Site icon Welcome to CYBER MITHRA

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ AI ಪಾತ್ರ: ಅವಕಾಶಗಳು ಮತ್ತು ಅಪಾಯಗಳು

AI

ಕಳೆದ ಕೆಲವು ವರ್ಷಗಳಿಂದ ಇಡೀ ಜಗತ್ತು “ಕೃತಕ ಬುದ್ಧಿಮತ್ತೆ” (Artificial Intelligence – AI) ಎಂಬ ಪದವನ್ನು ನಿರಂತರವಾಗಿ ಕೇಳುತ್ತಿದೆ, ಅದು ಈ ನಡುವೆ ಮನುಷ್ಯನ ಎಲ್ಲಾ ಕಾರ್ಯ ವಿಭಾಗಗಳಲ್ಲೂ ತನ್ನ ಜಾದೂವನ್ನು ಪ್ರದರ್ಶಿಸಲು ಶುರುಮಾಡಿದೆ.  ವಿಕಿಪೀಡಿಯ ಪ್ರಕಾರ ಕೃತಕ ಬುದ್ಧಿಮತ್ತೆ (AI) ಒಂದು ಕಲಿಕೆ, ತಾರ್ಕಿಕತೆ, ಸಮಸ್ಯೆ ಪರಿಹಾರ, ಗ್ರಹಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯಂತಹ ಮಾನವ ಬುದ್ಧಿಮತ್ತೆಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುವ ಕಂಪ್ಯೂಟೇಶನಲ್ ವ್ಯವಸ್ಥೆ. ಭಾರತದ ನ್ಯಾಯಾಂಗವು ಪ್ರಕರಣಗಳ ಬಾಕಿ, ಭಾಷಾ ಅಡೆತಡೆಗಳು ಮತ್ತು ಡಿಜಿಟಲ್ ಆಧುನೀಕರಣದ ಅಗತ್ಯದಂತಹ ದೀರ್ಘಕಾಲದ ಸವಾಲುಗಳನ್ನು ಎದುರಿಸುತ್ತಿದೆ. ಅದಕ್ಕೆ ಉತ್ತರವಾಗಿ ಇನ್ನೊಂದು ಕಡೆ, ನ್ಯಾಯಾಂಗ ಪ್ರಕ್ರಿಯೆಗಳು, ಪ್ರಕರಣ ನಿರ್ವಹಣೆ, ಕಾನೂನು ಸಂಶೋಧನೆ ಮತ್ತು ಕಾನೂನು ಜಾರಿಯಲ್ಲಿ AI ಅನ್ನು ಸಂಯೋಜಿಸುವ ಮೂಲಕ, ಭಾರತದ ನ್ಯಾಯ ವ್ಯವಸ್ಥೆಯು ತನ್ನ ಕಾರ್ಯಾಚರಣೆಗಳನ್ನು ಸುವ್ಯವಸ್ಥಿತಗೊಳಿಸುತ್ತಿದೆ, ವಿಳಂಬವನ್ನು ಕಡಿಮೆ ಮಾಡುತ್ತಿದೆ ಮತ್ತು ನ್ಯಾಯವನ್ನು ಎಲ್ಲರಿಗೂ ಹೆಚ್ಚು ಸುಲಭವಾಗಿ ದೊರಕುವಂತೆ ಮಾಡುತ್ತಿದೆ. ಅನೇಕ ವಕೀಲರು ಮತ್ತು ನ್ಯಾಯಾಲಯಗಳು AI ಆಧಾರಿತ ChatGPT ನಂತಹ ಪರಿಕರಗಳನ್ನು ತಮ್ಮ ಕಲಿಕೆ, ಕಾನೂನು ಅಥವಾ ಉಲ್ಲೇಖ ಪ್ರಕರಣ ಸಂಶೋಧನೆ, ಅನುವಾದ ಮತ್ತು ಸಂಬಂದಿತ ಸುದ್ದಿ/ಅಂಕಣಗಳ ಪತ್ತೆ ಕೆಲಸಕ್ಕಾಗಿ ಬಳಸುತ್ತಾರೆ. ನಾನು ಈ ಹಿಂದೆ AI ನ ಅನೇಕ ಮಜಲುಗಳ ಕುರಿತು ಬರೆದಿದ್ದೆ, ಅದನ್ನು ಓದಿ.

