ಕಳೆದ ಕೆಲವು ಅಂಕಣದಿಂದ ನಾನು ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡುತ್ತಿದ್ದೇನೆ. ಕಳೆದ ವಾರದ ಅಂಕಣದಲ್ಲಿ, ನಾನು ಹತ್ತು ಪ್ರವೇಶ ಮಟ್ಟದ ಉದ್ಯೋಗಾವಕಾಶಗಳ ಪೈಕಿ ಮೂರು-ನಾಲ್ಕು ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳಾದ ಸೈಬರ್ ಇನ್ಸಿಡೆಂಟ್ ರೆಸ್ಪಾಂಡರ್ ಮತ್ತು ಕ್ರಿಪ್ಟೋಗ್ರಾಫರ್ ಬಗ್ಗೆ ತಿಳಿಸಿಕೊಟಿದ್ದೆ. ಇಂದಿನ ಅಂಕಣದಲ್ಲಿ ನಾನು ಮತ್ತೆರಡು ಸೈಬರ್ ಸೆಕ್ಯೂರಿಟಿ ಎಂಜಿನಿಯರ್ ಮತ್ತು ಸೈಬರ್ ಸೆಕ್ಯುರಿಟಿ ಅಡ್ಮಿನಿಸ್ಟ್ರೇಟರ್ ಉದ್ಯೋಗಾವಕಾಶಗಳಾದ ಬಗ್ಗೆ ತಿಳಿಸಿಕೊಡಲಿದ್ದೇನೆ, ಮುಖ್ಯವಾಗಿ ಆ ಉದ್ಯೋಗದ ಲಕ್ಷಣಗಳು/ಜವಾಬ್ದಾರಿಗಳು, ಕೌಶಲ್ಯಗಳು, ವಿದ್ಯಾರ್ಹತೆ, ಸರ್ಟಿಫಿಕೇಷನ್ಸ್, ಸಂಬಳ, ಸಿಗುವ ಕೆಲಸದ ಶೀರ್ಷಿಕೆಗಳು(ಜಾಬ್ ಟೈಟಲ್) ಮತ್ತು ವೃತ್ತಿ ಬೆಳವಣಿಗೆ(ಕೆರಿಯರ್ ಪ್ರೊಗ್ರೆಶನ್ಸ್) ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ.
ಸೈಬರ್ ಸೆಕ್ಯುರಿಟಿ ಎಂಜಿನಿಯರ್ ಉದ್ಯೋಗಾವಕಾಶಗಳ ಕಿರು ಪರಿಚಯ :-
ಸೈಬರ್ ಸೆಕ್ಯುರಿಟಿ ಎಂಜಿನಿಯರ್‌ಗಳು ಸೈಬರ್ ಅಪರಾಧಿಗಳು, ಸೈಬರ್ ದಾಳಿಗಳು ಮತ್ತು ನಿರಂತರ ಆನ್‌ಲೈನ್ ಬೆದರಿಕೆಗಳಿಂದ ಸಂಸ್ಥೆಯನ್ನು ರಕ್ಷಿಸಲು ಸುರಕ್ಷಿತ ವ್ಯವಸ್ಥೆ, ಸಾಧನ ಮತ್ತು ನೆಟ್‌ವರ್ಕ್ ಪರಿಹಾರಗಳನ್ನು ವಿನ್ಯಾಸಗೊಳಿಸುತ್ತಾರೆ ಮತ್ತು ಕಾರ್ಯಗತಗೊಳಿಸುತ್ತಾರೆ. ಒಮ್ಮೆ ಭದ್ರತಾ ವ್ಯವಸ್ಥೆಯು ಜಾರಿಗೊಂಡ ನಂತರ ಅವರು ಅದರ ಮೇಲ್ವಿಚಾರಣೆ, ನಿರ್ವಹಣೆ ಅಥವಾ ಅಪ್‌ಗ್ರೇಡ್ ಮಾಡುವುದು, ಭದ್ರತಾ ಉಲ್ಲಂಘನೆಗಳಿಗೆ ಪ್ರತಿಕ್ರಿಯಿಸಬಹುದು, ಸಿಸ್ಟಮ್ ದೋಷಗಳನ್ನು ಪರೀಕ್ಷಿಸಿ ಗುರುತಿಸುವುದು ಮತ್ತು ಅದನ್ನು ಸರಿಪಡಿಸುವುದರ ಜೊತೆಗೆ ವ್ಯವಸ್ಥಾಪಕ ಪಾತ್ರಗಳಲ್ಲಿ ಇರುವವರಿಗೆ ವರದಿಗಳನ್ನು ಬರೆಯುವುದಾಗಿರುತ್ತದೆ. ಅವರು ಮಾಹಿತಿ ವ್ಯವಸ್ಥೆಗಳು ಮತ್ತು ಡೇಟಾದ ಗೌಪ್ಯತೆ, ಸಮಗ್ರತೆ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅವರು ಜವಾಬ್ದಾರರಾಗಿರುತ್ತಾರೆ.
