ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್, UPI, ಮೊಬೈಲ್ ವಾಲೆಟ್, ಇ–ಕಾಮರ್ಸ್‌ಗಳು ನಮ್ಮ ಜೀವನವನ್ನು ಸುಲಭಗೊಳಿಸಿವೆ. ಆದರೆ ಇದರ ಜೊತೆಗೆ ಒಂದು ದೊಡ್ಡ ಅಪಾಯವೂ ಬಂದಿದೆ – ಸೈಬರ್ ಹಣಕಾಸು ವಂಚನೆ. “ಲಿಂಕ್ ಕ್ಲಿಕ್ ಮಾಡಿ”, “KYC ಅಪ್‌ಡೇಟ್ ಮಾಡಿ”, “ಲಾಟರಿ ಗೆದ್ದಿದ್ದೀರಿ”, “30 ದಿನದಲ್ಲಿ ಹಣ ದುಪ್ಪಟ್ಟು” ಎಂಬ ಸಂದೇಶಗಳು ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿವೆ. ಒಂದು ಕ್ಷಣದಲ್ಲಿ ಜೀವನದ ಉಳಿತಾಯ ಕಳೆದುಹೋಗುವಂತಹ ಸಂದರ್ಭಗಳು ಸಾಮಾನ್ಯವಾಗಿವೆ. ವಂಚನೆಗೊಳಗಾದವರು ತಮ್ಮ ಹಣವನ್ನು ಮರಳಿ ಪಡೆಯಲು ವರ್ಷಗಳ ಕಾಲ ಪೊಲೀಸ್ ಸ್ಟೇಷನ್, ಬ್ಯಾಂಕ್ ಮತ್ತು ನ್ಯಾಯಾಲಯಗಳಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ.
ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡಲು ಭಾರತ ಸರ್ಕಾರದ ಗೃಹ ಸಚಿವಾಲಯವು ಸೈಬರ್ ವಂಚನೆಗೊಳಗಾದ ಹಣದ ಮರುಪಾವತಿ ಮತ್ತು ಕುಂದುಕೊರತೆ ನಿವಾರಣೆಗಾಗಿ ಹೊಸ ‘ಮಾದರಿ ಕಾರ್ಯವಿಧಾನ’ (SOP) ಹೊರತಂದಿದೆ. ಸರಳವಾಗಿ ಹೇಳುವುದಾದರೆ, ಸೈಬರ್ ವಂಚನೆ ನಡೆದಾಗ ಪೊಲೀಸರು, ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಹೇಗೆ ಕೆಲಸ ಮಾಡಬೇಕು ಎನ್ನುವುದಕ್ಕೆ ಇದೊಂದು ಕೈಪಿಡಿ. ಈ SOP ಒಂದು ಮಹತ್ವದ ತತ್ವವನ್ನು ಹೇಳುತ್ತದೆ: “ನಿರಪರಾಧ ವ್ಯಕ್ತಿಗೆ ಅನಗತ್ಯ ತೊಂದರೆ ಆಗಬಾರದು.” ಈ ಲೇಖನದಲ್ಲಿ ನಾನು ಈ ಹೊಸ SOP ಯ ವ್ಯಾಪ್ತಿ, ಮುಖ್ಯ ಉದ್ದೇಶ, ಮಾರ್ಗದರ್ಶಕ ತತ್ವಗಳು, ದೂರು ದಾಖಲಿಸುವ ಪ್ರಕ್ರಿಯೆ, ದೂರು ಪರಿಹಾರ ವ್ಯವಸ್ಥೆ ಬಗ್ಗೆ ತಿಳಿಸಿಕೊಡಲಿದ್ದೇನೆ. ಅನೇಕ ಬಗೆಯ ಆರ್ಥಿಕ ವಂಚನೆಗಳ ಬಗ್ಗೆ ನಾನು ಹಿಂದೊಮ್ಮೆ ತಿಳಿಸಿಕೊಟ್ಟಿದ್ದೆ, ಅದನ್ನು ಓದಲು ನೀವು ನನ್ನ ದ್ವಿಭಾಷಾ ಬ್ಲಾಗ್ ಜಾಲತಾಣ ಸಂದರ್ಶಿಸಿ.
