Site icon Welcome to CYBER MITHRA

ಬೌದ್ಧಿಕ ಆಸ್ತಿ ಹಕ್ಕುಗಳು: ನಮ್ಮ ಆಲೋಚನೆಗಳಿಗೂ ಆಸ್ತಿಯ ಮೌಲ್ಯವಿದೆ!

ಕಳೆದ ಎರಡು ವಾರಗಳ ಲೇಖನಗಳು ನಾನು ಪರ್ಸನಾಲಿಟಿ ರೈಟ್ಸ್ ಅಥವಾ ವ್ಯಕ್ತಿತ್ವ ಹಕ್ಕು ಕುರಿತು ಬರೆದಿದ್ದೆ, ಓದಿದವರೊಬ್ಬರು – ಸರ್, ಇದಕ್ಕೂ ಕಾಪಿರೈಟ್ ಅಥವಾ ಪೇಟೆಂಟ್ ಗು ಏನು ವ್ಯತ್ಯಾಸ ? ಇಲ್ಲೂ ನಾವು ಅದನ್ನೆಲ್ಲ ಕಾಪಿರೈಟ್ ಯಾಕೆ ಮಾಡಬಾರದು ಎಂಬ ಅನೇಕ ಸವಾಲುಗಳನ್ನು ಕೇಳಿದ್ದರು. ಇನ್ನೊಬ್ಬ ಗೆಳೆಯರು ಅದೇ ಲೇಖನವನ್ನು ಓದಿ ನನಗೆ ನೀನು ಇಂತಹ ವಿಷಯಗಳನ್ನು ಹೇಳುವದಕ್ಕಿಂತ ಮುಂಚೆ ವಿವಿಧ ರೀತಿಯ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಸರಳವಾಗಿ ತಿಳಿಸಿಕೊಡು ಎಂದಿದ್ದರು. ಅವೆರಡು ಮಾತುಕತೆಯ ಪರಿಣಾಮ ಈ ಲೇಖನ. ಇಲ್ಲಿ ನಾನು ಬೌದ್ಧಿಕ ಆಸ್ತಿ ಹಕ್ಕುಗಳು ಎಂದರೇನು? ವಿವಿಧ ರೀತಿಯ ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ಸ್ಟೂಲವಾಗಿ ತಿಳಿಸಿಕೊಡಲಿದ್ದೇನೆ. ಹಾಗೆ ನಾನು ಹಿಂದೊಮ್ಮೆ ಯೋಚಿಸುವ ಹಕ್ಕಿನ ಕುರಿತು ಬರೆದಿದ್ದೆ, ಅದನ್ನು ಮತ್ತು ವ್ಯಕ್ತಿತ್ವ ಹಕ್ಕು ಬಗ್ಗೆ ತಿಳಿದುಕ್ಕೊಳ್ಳಲು ನೀವು ನನ್ನ ದ್ವಿಭಾಷಾ ಬ್ಲಾಗ್ www.cybermithra.in ಸಂದರ್ಶಿಸಿ.

ನಾವು ಸಾಮಾನ್ಯವಾಗಿ “ಆಸ್ತಿ” ಎಂದರೆ ಜಮೀನು, ಮನೆ, ವಾಹನ ಅಥವಾ ಹಣವನ್ನು ನೆನಪಿಸಿಕೊಳ್ಳುತ್ತೇವೆ. ಆದರೆ ಒಬ್ಬ ವ್ಯಕ್ತಿಯ ಬುದ್ಧಿಶಕ್ತಿಯಿಂದ ಹುಟ್ಟುವ ಹೊಸ ಆಲೋಚನೆ, ಹಾಡು, ಕಥೆ, ಲೋಗೋ, ಆವಿಷ್ಕಾರ ಅಥವಾ ವಿಶಿಷ್ಟ ಉತ್ಪನ್ನವೂ ಒಂದು ಅಮೂಲ್ಯ ಆಸ್ತಿಯೇ. ಇಂತಹ ಬೌದ್ಧಿಕ ಸೃಷ್ಟಿಗಳನ್ನು ರಕ್ಷಿಸಲು ಇರುವ ಕಾನೂನು ವ್ಯವಸ್ಥೆಯೇ ಬೌದ್ಧಿಕ ಆಸ್ತಿ ಹಕ್ಕುಗಳು ಅಥವಾ Intellectual Property Rights (IPR). ಇಂದಿನ ಡಿಜಿಟಲ್ ಮತ್ತು ಸ್ಟಾರ್ಟ್‌ಅಪ್ ಯುಗದಲ್ಲಿ, ನಮ್ಮ ಆಲೋಚನೆಗಳನ್ನು ಕಳ್ಳತನದಿಂದ ಕಾಪಾಡಿಕೊಳ್ಳುವುದು ಹೇಗೆ ಎಂದು ಪ್ರತಿಯೊಬ್ಬ ಸಾಮಾನ್ಯ ನಾಗರಿಕನೂ ತಿಳಿದುಕೊಳ್ಳುವುದು ಅತ್ಯಗತ್ಯ. ಭಾರತದ ಕಾನೂನು ವ್ಯವಸ್ಥೆ ಕಾಪಿರೈಟ್, ಪೇಟೆಂಟ್, ಟ್ರೇಡ್‌ಮಾರ್ಕ್, ಕೈಗಾರಿಕಾ ವಿನ್ಯಾಸ(Industrial Design) ಮತ್ತು ಭೌಗೋಳಿಕ ಸೂಚಕ(Geographical Indication – GI) ಎಂಬ ಐದು ರೀತಿಯ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಗುರುತಿಸುತ್ತದೆ. ಕೆಳಗೆ ಸ್ಟೂಲವಾಗಿ ಅದನ್ನು ವಿವರಿಸಲಿದ್ದೇನೆ.

