Site icon

ಸೈಬರ್ ಸೆಕ್ಯೂರಿಟಿ ಆಡಿಟರ್ ಮತ್ತು ಫೋರೆನ್ಸಿಕ್ ಎಕ್ಸ್ಪರ್ಟ್ ಉದ್ಯೋಗಾವಕಾಶಗಳ ಕಿರು ಪರಿಚಯ

Cyber Forensic Expert

ಕಳೆದ ಕೆಲವು ಅಂಕಣಗಳಿಂದ, ನಾನು ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡುತ್ತಿದ್ದೇನೆ. ಕಳೆದ ವಾರದ ಅಂಕಣದಲ್ಲಿ, ನಾನು ಹತ್ತು ಪ್ರವೇಶ ಮಟ್ಟದ ಉದ್ಯೋಗಾವಕಾಶಗಳ ಪೈಕಿ ಐದು-ಆರನೇ ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳಾದ ಸೈಬರ್ ಸೆಕ್ಯೂರಿಟಿ ಎಂಜಿನಿಯರ್‌ ಮತ್ತು ಸೈಬರ್‌ ಸೆಕ್ಯುರಿಟಿ ಅಡ್ಮಿನಿಸ್ಟ್ರೇಟರ್ ಬಗ್ಗೆ ತಿಳಿಸಿಕೊಟಿದ್ದೆ. ಇಂದಿನ ಅಂಕಣದಲ್ಲಿ ನಾನು ಮತ್ತೆರಡು ಸೈಬರ್ ಸೆಕ್ಯೂರಿಟಿ ಆಡಿಟರ್ ಮತ್ತು ಸೈಬರ್ ಫೋರೆನ್ಸಿಕ್ ಎಕ್ಸ್ಪರ್ಟ್ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡಲಿದ್ದೇನೆ, ಮುಖ್ಯವಾಗಿ ಆ ಉದ್ಯೋಗದ ಲಕ್ಷಣಗಳು/ಜವಾಬ್ದಾರಿಗಳು, ಕೌಶಲ್ಯಗಳು, ವಿದ್ಯಾರ್ಹತೆ, ಸರ್ಟಿಫಿಕೇಷನ್ಸ್, ಸಂಬಳ, ಸಿಗುವ ಕೆಲಸದ ಶೀರ್ಷಿಕೆಗಳು(ಜಾಬ್ ಟೈಟಲ್) ಮತ್ತು ವೃತ್ತಿ ಬೆಳವಣಿಗೆ(ಕೆರಿಯರ್ ಪ್ರೊಗ್ರೆಶನ್ಸ್) ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ.