ಭಾರತದ ನ್ಯಾಯಾಲಯಗಳಲ್ಲಿ AI ಬಳಕೆ :-

ಭಾರತದ ಸರ್ವೋಚ್ಚ ನ್ಯಾಯಾಲಯದ 7210 ಕೋಟಿ ರೂಪಾಯಿ ಮೌಲ್ಯದ ಇ-ಕೋರ್ಟ್ಸ್ ಪ್ರಾಜೆಕ್ಟ್ ನ ಮೂರನೇ ಹಂತದ ಬಾಗವಾಗಿ AI ಆಧಾರಿತ – ಸ್ವಯಂಚಾಲಿತ ಪ್ರಕರಣ ನಿರ್ವಹಣೆ, ಕಾನೂನು ಸಂಶೋಧನೆ ಮತ್ತು ದಾಖಲೀಕರಣ, ಪ್ರಕರಣ ದಾಖಲಾತಿ ಮತ್ತು ನ್ಯಾಯಾಲಯದ ಕಾರ್ಯವಿಧಾನಗಳು, ಪ್ರಕರಣದ ಫಲಿತಾಂಶಗಳಲ್ಲಿ ಮುನ್ಸೂಚಕ ವಿಶ್ಲೇಷಣೆ ಮತ್ತು ಬಳಕೆದಾರರ ಸಹಾಯಕ್ಕಾಗಿ AI ಚಾಟ್‌ಬಾಟ್‌ಗಳಂತಹ ಉಪಕ್ರಮಗಳು ಭಾರತದ ಕಾನೂನು ವ್ಯವಸ್ಥೆಯನ್ನು ಮರುರೂಪಿಸುತ್ತಿವೆ. ಇವು ಕಾನೂನು ಪ್ರಕ್ರಿಯೆಗಳನ್ನು ವೇಗವಾಗಿ, ಚುರುಕಾಗಿ ಮತ್ತು ಹೆಚ್ಚು ಪಾರದರ್ಶಕವಾಗಿಸುತ್ತಿವೆ. ಅವುಗಳಲ್ಲಿ ಯಂತ್ರ ಕಲಿಕೆ (ML), ನೈಸರ್ಗಿಕ ಭಾಷಾ ಸಂಸ್ಕರಣೆ (NLP), ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (OCR), ಯಾಂತ್ರಿಕ ಭಾಷಾ ಅನುವಾದ ಮತ್ತು ಪ್ರಿಡಿಕ್ಟಿವ್ ಅನಾಲಿಟಿಕ್ಸ್ ಸೇರಿದಂತೆ ಅನೇಕ AI-ಚಾಲಿತ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮಾರ್ಚ್ 2025 ರ ವರಗೆ, ಇವತ್ತು ಸಾವಿರಕ್ಕೂ ಹೆಚ್ಚು ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಹದಿನಾರು ಪ್ರಾಂತೀಯ ಭಾಷೆಗಳಿಗೆ AI-ಸಹಾಯದ ಕಾನೂನು ಅನುವಾದ ಪರಿಕರಗಳನ್ನು ಬಳಸಿಕೊಂಡು ಅನುವಾದ ಮಾಡಲಾಗಿದೆ. ಇದೆ ಮಾರ್ಚ್ ತಿಂಗಳಲ್ಲಿ ಅನಾವರಣಗೊಂಡ “ಸುಪ್ರೀಂ ಕೋರ್ಟ್ ಪೋರ್ಟಲ್ ಫಾರ್ ಅಸಿಸ್ಟೆನ್ಸ್ ಇನ್ ಕೋರ್ಟ್ಸ್ ಎಫಿಷಿಯನ್ಸಿ”(SUPACE), ನ್ಯಾಯಾಧೀಶರಿಗೆ ತಮ್ಮ ಕೆಲಸದ ಹೊರೆ ನಿಭಾಯಿಸಲು ಸಹಾಯ ಮಾಡಲು ಭಾರತದ ಸುಪ್ರೀಂ ಕೋರ್ಟ್ ಅಭಿವೃದ್ಧಿಪಡಿಸಿದ AI ಆಧಾರಿತ ಪೋರ್ಟಲ್ ಆಗಿದೆ. ಇದು ಕಾನೂನು ಸಂಶೋಧನೆಯನ್ನು ಸುಗಮಗೊಳಿಸುವುದು, ಸಂಬಂಧಿತ ಪ್ರಕರಣದ ಪೂರ್ವನಿದರ್ಶನಗಳನ್ನು ಗುರುತಿಸುವುದು ಮತ್ತು ತೀರ್ಪುಗಳನ್ನು ಸಂಕ್ಷೇಪಿಸುವುದು, ಅಂತಿಮವಾಗಿ ನ್ಯಾಯಾಂಗ ಪ್ರಕ್ರಿಯೆಯ ದಕ್ಷತೆ ಮತ್ತು ವೇಗವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಭಾರತದ ಪೊಲೀಸ್ ವ್ಯವಸ್ಥೆಯಲ್ಲಿ AI ಬಳಕೆ :-