SOP ಯ ಮುಖ್ಯ ಉದ್ದೇಶ :-
- ವಂಚನೆಗೆ ಒಳಗಾದವರ ಹಣವನ್ನು ಉಳಿಸುವುದು, ತಡೆಹಿಡಿಯುವುದು ಮತ್ತು ಹಿಂದುರಿಗುಸುವುದು.
- ತಪ್ಪಾಗಿ ಫ್ರೀಜ್ ಆದ ಖಾತೆಗಳನ್ನು ನ್ಯಾಯಸಮ್ಮತವಾಗಿ ತೆರವು(ಅನ್ಫ್ರೀಜ್) ಮಾಡುವುದು
- ಬ್ಯಾಂಕ್, ಪೊಲೀಸ್, ಪೇಮೆಂಟ್ ಕಂಪನಿಗಳ ನಡುವೆ ಸ್ಪಷ್ಟ ಜವಾಬ್ದಾರಿ ವ್ಯವಸ್ಥೆ ನಿರ್ಮಿಸುವುದು
- ಸಾರ್ವಜನಿಕರ ದೂರುಗಳನ್ನು ಆಲಿಸಲು ವಿಶೇಷ ಅಧಿಕಾರಿಗಳ ನೇಮಕ.
- SOP ಯ ವ್ಯಾಪ್ತಿ – ಯಾರಿಗೆ ಇದು ಅನ್ವಯಿಸುತ್ತದೆ?
ಈ SOP ಕೇವಲ ಆನ್‌ಲೈನ್ ಹಣಕಾಸು ವಂಚನೆಗೆ ಸಂಬಂಧಿಸಿದ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಮುಖ್ಯವಾಗಿ:
ಈ SOP ಕೇವಲ cybercrime.gov.in ಅಥವಾ 1930 ಸಹಾಯವಾಣಿಯಲ್ಲಿ ಅಥವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ.
- ಹಣವನ್ನು ತಡೆಹಿಡಿಯುವುದು: ವಂಚನೆಯಲ್ಲಿ ತೊಡಗಿದ ಖಾತೆಗಳಲ್ಲಿನ ಹಣವನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದು ಹೇಗೆ.
- ಖಾತೆಗಳನ್ನು ಫ್ರೀಜ್ ಮಾಡುವುದು: ಖಾತೆಗಳ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ನಿಲ್ಲಿಸುವುದು ಮತ್ತು ಪುನಃ ಪ್ರಾರಂಭಿಸುವುದು ಹೇಗೆ.
- ಹಣವನ್ನು ಮರಳಿ ನೀಡುವುದು: ಪೀಡಿತರಿಗೆ ತಮ್ಮ ಹಣವನ್ನು ಮರಳಿ ಪಡೆಯಲು ಐದು ವಿಧದ ಪ್ರಕ್ರಿಯೆಗಳು.
- ದೂರು ನಿವಾರಣೆ: ತಪ್ಪಾಗಿ ಖಾತೆ ಫ್ರೀಜ್ ಆದವರು ದೂರು ಸಲ್ಲಿಸುವ ವ್ಯವಸ್ಥೆ.
- ಹಕ್ಕುದಾರರಿಲ್ಲದ ಹಣದ ವಿಲೇವಾರಿ: ಯಾರೂ ಹಕ್ಕು ಸಾಧಿಸದ ಹಣವನ್ನು ಹೇಗೆ ವಿಲೇವಾರಿ ಮಾಡುವುದು.
SOP ಯ ಮಾರ್ಗದರ್ಶಿ ತತ್ವಗಳು :-
ಕಾನೂನು ಅಧಿಕಾರ: ಪೊಲೀಸರು ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (BNSS) ನ ಕಲಂ 168, 94 ಮತ್ತು 106 ರ ಅಡಿಯಲ್ಲಿ ಹಣವನ್ನು ತಡೆಹಿಡಿಯಬಹುದು.