ಸೈಬರ್ ಸೆಕ್ಯೂರಿಟಿ ಆಡಿಟರ್ ಉದ್ಯೋಗಾವಕಾಶಗಳ ಕಿರು ಪರಿಚಯ:-

ಸೈಬರ್ ಸೆಕ್ಯೂರಿಟಿ ಆಡಿಟರ್ (ಪರಿಶೋಧಕರು) ಅಥವಾ ಐಟಿ ಪರಿಶೋಧಕರು ಅಥವಾ ಸೈಬರ್ ಪರಿಶೋಧಕರು ಅಥವಾ ಭದ್ರತಾ ಪರಿಶೋಧಕರು ಪರಿಶೋಧನಾ ಪಟ್ಟಿಗಳನ್ನು ವಿನ್ಯಾಸಗೊಳಿಸುವ ಮತ್ತು ಪರಿಶೋಧನೆ ಮಾಡುವ ಮೂಲಕ ಸಂಸ್ಥೆಯ ವ್ಯವಸ್ಥೆಗಳ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅವರು ಅಸ್ತಿತ್ವದಲ್ಲಿರುವ ಸೈಬರ್ ಭದ್ರತಾ ವ್ಯವಸ್ಥೆಗಳ ಮತ್ತು ಆನ್‌ಲೈನ್ ಭದ್ರತಾ ವ್ಯವಸ್ಥೆಗಳ ಸ್ಥಿತಿಯ ಪರಿಶೋಧಿಸಲು ಮತ್ತು ಸಿಸ್ಟಮ್‌ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆಯೇ ಎಂಬುದರ ವಿಶ್ಲೇಷಣೆ ಮತ್ತು ಪರಿಶೀಲನೆ ಮಾಡಲು ಸಂಸ್ಥೆಯ ಗಾತ್ರವನ್ನು ಅವಲಂಬಿಸಿ ಸಂಸ್ಥೆಯ ವಿವಿಧ ವಿಭಾಗಗಳು, ಇಲಾಖೆಗಳು ಮತ್ತು ಸಂಗಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಾರೆ. ಅವರ ಮುಖ್ಯ ಜವಾಬ್ದಾರಿಗಳು ಮತ್ತು ಕರ್ತವ್ಯಗಳು – ಭದ್ರತಾ ನಿಯಂತ್ರಣಗಳು ಮತ್ತು ಮಾಹಿತಿ ವ್ಯವಸ್ಥೆಗಳ ಸ್ವತಂತ್ರ ಅಥವಾ ಆಂತರಿಕ ವಿಮರ್ಶೆಯನ್ನು ನಡೆಸುವುದು, ಸೈಬರ್‌ ಸೆಕ್ಯುರಿಟಿ ಡಿಫೆನ್ಸ್‌ನ ಪ್ರತ್ಯೇಕ ಘಟಕಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪರೀಕ್ಷಿಸುವುದು, ಯಾವುದೇ ಇತ್ತೀಚಿನ ಉಲ್ಲಂಘನೆಗಳು ಅಥವಾ ಭದ್ರತಾ ಕಾಳಜಿಗಳನ್ನು ವಿಶ್ಲೇಷಿಸುವುದು/ತನಿಖೆ ಮಾಡುವುದು, ಆಂತರಿಕ ಭದ್ರತಾ ವ್ಯವಸ್ಥೆಗಳು, ನಿಯಂತ್ರಣಗಳು ಮತ್ತು ನೀತಿಗಳ ಮೌಲ್ಯಮಾಪನ ಮಾಡುವುದು, ಕಾನೂನುಗಳು ಮತ್ತು ನಿಬಂಧನೆಗಳ ಅನುಸರಣೆಯನ್ನು ಖಚಿತಪಡಿಸುವುದು, ಮತ್ತು ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರಿಗೆ ಆಡಿಟ್ ಫಲಿತಾಂಶಗಳನ್ನು ವ್ಯಾಖ್ಯಾನಿಸುವ ತಾಂತ್ರಿಕ ವರದಿಗಳನ್ನು, ಬೇಕಿರುವ ಬದಲಾವಣೆಗಳು, ಅದಕ್ಕೆ ತಗಲುವ ವೆಚ್ಚ ಮತ್ತು ಸಂಸ್ಥೆಗೆ ಆಗುವ ಪ್ರಯೋಜನಗಳ ವಿಶ್ಲೇಷಣೆಯನ್ನು ಬರೆಯುವುದಾಗಿರುತ್ತದೆ.
ಈ ಹುದ್ದೆಗೆ ಅವರು ಕಂಪ್ಯೂಟರ್/ಕಾನೂನು ಸಂಬಂಧಿತ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿ ಹೊಂದಿದ್ದರೆ ಉತ್ತಮ, ಮುಖ್ಯವಾಗಿ ಅವರಿಗೆ ವಿವಿಧ ಆಪರೇಟಿಂಗ್ ಸಿಸ್ಟಮ್, ನೆಟ್‌ವರ್ಕಿಂಗ್ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಷನ್, ಸೆಕ್ಯೂರಿಟಿ ಉಪಕರಣ/ಪರಿಕರಗಳ ಜ್ಞಾನ, ಡಿಜಿಟಲ್ ಫೊರೆನ್ಸಿಕ್ಸ್, ಡೇಟಾಬೇಸ್, ಕಾನೂನು ಮತ್ತು ಪ್ರಾಜೆಕ್ಟ್ ಮ್ಯಾನೇಜುಮೆಂಟ್ ಕೌಶಲ್ಯಗಳು ಇರಬೇಕು. ಇದರ ಜೊತೆಗೆ ತಾಂತ್ರಿಕವಲ್ಲದ ಕೌಶಲ್ಯಗಳಾದ ವಿಶ್ಲೇಷಣಾತ್ಮಕ ಚಿಂತನೆ, ಸಮಸ್ಯೆ ಪರಿಹಾರ, ಸಂವಹನ, ತಂಡ ಪ್ರವೃತ್ತಿ ಮತ್ತು ಸೂಕ್ಷ್ಮ ದೃಷ್ಟಿ ಇರಬೇಕು. ಉದ್ಯಮ ಪ್ರಮಾಣೀಕರಣ(ಸರ್ಟಿಫಿಕೇಷನ್ಸ್) ಗಳಾದ ISACA’s Certified Information Systems Auditor (CISA), CompTIA Security+, Certified Information Security Manager (CISM) ಮತ್ತು Certified in Risk and Information Systems Control (CRISC) ನಿಮಗೆ ಉತ್ತಮ ಉದ್ಯೋಗ/ಸಂಬಳ ಪಡೆಯಲು ಸಹಾಯಕವಾಗಬಹುದು. ಈ ಉದ್ಯೋಗಕ್ಕೆ ನೀವು ಮೊದಲ ವರ್ಷದಲ್ಲಿ 5-15 ಲಕ್ಷದವರೆಗೆ ಸಂಬಳವನ್ನು ನೀರಿಕ್ಷಿಸಬಹುದು. ಇಲ್ಲಿ ನೀವು ಸೈಬರ್‌ ಸೆಕ್ಯುರಿಟಿ ಆಡಿಟರ್ ನಿಂದ ಶುರು ಮಾಡಿ ಸೀನಿಯರ್/ಲೀಡ್ ಸೆಕ್ಯುರಿಟಿ ಆಡಿಟರ್, ಸೈಬರ್ ಸೆಕ್ಯೂರಿಟಿ ಮ್ಯಾನೇಜರ್/ಕನ್ಸಲ್ಟೆಂಟ್/ವೈಸ್ ಪ್ರೆಸಿಡೆಂಟ್ ಹುದ್ದೆವರೆಗೂ ಹೋಗಬಹುದು.