ಭಾರತದ ವಿವಿಧ ರಾಜ್ಯ ಪೊಲೀಸ್ ವ್ಯವಸ್ಥೆಗಳಲ್ಲಿ ಅಪರಾಧ ಪತ್ತೆ, ಕಣ್ಗಾವಲು, ದಾಖಲಾತಿ, ವಿಶ್ಲೇಷಣೆ ಮತ್ತು ಅಪರಾಧ ತನಿಖೆಗಳ ದಕ್ಷತೆ ಹೆಚ್ಚಿಸಲು, AI ಅನ್ನು ಸಂಯೋಜಿಸಲಾಗುತ್ತಿದೆ. ಅಂತಹ ಅಳವಡಿಸಿದ ವ್ಯವಸ್ಥೆಗಳಲ್ಲಿ ಮುಖ್ಯವಾದವು – ಮುನ್ಸೂಚಕ ಪೋಲೀಸಿಂಗ್(ಅಪರಾಧ ಮಾದರಿಗಳು, ಹೆಚ್ಚಿನ ಅಪಾಯದ ಪ್ರದೇಶಗಳು ಮತ್ತು ಅಪರಾಧ ನಡವಳಿಕೆಯನ್ನು AI ವಿಶ್ಲೇಷಿಸುತ್ತವೆ ಮತ್ತು ಅದನ್ನು ಬಳಸಿ ಕಾನೂನು ಜಾರಿ ಸಂಸ್ಥೆಗಳು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ), AI-ಚಾಲಿತ ಸ್ಪೀಚ್-ಟು-ಟೆಕ್ಸ್ಟ್ ಪರಿಕರಗಳನ್ನು ಬಳಸಿ ಎಫ್‌ಐಆರ್ ಮತ್ತು ಪ್ರಕರಣ ವಿಚಾರಣೆಗಳ ದಾಖಲಾತಿ, AI ಬಳಸಿ ಸಾಕ್ಷಿಗಳ ಸಾಕ್ಷ್ಯ ವಿಶ್ಲೇಷಣೆ ಮತ್ತು ನ್ಯಾಯಾಲಯದ ಸಾಕ್ಷಿಗಳ ಮೌಲ್ಯಮಾಪನ, ಇ-ಪ್ರಿಸನ್ಸ್ ಮತ್ತು ಇ-ಫೋರೆನ್ಸಿಕ್ಸ್ ಡೇಟಾಬೇಸ್‌ಗಳ ಏಕೀಕರಣದೊಂದಿಗೆ ಅಪರಾಧಿ ಮತ್ತು ಅಪರಾಧ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಮ್‌ಗಳ(CCTNS) ದಕ್ಷತೆಯನ್ನು AI ಹೆಚ್ಚಿಸುತ್ತಿದೆ. ಭಾರತ ಸರ್ಕಾರದ ಮುಖ ಗುರುತಿಸುವಿಕೆ ಯೋಜನೆಯ ಡೇಟಾಬೇಸ್ ನಲ್ಲಿ 70 ಕೋಟಿಗು ಹೆಚ್ಚು ಭಾರತೀಯ ನಾಗರಿಕರ ಬಾವಚಿತ್ರಗಳು ಇದೆ, ಅದರಲ್ಲಿ 20 ಲಕ್ಷಕ್ಕೂ ಹೆಚ್ಚು ಲೈಂಗಿಕ ಅಪರಾಧಿಗಳ ಬಾವಚಿತ್ರಗಳಿವೆ. ಅದನ್ನು ಬಳಸಿ 7 ಭಾರತೀಯ ರೈಲ್ವೆ ನಿಲ್ದಾಣಗಳಲ್ಲಿ ಇದೆ ಜುಲೈ 21 ರಿಂದ ಲೈಂಗಿಕ ಅಪರಾಧಿಗಳನ್ನು ಪತ್ತೆಹಚ್ಚಲು AI ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇಗಾ AI ಬಳಸಿಕೊಂಡು CCTV ಫೂಟೇಜ್‌ನಿಂದ ರಿವರ್ಸ್ ಇಮೇಜ್ ಹೊಂದಾಣಿಕೆಯನ್ನು ಬಳಸಿಕೊಂಡು ಅಪರಾಧಿಗಳನ್ನು ಗುರುತಿಸಲಾಗಿದೆ ಮತ್ತು ಪೊಲೀಸ್, ವಾಹನ ನಂಬರ್ ಪ್ಲೇಟ್‌ಗಳು ನಿಜವೋ ಅಥವಾ ನಕಲಿಯೋ ಎಂದು ತಕ್ಷಣವೇ ಗುರುತಿಸಲು ಸಾಧ್ಯವಾಗಿದೆ.