ಎಚ್ಚರಿಕೆಯಿಂದ ವರದಿ ಮಾಡುವುದು: ಪೊಲೀಸ್ ಅಧಿಕಾರಿಗಳು ನಿಜವಾದ ಸೈಬರ್ ಅಪರಾಧ ಪ್ರಕರಣಗಳನ್ನು ಮಾತ್ರ ವ್ಯವಸ್ಥೆಗೆ ಸಲ್ಲಿಸಬೇಕು. ಸುಳ್ಳು ಅಥವಾ ಪ್ರೇರಿತ ದೂರುಗಳನ್ನು ತಡೆಯಬೇಕು.
- ತ್ವರಿತ ಕ್ರಮ: ಬ್ಯಾಂಕುಗಳು ವರದಿಯಾದ ವಹಿವಾಟಿನ ಮೇಲೆ ತಕ್ಷಣ ತಡೆ ಹಾಕಬೇಕು.
- ಬ್ಯಾಂಕುಗಳ ಜವಾಬ್ದಾರಿ: ಎಲ್ಲಾ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಹಣ ಲಾಂಡರಿಂಗ್ ವಿರೋಧಿ (AML) ನಿಯಮಗಳನ್ನು ಪಾಲಿಸಬೇಕು. ಶಂಕಾಸ್ಪದ ಖಾತೆಗಳ ಮೇಲೆ ವರ್ಧಿತ ಪರಿಶೀಲನೆ ನಡೆಸಬೇಕು.
- ದೂರು ನಿವಾರಣೆ: ತಪ್ಪಾಗಿ ತಡೆ ಹಾಕಿದ, ಖಾತೆ ಫ್ರೀಜ್ ಮಾಡಿದವರು ನಿಗದಿತ ಸಮಯದೊಳಗೆ ದೂರು ಸಲ್ಲಿಸಬಹುದು.
- ಪೀಡಿತರ ಹಕ್ಕುಗಳು: ಪೀಡಿತರಿಗೆ ಹಣವನ್ನು ಮರಳಿ ನೀಡುವಾಗ ಅವರನ್ನು ಅನಗತ್ಯ ತೊಂದರೆಗೆ ಒಳಪಡಿಸಬಾರದು.
- ಅನೇಕ ಪೀಡಿತರಿದ್ದಾಗ: ಒಂದೇ ಖಾತೆಯಲ್ಲಿ ಅನೇಕರ ಹಣ ಬೆರೆತಿದ್ದರೆ, ಸಮಾನ ಅಥವಾ ಪ್ರಮಾಣಾನುಗುಣ ವಿತರಣೆಯ ತತ್ವವನ್ನು ಅನ್ವಯಿಸಬೇಕು.
ಈ SOP ಸಮಾನತೆ, ಪಾರದರ್ಶಕತೆ, ನ್ಯಾಯಯುತತೆ ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ಆಧಾರವಾಗಿಟ್ಟುಕೊಂಡಿದೆ. ಇದು ಮೋಸಗಳನ್ನು ತಡೆಗಟ್ಟಿ, ಹಣಕಾಸು ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಮುಂದಿನ ಲೇಖನದಲ್ಲಿ ನೀವು ದೂರನ್ನು ದಾಖಲಿಸುವ ಪ್ರಕ್ರಿಯೆ, ದೂರು ಪರಿಹಾರ ವ್ಯವಸ್ಥೆ, ಖಾತೆ ಫ್ರೀಜ್ ಆದರೆ ಏನು ಮಾಡಬೇಕು ಮತ್ತು ಹಣ ಮರುಪಡೆಯುವ ಮಾರ್ಗಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ದೂರನ್ನು ದಾಖಲಿಸುವ ಪ್ರಕ್ರಿಯೆ :-
ಸೈಬರ್ ವಂಚನೆಯ ಬಲಿಪಶು ನಾಲ್ಕು ರೀತಿಯಲ್ಲಿ ದೂರು ಸಲ್ಲಿಸಬಹುದು :
೧. ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (NCRP) ಮೂಲಕ –
- www.cybercrime.gov.in ಜಾಲತಾಣಕ್ಕೆ ಭೇಟಿ ನೀಡಿ
- ನಿಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯಿಂದ ನೋಂದಣಿ ಮಾಡಿ
- ಲಾಗಿನ್ ಮಾಡಿ ವಂಚನೆಯ ಸಂಪೂರ್ಣ ವಿವರಗಳನ್ನು ನೀಡಿ
- ದೂರು ಸಲ್ಲಿಸಿದ ನಂತರ 14 ಅಂಕಿಯ ಸ್ವೀಕೃತಿ ಸಂಖ್ಯೆ ಸಿಗುತ್ತದೆ.