ಸೈಬರ್ ಫೋರೆನ್ಸಿಕ್ ಎಕ್ಸ್ಪರ್ಟ್ ಉದ್ಯೋಗಾವಕಾಶಗಳ ಕಿರು ಪರಿಚಯ :-

ಸೈಬರ್ ಫೋರೆನ್ಸಿಕ್ ಎಕ್ಸ್ಪರ್ಟ್ ಅಥವಾ IT ಫೋರೆನ್ಸಿಕ್ ಎಕ್ಸ್ಪರ್ಟ್ ಅಥವಾ ಡಿಜಿಟಲ್ ಡಿಟೆಕ್ಟಿವ್(ಪತ್ತೇದಾರಿ), ಸಂಸ್ಥೆಯ ಕಂಪ್ಯೂಟರ್‌ಗಳು, ನೆಟ್‌ವರ್ಕ್‌ಗಳು ಮತ್ತು ಇತರ ಸಂಬಂಧಿತ ಮಾಹಿತಿ ಮತ್ತು ಐಟಿ ಉಪಕರಣಗಳಿಂದ ಸೈಬರ್‌ಕ್ರೈಮ್‌ನ ಯಾವುದೇ ಸಂಭವನೀಯ ಪುರಾವೆಗಳನ್ನು ಕಂಡುಹಿಡಿಯುವ, ಸಂಗ್ರಹಿಸುವ ಮತ್ತು ಮೌಲ್ಯಮಾಪನ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇದಲ್ಲದೆ ಅವರು ಹಾಗೆ ಸಿಕ್ಕ ಎಲ್ಲ ಪುರಾವೆಗಳನ್ನು, ಸಂಬಂಧಪಟ್ಟ ಮಾಹಿತಿಯನ್ನು ಕಾನೂನು ನಿಗದಿಪಡಿಸಿರುವ ರೀತಿಯಲ್ಲಿ ಬೇರ್ಪಡಿಸಿ ಅಪರಾಧವನ್ನು ಸಾಬೀತುಪಡಿಸುವುದಕ್ಕೆ ಬೇಕಾದ ಹಾಗೆ ಪ್ರಸ್ತುತ ಪಡಿಸುವುದು, ಸಂಸ್ಥೆಯ ಸಿಸ್ಟಮ್ಸ್, ನೆಟ್ವರ್ಕ್ ಮತ್ತು ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ಪತ್ತೆ ಮಾಡುವುದು ಮತ್ತು ಅದರ ನಿವಾರಣೆಗೆ ಬೇಕಾದ ತಂತ್ರಗಳನ್ನು ಸಿದ್ಧಪಡಿಸುವುದಾಗಿರುತ್ತದೆ. ಈಗಾಗಲೇ ಬಂದಿರುವ ಸೈಬರ್‌ ಸುರಕ್ಷತೆ ಬೆದರಿಕೆಗಳು ಮತ್ತು ಸಂಭವಿಸಿರುವ ಭದ್ರತಾ ಉಲ್ಲಂಘನೆಗಳನ್ನು ಪತ್ತೆಹಚ್ಚಲು ಮತ್ತು ಪ್ರತಿಕ್ರಿಯಿಸಲು ಅವರು ಜವಾಬ್ದಾರರಾಗಿರುತ್ತಾರೆ. ಇದಲ್ಲದೆ ಅವರು ತಮ್ಮ ತಂಡದಲ್ಲಿರುವ ಕಿರಿಯ ಅಥವಾ ಹೊಸ ಫೋರೆನ್ಸಿಕ್ ತಜ್ಞರಿಗೆ ಪಾಠ ಮಾಡುವುದು, ಕೆಲಸ ಹಂಚುವುದು ಮತ್ತು ಅವರ ಕೆಲಸದ ಮೇಲ್ವಿಚಾರಣೆ ಮಾಡುವ ಹೊಣೆ ಇರುತ್ತದೆ. ಸೈಬರ್ ಫೋರೆನ್ಸಿಕ್ ಎಕ್ಸ್ಪರ್ಟ್ ಮೂರು ವಿಭಾಗಗಳಲ್ಲಿ, ಅಂದರೆ ಸೈಬರ್ ಸೆಕ್ಯೂರಿಟಿ ಅನಾಲಿಸಿಸ್, ಮೊಬೈಲ್ ಫೊರೆನ್ಸಿಕ್ಸ್ ಮತ್ತು ನೆಟ್ವರ್ಕ್ ಡಿಫೆನ್ಸ್ ಎನಾಲಿಸ್ಟ್ ಆಗಿ ಪರಿಣಿತಿ ಪಡೆಯಬಹುದು.