ವಕೀಲರು AI ಅನ್ನು ತಮ್ಮ ಕೆಲಸಕ್ಕೆ ಹೇಗೆ ಬಳಸಬಹುದು?

ಸಾಮಾನ್ಯ ಜ್ಞಾನದಂತೆ, ವಕೀಲರ ಕೆಲಸ ಎಂದರೆ ಕೇವಲ ನ್ಯಾಯಾಲಯದಲ್ಲಿ ವಾದ ಮಾಡುವುದಲ್ಲ. ಅದರ ಹಿಂದೆ ಅಗಾಧವಾದ ಸಂಶೋಧನೆ, ದಾಖಲೆಗಳ ವಿಶ್ಲೇಷಣೆ, ಕರಡು ತಯಾರಿಕೆ ಹೀಗೆ ಹಲವು ಹಂತಗಳಿವೆ. ದಾಖಲೆಗಳ ಪರಿಶೀಲನೆ ಮತ್ತು ವಿಶ್ಲೇಷಣೆಯಲ್ಲಿ, ಕಾನೂನು ಸಂಶೋಧನೆ, ಕಾನೂನು ದಾಖಲೆಗಳ ಕರಡು ತಯಾರಿಕೆ ಮತ್ತು ಕಕ್ಷಿದಾರರು ಕೊಟ್ಟಿರುವ ದಾಖಲೆಗಳ ಕರಡು ವಿಶ್ಲೇಷಣೆ, ಹಿಂದಿನ ಪ್ರಕರಣಗಳನ್ನು ವಿಶ್ಲೇಷಿಸಿ ಈಗಿನ ನಿರ್ದಿಷ್ಟ ಪ್ರಕರಣದ ಸಂಭಾವ್ಯ ಫಲಿತಾಂಶಗಳು ಅಥವಾ ಅಪಾಯಗಳನ್ನು ಊಹಿಸಲು, ಸಮಯದ ದಾಖಲೆ, ಬಿಲ್ಲಿಂಗ್, ಕಕ್ಷಿದಾರರ ಪ್ರವೇಶ ಮತ್ತು ವಿಚಾರಣೆಗಳ ವೇಳಾಪಟ್ಟಿಯಂತಹ ಆಡಳಿತಾತ್ಮಕ ಕಾರ್ಯಗಳನ್ನು AI ಸರಳೀಕರಿಸುತ್ತದೆ. ಇತ್ತೀಚಿನ ದಿನಗಳಲ್ಲಿ, ಭಾರತದಲ್ಲಿ AI ಕಾನೂನು ತಂತ್ರಜ್ಞಾನ (Legal Tech) ವೇಗವಾಗಿ ಬೆಳೆಯುತ್ತಿದೆ, ಅದು ವಕೀಲರು, ಕಾನೂನು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಸಹಾಯಕವಾಗಿವೆ. ಅವುಗಳಲ್ಲಿ ಪ್ರಮುಖವಾದವು – Legora (ದಾಖಲೆಗಳನ್ನು ಪರಿಶೀಲಿಸಲು ಮತ್ತು ಸಂಶೋಧಿಸಲು, ದಾಖಲೆಗಳ ಕರಡುಗಳನ್ನು ತಯಾರಿಸಲು ಮತ್ತು ನಿಖರವಾದ ಸಲಹೆ ನೀಡಲು, ನಿರ್ಣಾಯಕ ಅಂಶಗಳನ್ನು ಹೋಲಿಸಲು ಮತ್ತು ಅಸಂಗತತೆಗಳನ್ನು ಗುರುತಿಸಲು ಇದು ಅನುವು ಮಾಡಿಕೊಡುತ್ತದೆ), LawSimpl (ದಾಖಲೆಗಳ ಕರಡು ತಯಾರಿಕೆ , ಪರಿಶೀಲನೆ ಮತ್ತು ಕಾನೂನು ಸಂಶೋಧನೆಯನ್ನು ಸುಲಭಗೊಳಿಸುತ್ತದೆ), ManuPatra (ಇದು ಭಾರತದ ಅತ್ಯಾಧುನಿಕ ಕಾನೂನು ಸಂಶೋಧನಾ ವೇದಿಕೆಯಾಗಿದೆ), ಮತ್ತು Draft Bot Pro (ಇದನ್ನು ಕಾನೂನಿನ ವಿಷಯಗಳ ChatGPT ಎನ್ನುತ್ತಾರೆ).