ಈ ಹುದ್ದೆಗೆ ಅವರು ಕಂಪ್ಯೂಟರ್ ಸಂಬಂಧಿತ ವಿಷಯದಲ್ಲಿ ಪದವಿ/ಡಿಪ್ಲೋಮ ಹೊಂದಿದ್ದರೆ ಉತ್ತಮ, ಮುಖ್ಯವಾಗಿ ಅವರಿಗೆ ವಿವಿಧ ಆಪರೇಟಿಂಗ್ ಸಿಸ್ಟಮ್, ನೆಟ್‌ವರ್ಕಿಂಗ್ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಷನ್, ಸೆಕ್ಯೂರಿಟಿ ಉಪಕರಣ/ಪರಿಕರಗಳ ಜ್ಞಾನ, ಡಿಜಿಟಲ್ ಫೊರೆನ್ಸಿಕ್ಸ್, ಕ್ರಿಪ್ಟೋಗ್ರಫಿ, ಪ್ರೋಗ್ರಾಮಿಂಗ್ ಮತ್ತು ಸ್ಕ್ರಿಪ್ಟಿಂಗ್ ಕೌಶಲ್ಯಗಳು ಇರಬೇಕು. ಇದರ ಜೊತೆಗೆ ತಾಂತ್ರಿಕವಲ್ಲದ ಕೌಶಲ್ಯಗಳಾದ ವಿಶ್ಲೇಷಣಾತ್ಮಕ ಚಿಂತನೆ, ಸಮಸ್ಯೆ ಪರಿಹಾರ, ಸಂವಹನ, ತಂಡ ಪ್ರವೃತ್ತಿ ಮತ್ತು ಸೂಕ್ಷ್ಮ ದೃಷ್ಟಿ ಇರಬೇಕು. ಉದ್ಯಮ ಪ್ರಮಾಣೀಕರಣ(ಸರ್ಟಿಫಿಕೇಷನ್ಸ್) ಗಳಾದ CompTIA’s Security+, CompTIA’s Network+, Certified Computer Forensics Examiner ಮತ್ತು Certified Information Systems Security Professional (CISSP) ನಿಮಗೆ ಉತ್ತಮ ಉದ್ಯೋಗ/ಸಂಬಳ ಪಡೆಯಲು ಸಹಾಯಕವಾಗಬಹುದು. ಈ ಉದ್ಯೋಗಕ್ಕೆ ನೀವು ಮೊದಲ ವರ್ಷದಲ್ಲಿ 3-15 ಲಕ್ಷದವರೆಗೆ ಸಂಬಳವನ್ನು ನೀರಿಕ್ಷಿಸಬಹುದು. ಇಲ್ಲಿ ನೀವು ಸೈಬರ್ ಸೆಕ್ಯುರಿಟಿ ಎಂಜಿನಿಯರ್ ನಿಂದ ಶುರು ಮಾಡಿ ಸೀನಿಯರ್/ಲೀಡ್ ಸೆಕ್ಯುರಿಟಿ ಎಂಜಿನಿಯರ್,ಸೈಬರ್ ಸೆಕ್ಯೂರಿಟಿ ಸ್ಪೆಷಲಿಸ್ಟ್/ಮ್ಯಾನೇಜರ್/ವೈಸ್ ಪ್ರೆಸಿಡೆಂಟ್ ಹುದ್ದೆವರೆಗೂ ಹೋಗಬಹುದು.