ಈ ಹುದ್ದೆಗೆ ಅವರು ಕಂಪ್ಯೂಟರ್/ಫೋರೆನ್ಸಿಕ್ ಸಂಬಂಧಿತ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿ ಹೊಂದಿದ್ದರೆ ಉತ್ತಮ, ಮುಖ್ಯವಾಗಿ ಅವರಿಗೆ ವಿವಿಧ ಆಪರೇಟಿಂಗ್ ಸಿಸ್ಟಮ್, ನೆಟ್‌ವರ್ಕಿಂಗ್ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಷನ್, ಸೆಕ್ಯೂರಿಟಿ ಉಪಕರಣ/ಪರಿಕರಗಳ ಜ್ಞಾನ, ಡಿಜಿಟಲ್ ಫೊರೆನ್ಸಿಕ್ಸ್, ಡೇಟಾಬೇಸ್, ಕಾನೂನು, ಹ್ಯಾಕಿಂಗ್ ಮತ್ತು ಪ್ರಾಜೆಕ್ಟ್ ಮ್ಯಾನೇಜುಮೆಂಟ್ ಕೌಶಲ್ಯಗಳು ಇರಬೇಕು. ಇದರ ಜೊತೆಗೆ ತಾಂತ್ರಿಕವಲ್ಲದ ಕೌಶಲ್ಯಗಳಾದ ವಿಶ್ಲೇಷಣಾತ್ಮಕ ಚಿಂತನೆ, ಸಮಸ್ಯೆ ಪರಿಹಾರ, ಸಂವಹನ, ತಂಡ ಪ್ರವೃತ್ತಿ ಮತ್ತು ಸೂಕ್ಷ್ಮ ದೃಷ್ಟಿ ಇರಬೇಕು. ಉದ್ಯಮ ಪ್ರಮಾಣೀಕರಣ(ಸರ್ಟಿಫಿಕೇಷನ್ಸ್) ಗಳಾದ GIAC Certified Forensic Analyst (GCFA), Computer Hacking Forensic Investigator (CHFI), GIAC Certified Forensic Examiner (GCFE), Certified Ethical Hacker (C|EH) ಮತ್ತು Certified Information Systems Security Professional (CISSP) ನಿಮಗೆ ಉತ್ತಮ ಉದ್ಯೋಗ/ಸಂಬಳ ಪಡೆಯಲು ಸಹಾಯಕವಾಗಬಹುದು. ಈ ಉದ್ಯೋಗಕ್ಕೆ ಅವರು ಮೊದಲ ವರ್ಷದಲ್ಲಿ6 -15 ಲಕ್ಷದವರೆಗೆ ಸಂಬಳವನ್ನು ನೀರಿಕ್ಷಿಸಬಹುದು. ಅವರು ಸರಕಾರಿ(ಪೊಲೀಸ್, ಡಿಫೆನ್ಸ್, ಕಾಲೇಜು) ಮತ್ತು ಖಾಸಗಿ(ಸೈಬರ್ ಸೆಕ್ಯೂರಿಟಿ ಕನ್ಸಲ್ಟಿಂಗ್, ಕಾನೂನು, IT) ಸಂಸ್ಥೆಗಳಲ್ಲಿ ಉದ್ಯೋಗ ಹುಡುಕಬಹುದು. ಇಲ್ಲಿ ಅವರು ಸೈಬರ್‌ ಸೆಕ್ಯುರಿಟಿ ಫೋರೆನ್ಸಿಕ್ ಅನಾಲಿಸ್ಟ್ ನಿಂದ ಶುರು ಮಾಡಿ ಸೀನಿಯರ್/ಲೀಡ್ ಫೋರೆನ್ಸಿಕ್ ಅನಾಲಿಸ್ಟ್, ಸೈಬರ್ ಫೋರೆನ್ಸಿಕ್ ಎಕ್ಸ್ಪರ್ಟ್/ಸ್ಪೆಷಲಿಸ್ಟ್/ಮ್ಯಾನೇಜರ್/ಕನ್ಸಲ್ಟೆಂಟ್/ಸೈಂಟಿಸ್ಟ್ ಹುದ್ದೆವರೆಗೂ ಹೋಗಬಹುದು.