ನ್ಯಾಯಾಧೀಶರು, ಪೊಲೀಸರು ಮತ್ತು ಕಾನೂನು ವೃತ್ತಿಗೆ AI ತರುವ ಅನುಕೂಲಗಳು :

ನ್ಯಾಯಾಧೀಶರು, ಪೊಲೀಸರು ಮತ್ತು ಕಾನೂನು ವೃತ್ತಿಗೆ AI ತರುವ ಅನಾನುಕೂಲಗಳು/ಅಪಾಯಗಳು :

ಕೃತಕ ಬುದ್ಧಿಮತ್ತೆಯು ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಬದಲಾಯಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಇದು ಕೆಲಸವನ್ನು ವೇಗಗೊಳಿಸುತ್ತದೆ, ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ನ್ಯಾಯವನ್ನು ಹೆಚ್ಚು ಜನರಿಗೆ ತಲುಪಿಸಲು ಸಹಾಯ ಮಾಡುತ್ತದೆ. ಆದರೆ, ಅದರ ಅಪಾಯಗಳನ್ನು ನಿರ್ಲಕ್ಷಿಸುವುದು ತಪ್ಪು. ತಪ್ಪು ಮಾಹಿತಿ, ಪೂರ್ವಾಗ್ರಹಗಳು ಮತ್ತು ಪಾರದರ್ಶಕತೆಯ ಕೊರತೆಯಂತಹ ಸವಾಲುಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. AI ನಮ್ಮ ಸಹಾಯಕ್ಕೆ ಇದೆಯೇ ಹೊರತು ನಮ್ಮ ಸ್ಥಾನವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳುವುದಿಲ್ಲ ಎಂಬುದನ್ನು ನೆನಪಿಡುವುದು ಮುಖ್ಯ. ಮಾನವನ ವಿವೇಚನೆ, ನೈತಿಕತೆ ಮತ್ತು ಸಹಾನುಭೂತಿ ಯಾವಾಗಲೂ ಕಾನೂನು ಮತ್ತು ನ್ಯಾಯದ ಹೃದಯವಾಗಿ ಉಳಿಯುತ್ತದೆ. AI ಅನ್ನು ಜವಾಬ್ದಾರಿಯುತವಾಗಿ ಬಳಸಿದಾಗ ಮಾತ್ರ ನಾವು ನ್ಯಾಯಯುತ ಮತ್ತು ಪರಿಣಾಮಕಾರಿ ಕಾನೂನು ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯ.

Exit mobile version