೧. ಕಾಪಿರೈಟ್ ಅಥವಾ ಕೃತಿಸ್ವಾಮ್ಯ : ಇದು ಸಾಹಿತ್ಯ, ಸಂಗೀತ, ಸಿನಿಮಾ, ಚಿತ್ರಕಲೆ, ಛಾಯಾಚಿತ್ರ, ಸಾಫ್ಟ್‌ವೇರ್ ಮುಂತಾದ ಸೃಜನಾತ್ಮಕ ಕೃತಿಗಳಿಗೆ ದೊರೆಯುವ ರಕ್ಷಣೆ. ಉದಾಹರಣೆಗೆ, ಒಬ್ಬ ಲೇಖಕ ಬರೆದ ಕಾದಂಬರಿ ಅಥವಾ ಸಂಗೀತಗಾರ ರಚಿಸಿದ ಹಾಡನ್ನು ಅವರ ಅನುಮತಿಯಿಲ್ಲದೆ ನಕಲು ಮಾಡುವುದು, ಪ್ರಕಟಿಸುವುದು ಅಥವಾ ಮಾರಾಟ ಮಾಡುವುದು ಕಾನೂನುಬಾಹಿರ. ಕಾಪಿರೈಟ್ ಆ ಕೃತಿಯ “ಆಲೋಚನೆ”ಯನ್ನು ಅಲ್ಲ, ಅದರ “ಅಭಿವ್ಯಕ್ತಿಯನ್ನು” ರಕ್ಷಿಸುತ್ತದೆ. ಪುಸ್ತಕ, ಸಿನಿಮಾ, ಸಂಗೀತ, ಸಾಫ್ಟ್‌ವೇರ್, ಚಿತ್ರಕಲೆ – ಇವುಗಳಿಗೆ ಸಾಮಾನ್ಯವಾಗಿ ಜೀವಮಾನದವರೆಗೆ + ೬೦ ವರ್ಷಗಳವರೆಗೆ ರಕ್ಷಣೆ ದೊರೆಯುತ್ತದೆ.

೨. ಪೇಟೆಂಟ್ : ಹೊಸದಾದ ಯಂತ್ರ, ಔಷಧಿ ಅಥವಾ ತಂತ್ರಜ್ಞಾನವನ್ನು ನೀವು ಕಂಡುಹಿಡಿದಿದ್ದೀರಿ ಎಂದುಕೊಳ್ಳಿ. ಇದನ್ನು ೨೦ ವರ್ಷಗಳವರೆಗೆ ಇತರರು ತಯಾರಿಸದಂತೆ, ಮಾರಾಟ ಮಾಡದಂತೆ ರಕ್ಷಿಸುವ ಹಕ್ಕು ಪೇಟೆಂಟ್. ಆದರೆ ಇದಕ್ಕೆ ಅರ್ಜಿ ಸಲ್ಲಿಸುವಾಗ ಆ ವಿಷಯ ಹೊಸತಾಗಿರಬೇಕು ಮತ್ತು ಉಪಯುಕ್ತವಾಗಿರಬೇಕು. ಉದಾಹರಣೆಗೆ, ಬೆಂಗಳೂರಿನ ಯುವಕರು ಕಂಡುಹಿಡಿದ ಜಲ ಸಂರಕ್ಷಣೆ ಯಂತ್ರಕ್ಕೆ ಪೇಟೆಂಟ್ ಪಡೆದರೆ, ಅವರು ಏಕೈಕ ತಯಾರಕರಾಗುತ್ತಾರೆ. ಇದು ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆಯಲು ಸಹಾಯ ಮಾಡುತ್ತದೆ.

೩. ಟ್ರೇಡ್‌ಮಾರ್ಕ್ : ನಿಮ್ಮ ಕಂಪನಿ ಅಥವಾ ಉತ್ಪನ್ನಕ್ಕೆ ನೀಡುವ ವಿಶೇಷ ಹೆಸರು, ಲೋಗೋ ಅಥವಾ ಚಿಹ್ನೆಯನ್ನು ಇತರರು ಬಳಸದಂತೆ ರಕ್ಷಿಸುವುದೇ ಟ್ರೇಡ್‌ಮಾರ್ಕ್. “ನೈಕ್” ಟಿಕ್ ಚಿಹ್ನೆ ಅಥವಾ “ಅಮುಲ್” ಹೆಸರು ಇದಕ್ಕೆ ಉದಾಹರಣೆ. ಗ್ರಾಹಕರು ಈ ಲೋಗೋ ನೋಡಿದ ತಕ್ಷಣ ಗುಣಮಟ್ಟ ನೆನಪಾಗುತ್ತದೆ. ಇದನ್ನು ಯಾರಾದರೂ ಕಳ್ಳತನ ಮಾಡಿದರೆ ಕಂಪನಿ ಕಾನೂನು ಕ್ರಮ ತೆಗೆದುಕೊಳ್ಳಬಹುದು.

೪. ಕೈಗಾರಿಕಾ ವಿನ್ಯಾಸ : ಕೆಲವೊಮ್ಮೆ ಒಂದು ಉತ್ಪನ್ನದ ಯಶಸ್ಸಿಗೆ ಅದರ ಕಾರ್ಯಕ್ಷಮತೆ ಮಾತ್ರವಲ್ಲ, ಅದರ ಆಕರ್ಷಕ ವಿನ್ಯಾಸವೂ ಕಾರಣವಾಗಿರುತ್ತದೆ. ಮೊಬೈಲ್ ಫೋನ್, ಪೀಠೋಪಕರಣ, ವಾಹನ ಅಥವಾ ಬಾಟಲಿಯ ವಿಶಿಷ್ಟ ಹೊರ ವಿನ್ಯಾಸವನ್ನು ಕಾನೂನು ರಕ್ಷಣೆ ನೀಡುತ್ತದೆ. ಇದನ್ನೇ ಕೈಗಾರಿಕಾ ವಿನ್ಯಾಸದ ಹಕ್ಕು ಎಂದು ಕರೆಯಲಾಗುತ್ತದೆ. ಇದರ ಉದ್ದೇಶ ಉತ್ಪನ್ನದ ಸೌಂದರ್ಯವನ್ನು ನಕಲು ಮಾಡುವುದನ್ನು ತಡೆಯುವುದು. ಇದು ೧೦ ವರ್ಷಗಳವರೆಗೆ ರಕ್ಷಣೆ ಪಡೆಯುತ್ತದೆ.

೫. ಭೌಗೋಳಿಕ ಸೂಚಕ ಟ್ಯಾಗ್ : ಇದು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಉತ್ಪತ್ತಿಯಾಗುವ ಉತ್ಪನ್ನಕ್ಕೆ ನೀಡುವ ಟ್ಯಾಗ್. ಮೈಸೂರು ಸಿಲ್ಕ್, ದಾರ್ಜಿಲಿಂಗ್ ಟೀ, ಬೆಳಗಾವಿ ಕಿತ್ತಳೆ, ಕೊಡಗು ಕಾಫಿ – ಇವುಗಳಿಗೆ GI ಟ್ಯಾಗ್ ಇದೆ. ಇದು ಆ ಪ್ರದೇಶದ ಖ್ಯಾತಿ ಮತ್ತು ರೈತರ ಆದಾಯವನ್ನು ರಕ್ಷಿಸುತ್ತದೆ. ಇತರೆಡೆ ತಯಾರಿಸಿದರೂ ಅದನ್ನು ಆ ಹೆಸರಿನಲ್ಲಿ ಮಾರಾಟ ಮಾಡಲು ಬರುವುದಿಲ್ಲ. ಕಡೆಯದಾಗಿ, ಇಂದಿನ ಜ್ಞಾನಾಧಾರಿತ ಆರ್ಥಿಕತೆಯಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೊಸ ಆಲೋಚನೆಗಳನ್ನು ಪ್ರೋತ್ಸಾಹಿಸುವುದು, ಸೃಷ್ಟಿಕರ್ತರಿಗೆ ನ್ಯಾಯಯುತ ಪ್ರತಿಫಲ ನೀಡುವುದು ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ನೆರವಾಗುವುದು IPR ನ ಪ್ರಮುಖ ಉದ್ದೇಶವಾಗಿದೆ. ಆದ್ದರಿಂದ “ಬುದ್ಧಿಯಿಂದ ಸೃಷ್ಟಿಯಾದ ಆಸ್ತಿಯೂ ಆಸ್ತಿಯೇ” ಎಂಬ ಅರಿವು ಪ್ರತಿಯೊಬ್ಬ ನಾಗರಿಕನಲ್ಲೂ ಮೂಡಬೇಕಾಗಿದೆ. IPR ಅರಿತುಕೊಂಡರೆ ನಾವು ಸ್ವಂತ ಕ್ರಿಯೇಟಿವಿಟಿ ಮತ್ತು ವ್ಯಾಪಾರವನ್ನು ಭದ್ರವಾಗಿ ಬೆಳೆಸಬಹುದು. ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ವ್ಯವಸಾಯಿಗಳು ಈ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಇಂದಿನ ಅಗತ್ಯ. ಸರ್ಕಾರದ ವೆಬ್‌ಸೈಟ್‌ಗಳಾದ www.ipindia.gov.in ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿದೆ.

Exit mobile version