ಸೈಬರ್ ಸೆಕ್ಯೂರಿಟಿ ಕೌಶಲ್ಯಗಳನ್ನು ಎಲ್ಲಿ ಕಲಿಯಬಹುದು?

ನೀವು ಮೇಲೆ ತಿಳಿಸಿದ ತಂತ್ರಿಕ ಮತ್ತು ತಾಂತ್ರಿಕವಲ್ಲದ ಕೌಶಲ್ಯಗಳನ್ನು ಕಲಿಯಲು ನೀವು ಆಫ್‌ಲೈನ್ ಅಥವಾ ಆನ್ಲೈನ್ ಮಾದ್ಯಮದಲ್ಲಿ ಕಲಿಯಬಹುದು. ಆಫ್‌ಲೈನ್ ಮಾದ್ಯಮದಲ್ಲಿ ನೀವು ಕಾಲೇಜುಗಳಲ್ಲಿ (ಕರ್ನಾಟಕ ಮತ್ತು ಭಾರತ) ಮತ್ತು ಆನ್ಲೈನ್ ಮಾಧ್ಯಮದಲ್ಲಿ ಕೂಡ ಕಲಿಯಬಹುದು. ಅದು ಡಿಪ್ಲೋಮ, ಪದವಿ, ಸ್ನಾತಕೋತ್ತರ ಪದವಿ ಅಥವಾ ಸರ್ಟಿಫಿಕೇಷನ್ ಕೋರ್ಸ್ ಆಗಿರಬಹುದು, ಇಂತಹ ಕೋರ್ಸಗಳು ನಿಮಗೆ ಉಚಿತವಾಗಿ (YouTube, udemy, simplilearn ಇತ್ಯಾದಿ) ಕೂಡ ದೊರೆಯುತ್ತದೆ, ಆದರೆ ಕಲಿತ ಜ್ಞಾನದ ಪ್ರಮಾಣೀಕರಣಕ್ಕಾಗಿ ನೀವು ಮೇಲೆ ತಿಳಿಸಿದ ನಿಮ್ಮ ನೇಚ್ಚಿನ ಉದ್ಯೋಗಕ್ಕೆ ಅವಶ್ಯಕವಾದ ಸರ್ಟಿಫಿಕೇಷನ್ಸ್ ಅನ್ನು ಮಾಡಿಕೊಳ್ಳಬೇಕಾಗುತ್ತದೆ.

Exit mobile version