- ದೂರು ಸಂಬಂಧಿತ ಪೊಲೀಸ್ ಠಾಣೆ ಮತ್ತು ಜಿಲ್ಲಾ ನೋಡಲ್ ಅಧಿಕಾರಿಗೆ ಹೋಗುತ್ತದೆ
೨. 1930 ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ ಮೂಲಕ –
- 1930 ಗೆ ಕರೆ ಮಾಡಿ
- ವಂಚನೆಯ ವಿವರಗಳನ್ನು ಅಧಿಕಾರಿಗೆ ತಿಳಿಸಿ
- 14 ಅಂಕಿಯ ಸ್ವೀಕೃತಿ ಸಂಖ್ಯೆ ಸಿಗುತ್ತದೆ
- SMS ನಲ್ಲಿ ಬರುವ ಸೂಚನೆಗಳ ಪ್ರಕಾರ cybercrime.gov.in ನಲ್ಲಿ ಸಂಪೂರ್ಣ ವಿವರಗಳನ್ನು ನೀಡಿ
೩. ಬ್ಯಾಂಕಿನ ಮೂಲಕ –
- ನಿಮ್ಮ ಬ್ಯಾಂಕಿನ ನಿಗದಿತ ಅಧಿಕಾರಿಯನ್ನು ಸಂಪರ್ಕಿಸಿ
- ಬ್ಯಾಂಕ್ ಅಧಿಕಾರಿ ನಿಮ್ಮ ಪರವಾಗಿ cybercrime.gov.in ನಲ್ಲಿ ದೂರು ನೋಂದಾಯಿಸುತ್ತಾರೆ
೪. ಪೊಲೀಸ್ ಠಾಣೆಯಲ್ಲಿ –
- ನಿಮ್ಮ ಹತ್ತಿರದ ಯಾವುದೇ ಪೊಲೀಸ್ ಠಾಣೆಗೆ ಹೋಗಿ ವಂಚನೆಯ ವಿವರಗಳನ್ನು ತಿಳಿಸಿ
- ಅಧಿಕೃತ ಅಧಿಕಾರಿ Citizen Financial Cyber Fraud Reporting and Management System (CFCFRMS) ನಲ್ಲಿ ದೂರು ನೋಂದಾಯಿಸುತ್ತಾರೆ
ದೂರು ಸಲ್ಲಿಸಿದ ನಂತರ ಏನಾಗುತ್ತದೆ?
- ಪೊಲೀಸ್ ಅಧಿಕಾರಿ ದೂರು ಪರಿಶೀಲಿಸಿ, ಸೈಬರ್ ವಂಚನೆ ನಡೆದಿದೆ ಎಂದು ಖಚಿತವಾದರೆ CFCFRMS ಗೆ ಸಲ್ಲಿಸುತ್ತಾರೆ.
- BNSS ಕಲಂ 168 ಮತ್ತು 94 ರ ಅಡಿಯಲ್ಲಿ ಸಂಬಂಧಿತ ಸಂಸ್ಥೆಗಳಿಗೆ ನೋಟೀಸ್ ಹೋಗುತ್ತದೆ.
- ಬ್ಯಾಂಕುಗಳು ವರದಿಯಾದ ಹಣವನ್ನು ತಡೆಹಿಡಿಯಬೇಕು, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು (UPI, NEFT, RTGS, IMPS, ATM) ನಿಲ್ಲಿಸಬೇಕು, ಹಣವನ್ನು ಸಾಲ ಮರುಪಾವತಿಗೆ ಬಳಸಿದ್ದರೆ, ಅದನ್ನು ತಡೆಹಿಡಿಯಬೇಕು ಮತ್ತು ಖಾತೆದಾರನ ಇತರ ಸೇವಿಂಗ್ಸ್/ಕರೆಂಟ್ ಖಾತೆಗಳ ವಿವರಗಳನ್ನು CFCFRMS ನಲ್ಲಿ ನಮೂದಿಸಬೇಕು. ಇಲ್ಲಿ ಮುಖ್ಯವಾದ ಅಂಶ: ಈ ತಡೆ ಎಂದರೆ ಶಾಶ್ವತ ತಡೆ ಅಲ್ಲ. ಇದು ತನಿಖೆಗಾಗಿ ತಾತ್ಕಾಲಿಕ ಕ್ರಮ.
- ಹಣ ಹೊರಹೋಗಿದ್ದರೆ, ಹಣದ ಹಾದಿ ಸ್ಥಾಪಿಸಲು ಪ್ರಯತ್ನಿಸಲಾಗುತ್ತದೆ.
- ಆ ಖಾತೆಯ KYC ವಿವರಗಳು (ಹೆಸರು, ವಿಳಾಸ, PAN, ಮೊಬೈಲ್ ಸಂಖ್ಯೆ) ಒಂದು ವಾರದೊಳಗೆ ನವೀಕರಿಸಬೇಕು.
- ಹಣವನ್ನು ಮರಳಿ ನೀಡಲು FIR/e-FIR ನೋಂದಾಯಿಸಬೇಕು.
- ಪೀಡಿತರಿಗೆ SMS ಮತ್ತು ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ.
- ಇ-ಕಾಮರ್ಸ್ ಕಂಪನಿಗಳು ಆರ್ಡರ್ ಡೆಲಿವರಿ ಆಗಿಲ್ಲದಿದ್ದರೆ, ಆರ್ಡರ್ ರದ್ದು ಮಾಡಿ ಹಣವನ್ನು ತಡೆಹಿಡಿಯಬೇಕು, ಡೆಲಿವರಿ ಆಗಿದ್ದರೆ, ವಿತರಣಾ ವಿಳಾಸ ಮತ್ತು ಸ್ವೀಕರಿಸಿದವರ ವಿವರಗಳನ್ನು CFCFRMS ನಲ್ಲಿ ನೀಡಬೇಕು. ಗಿಫ್ಟ್ ಕಾರ್ಡ ಖರೀದಿಸಿದ್ದರೆ, ಅದನ್ನು ರದ್ದು ಮಾಡಿ ಹಣವನ್ನು ತಡೆಹಿಡಿಯಬೇಕು.
- ಪಾವತಿ ಸೇವಾ ಒದಗಿಸುವವರು ವಾಲೆಟ್ (ಪೇಟಿಎಂ, ಫೋನ್‌ಪೇ, ಅಮೆಜಾನ್) ನಲ್ಲಿ ಹಣವಿದ್ದರೆ, ತಡೆಹಿಡಿಯಬೇಕು ಮತ್ತು ಹಣವನ್ನು ಸರಕು/ಸೇವೆಗಳಿಗೆ ಬಳಸಿದ್ದರೆ, ಮರ್ಚಂಟ್ ಮಾಹಿತಿ ನೀಡಬೇಕು.
- ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜುಗಳು INR ನಲ್ಲಿ ಹಣವಿದ್ದರೆ, ತಡೆಹಿಡಿಯಬೇಕು, ಕ್ರಿಪ್ಟೋ ಆಗಿ ಪರಿವರ್ತಿಸಿದ್ದರೆ, ಪೊಲೀಸ್ ಸೂಚನೆಯ ಮೇಲೆ INR ಗೆ ಪರಿವರ್ತಿಸಿ ತಡೆಹಿಡಿಯಬೇಕು ಮತ್ತು ವಾಲೆಟ್ ವಿವರಗಳು, ವಹಿವಾಟು ID ಮುಂತಾದವುಗಳನ್ನು CFCFRMS ನಲ್ಲಿ ನಮೂದಿಸಬೇಕು.
- ಷೇರು ಮಾರುಕಟ್ಟೆ, ಮ್ಯೂಚುಯಲ್ ಫಂಡ್ ಕಂಪನಿಗಳು ಟ್ರೇಡಿಂಗ್ ಖಾತೆಯಲ್ಲಿ ಬ್ಯಾಲೆನ್ಸ್ ಇದ್ದರೆ, ತಡೆಹಿಡಿಯಬೇಕು, ಷೇರುಗಳು, ಮ್ಯೂಚುಯಲ್ ಫಂಡ್‌ಗಳನ್ನು ಖರೀದಿಸಿದ್ದರೆ, ಅವುಗಳನ್ನು ತಡೆಹಿಡಿಯಬೇಕು, ಮತ್ತು ಅವುಗಳನ್ನು ಮಾರಾಟ ಮಾಡಿ ಹಣ ಬ್ಯಾಂಕ್‌ಗೆ ವರ್ಗಾಯಿಸಿದ್ದರೆ, ಬ್ಯಾಂಕ್ ಮಾಹಿತಿ ನೀಡಬೇಕು.
- ಹೀಗೆ ತಡೆಹಿಡಿದ ಹಣವನ್ನು, ಕೇವಲ ಆ ಖಾತೆಯ ಹಣದ ಮೇಲೆ ಒಂದೇ ದೂರಿದ್ದರೆ ಮತ್ತು ಹಣದ ಮೊತ್ತ 50,000 ಕ್ಕಿಂತ ಕಡಿಮೆಯಿದ್ದರೆ ಪೊಲೀಸರ ಆದೇಶದಿಂದಲೇ ಹಣ ಬಿಡುಗಡೆ ಸಾಧ್ಯ, ಆ ಖಾತೆಯ ಹಣದ ಮೇಲೆ ಅನೇಕ ದೂರುಗಳಿದ್ದರೆ ಹಣವನ್ನು ಪ್ರಮಾಣಾನುಗುಣವಾಗಿ ಹಂಚಿಕೆ ಮಾಡಲಾಗುವುದು, ಮತ್ತು ಹಣ ಯಾರದ್ದು ಎಂಬುದು ಸ್ಪಷ್ಟವಿಲ್ಲದಿದ್ದರೆ ಕೋರ್ಟ್ ಆದೇಶದ ಮೂಲಕ ವಾಪಸ್ ನೀಡಲಾಗವುದು.
ಕೊನೆಯ ಮಾತು :
ಈ SOP ಸಮಾನತೆ, ಪಾರದರ್ಶಕತೆ, ನ್ಯಾಯಯುತತೆ ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ಆಧಾರವಾಗಿಟ್ಟುಕೊಂಡಿದೆ. ಇದು ಮೋಸಗಳನ್ನು ತಡೆಗಟ್ಟಿ, ಹಣಕಾಸು ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಮುಂದಿನ ಲೇಖನದಲ್ಲಿ ನೀವು ದೂರನ್ನು ದಾಖಲಿಸುವ ಪ್ರಕ್ರಿಯೆ, ದೂರು ಪರಿಹಾರ ವ್ಯವಸ್ಥೆ, ಖಾತೆ ಫ್ರೀಜ್ ಆದರೆ ಏನು ಮಾಡಬೇಕು ಮತ್ತು ಹಣ ಮರುಪಡೆಯುವ ಮಾರ್ಗಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.