ಸೈಬರ್ ಸೆಕ್ಯುರಿಟಿ ಅಡ್ಮಿನಿಸ್ಟ್ರೇಟರ್ ಉದ್ಯೋಗಾವಕಾಶಗಳ ಕಿರು ಪರಿಚಯ :-
ಸಂಸ್ಥೆಯ ಸೈಬರ್ ಭದ್ರತಾ ಪರಿಹಾರಗಳನ್ನು ಸ್ಥಾಪಿಸಲು, ನಿರ್ವಹಿಸಲು ಮತ್ತು ಅದರಲ್ಲಿನ ದೋಷ ನಿವಾರಣೆ ಮತ್ತು ಸೈಬರ್ ಭದ್ರತಾ ಕಾರ್ಯವಿಧಾನಗಳ ಬಗ್ಗೆ ಭದ್ರತಾ ನೀತಿಗಳು ಮತ್ತು ತರಬೇತಿ ಕೈಪಿಡಿಗಳನ್ನು ರೂಪಿಸುವುದಕ್ಕೆ ಸೈಬರ್ ಸೆಕ್ಯೂರಿಟಿ ಅಡ್ಮಿನಿಸ್ಟ್ರೇಟರ್ (ಭದ್ರತಾ ನಿರ್ವಾಹಕರು) ಜವಾಬ್ದಾರರಾಗಿರುತ್ತಾರೆ. ಇದಲ್ಲದೆ ಅವರು ಅನಧಿಕೃತ ಪ್ರವೇಶ, ಮಾಹಿತಿ ಮಾರ್ಪಾಡು ಮತ್ತು/ಅಥವಾ ವಿನಾಶದ ವಿರುದ್ಧ ವ್ಯವಸ್ಥೆಗಳನ್ನು ರಕ್ಷಿಸುವುದು, ದುರ್ಬಲತೆಗಳಿಗಾಗಿ ಮತ್ತು ಅಸಾಮಾನ್ಯ ಚಟುವಟಿಕೆಗಾಗಿ ನೆಟ್‌ವರ್ಕ್ ಅನ್ನು ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡುವುದು, ಫೈರ್‌ವಾಲ್‌ಗಳು, ಆಂಟಿ-ವೈರಸ್ ಸಾಫ್ಟ್‌ವೇರ್ ಮತ್ತು ಪ್ಯಾಚ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ಗಳಂತಹ ಭದ್ರತಾ ಸಾಧನಗಳನ್ನು ಕಾನ್ಫಿಗರ್ ಮಾಡುವುದು, ನೆಟ್‌ವರ್ಕ್/ಅಪ್ಲಿಕೇಶನ್ ಭದ್ರತಾ ನೀತಿಗಳು, ಪ್ರವೇಶ ನಿಯಂತ್ರಣ ಮತ್ತು ಕಾರ್ಪೊರೇಟ್ ಡೇಟಾ ಸುರಕ್ಷತೆಗಳನ್ನು ಅನುಷ್ಠಾನಗೊಳಿಸುವುದು ಮತ್ತು ಭದ್ರತಾ ಅರಿವು ಕಾರ್ಯವಿಧಾನಗಳಲ್ಲಿ ಸಹ ಉದ್ಯೋಗಿಗಳಿಗೆ ತರಬೇತಿ ನೀಡುವುದಾಗಿರುತ್ತದೆ.
ಈ ಹುದ್ದೆಗೆ ಅವರು ಕಂಪ್ಯೂಟರ್ ಸಂಭಂದಿತ ವಿಷಯದಲ್ಲಿ ಪದವಿ/ಡಿಪ್ಲೋಮ ಹೊಂದಿದ್ದರೆ ಉತ್ತಮ, ಮುಖ್ಯವಾಗಿ ಅವರಿಗೆ ವಿವಿಧ ಆಪರೇಟಿಂಗ್ ಸಿಸ್ಟಮ್, ನೆಟ್‌ವರ್ಕಿಂಗ್ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಷನ್, ಸೆಕ್ಯೂರಿಟಿ ಉಪಕರಣ/ಪರಿಕರಗಳ ಜ್ಞಾನ, ಪ್ರೋಗ್ರಾಮಿಂಗ್ ಮತ್ತು ಸ್ಕ್ರಿಪ್ಟಿಂಗ್ ಕೌಶಲ್ಯಗಳು ಇರಬೇಕು. ಇದರ ