ತೊಂದು ತಪ್ಪು ಮಾಡಿ ಎರಡನೇ ಸ್ಟ್ರೈಕ್ ಬಂದರೆ, ನಿಮ್ಮನ್ನು ಎರಡು ವಾರಗಳ ಕಾಲ ವಿಡಿಯೋ ಮಾಡದಂತೆ ಅಮಾನತುಗೊಳಿಸಲಾಗುತ್ತದೆ. ೯೦ ದಿನಗಳ ಅವಧಿಯಲ್ಲಿ ಸತತವಾಗಿ ಮೂರು ಸ್ಟ್ರೈಕ್‌ಗಳು ಬಂದರೆ, ಯಾವುದೇ ಮುನ್ಸೂಚನೆ ಇಲ್ಲದೆ ನಿಮ್ಮ ಇಡೀ ಯೂಟ್ಯೂಬ್ ಚಾನೆಲ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಲಾಗುತ್ತದೆ. ಮಗದೊಮ್ಮೆ ನೀವು ಅದೇ ಹೆಸರಿನಲ್ಲಿ ಹೊಸ ಚಾನೆಲ್ ತೆರೆಯಲು ಕೂಡ ಯೂಟ್ಯೂಬ್ ಬಿಡುವುದಿಲ್ಲ.

ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಬೇರೆಯವರ ರೀಲ್ಸ್ ಅನ್ನು ಡೌನ್‌ಲೋಡ್ ಮಾಡಿ ನಿಮ್ಮ ಖಾತೆಗೆ ಹಾಕಿಕೊಂಡರೆ ಅಥವಾ ಸಿನಿಮಾ ಹಾಡುಗಳನ್ನು ಅನುಮತಿ ಇಲ್ಲದೆ ಬಿಸಿನೆಸ್ ಪೇಜ್‌ಗಳಲ್ಲಿ ಬಳಸಿದರೆ, ಖಾತೆಯನ್ನು ತಕ್ಷಣವೇ ಡಿಸೇಬಲ್ ಮಾಡಲಾಗುತ್ತದೆ. ನಿಮ್ಮ ಬ್ರ್ಯಾಂಡ್ ಅಥವಾ ವೈಯಕ್ತಿಕ ಖಾತೆಗೆ ಇಂತಹ ದೂರುಗಳು ಬಂದರೆ, ಕೇವಲ ೪೮ ರಿಂದ ೭೨ ಗಂಟೆಗಳ ಒಳಗೆ ಖಾತೆಯನ್ನು ಮುಚ್ಚಿಹಾಕಲಾಗುತ್ತದೆ.

ಭಾರತದ ಕಾನೂನು ಕಾಪಿರೈಟ್ ಸ್ಟ್ರೈಕ್ ಬಗ್ಗೆ ಏನು ಹೇಳುತ್ತದೆ?

ಭಾರತದಲ್ಲಿ “Copyright Act, 1957” ಅಡಿ ಕಾಪಿರೈಟ್ ರಕ್ಷಣೆ ನೀಡಲಾಗುತ್ತದೆ. ೨೦೧೨ರಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದ ತಿದ್ದುಪಡಿಗಳನ್ನೂ ತಂದರು. ಈ ಕಾಯಿದೆ ಪ್ರಕಾರ:

“ಹಾಗಾದರೆ ನಾವು ಯಾರ ವಿಷಯವನ್ನೂ ಬಳಸಲೇಬಾರದೇ? ಸಿನಿಮಾ ರಿವ್ಯೂ ಮಾಡುವವರು, ಸುದ್ದಿ ವಿಶ್ಲೇಷಣೆ ಮಾಡುವವರು ವಿಡಿಯೋ ತುಣುಕುಗಳನ್ನು ಬಳಸುತ್ತಾರಲ್ಲ, ಅದು ಹೇಗೆ?” ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇಲ್ಲಿಯೇ ಬರುವುದು ‘ಫೇರ್ ಡೀಲಿಂಗ್’ ಎಂಬ ನಿಯಮ. ಭಾರತೀಯ ಕಾಪಿರೈಟ್ ಕಾಯ್ದೆಯ ಸೆಕ್ಷನ್ 52 ರ ಪ್ರಕಾರ, ಕೆಲವು ನಿರ್ದಿಷ್ಟ ಉದ್ದೇಶಗಳಿಗಾಗಿ ಬೇರೆಯವರ ಕಂಟೆಂಟ್ ಅನ್ನು ಮಿತವಾಗಿ ಬಳಸಲು ಕಾನೂನಿನಲ್ಲಿ ಅವಕಾಶವಿದೆ:

ಆದರೆ ಇಲ್ಲೊಂದು ದೊಡ್ಡ ಟ್ವಿಸ್ಟ್ ಇದೆ – ನಿಮ್ಮ ಬಳಕೆ ‘ನ್ಯಾಯಸಮ್ಮತ’ವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಯೂಟ್ಯೂಬ್ ನಿರ್ಧರಿಸುವುದಿಲ್ಲ, ಅದನ್ನು ಕೋರ್ಟ್ ನಿರ್ಧರಿಸಬೇಕು! ಎಲ್ಲಿಯವರೆಗೂ ನೀವು ಬೇರೊಬ್ಬರ ಕೃತಿಯನ್ನು ವಾಣಿಜ್ಯ ಲಾಭಕ್ಕಾಗಿ ಬಳಸುವುದಿಲ್ಲವೋ ಅಲ್ಲಿಯವರೆಗೂ ಸಾಮಾನ್ಯವಾಗಿ ಕೋರ್ಟ್ “ಫೇರ್ ಡೀಲಿಂಗ್” ಅಡಿಯಲ್ಲಿ ಆದೇಶ ನೀಡಿದೆ. ಭಾರತದಲ್ಲಿ ಕಾಪಿರೈಟ್ ರಕ್ಷಣೆ ಕೃತಿ ಸೃಷ್ಟಿಯಾದ ನಂತರ ಸ್ವಯಂಚಾಲಿತವಾಗಿರುತ್ತೆ — ಯಾವುದೇ ನೋಂದಣಿ ಅಗತ್ಯವಿಲ್ಲ, ಆದರೆ ನ್ಯಾಯಾಲಯದ ಕ್ಲೈಮ್‌ಗಳ ಸಮಯದಲ್ಲಿ ನೋಂದಣಿ ಸಹಾಯ ಮಾಡುತ್ತದೆ.

ಕಾಪಿರೈಟ್ ಸ್ಟ್ರೈಕ್ ತಪ್ಪಿಸುವುದು ಹೇಗೆ?

ಒಂದು ವೇಳೆ ಕಾಪಿರೈಟ್ ಸ್ಟ್ರೈಕ್ ಬಂದರೆ ಏನು ಮಾಡಬೇಕು?

ದುರದೃಷ್ಟಕ್ಕೆ ನಿಮ್ಮ ಚಾನೆಲ್‌ಗೆ ಸ್ಟ್ರೈಕ್ ಬಂದುಬಿಟ್ಟರೆ ಗಾಬರಿಯಾಗಬೇಡಿ. ಅದಕ್ಕೂ ಕೆಲವು ಪರಿಹಾರಗಳಿವೆ:

ಕೊನೆಯ ಮಾತು : ಕಷ್ಟ ನಿಮ್ಮದು, ಹಕ್ಕು ನಿಮ್ಮದೇ ಆಗಿರಲಿ!

ಸಾಮಾಜಿಕ ಜಾಲತಾಣಗಳು ಇಂದು ಕೇವಲ ಕಾಲಹರಣದ ವೇದಿಕೆಗಳಲ್ಲ; ಅವು ಲಕ್ಷಾಂತರ ಕುಟುಂಬಗಳಿಗೆ ಅನ್ನ ನೀಡುವ ಅಕ್ಷಯ ಪಾತ್ರೆಗಳಾಗಿವೆ. ಕಂಟೆಂಟ್ ಕ್ರಿಯೇಷನ್ ಎನ್ನುವುದು ಒಂದು ಕಲೆ, ಅದಕ್ಕೆ ಅಪಾರ ತಾಳ್ಮೆ ಮತ್ತು ಶ್ರಮ ಬೇಕು. ದಿನಗಟ್ಟಲೆ ಯೋಚಿಸಿ ಸ್ಕ್ರಿಪ್ಟ್ ಬರೆದು, ಶೂಟಿಂಗ್ ಮಾಡಿ, ಎಡಿಟಿಂಗ್ ಮಾಡಿ ಅಪ್‌ಲೋಡ್ ಮಾಡುವಾಗ ಸಿಗುವ ಆನಂದವೇ ಬೇರೆ. ಇಷ್ಟೊಂದು ಕಷ್ಟಪಟ್ಟು ಮಾಡುವ ಕೆಲಸದಲ್ಲಿ ಬೇರೆಯವರ ಕಂಟೆಂಟ್ ಬಳಸಿ ನಮ್ಮ ಚಾನೆಲ್ ಅನ್ನು ಅಪಾಯಕ್ಕೆ ದೂಡುವುದು ಎಷ್ಟು ಬುದ್ಧಿವಂತಿಕೆ? ಕಳ್ಳ ಹಾದಿಯಲ್ಲಿ ಸಿಗುವ ಯಶಸ್ಸು ತಾತ್ಕಾಲಿಕ. ನಿಮ್ಮದೇ ಆದ ಸ್ವಂತ ಕಂಟೆಂಟ್ ಸೃಷ್ಟಿಸಿ, AI ಇದನ್ನು ಸುಲಭ ಮಾಡಿದೆ. ಕಾಪಿರೈಟ್ ನಿಯಮಗಳನ್ನು ಗೌರವಿಸುವುದು ಎಂದರೆ ಸಹ-ಕಲಾವಿದರ ಶ್ರಮವನ್ನು ಗೌರವಿಸಿದಂತೆ.

Exit mobile version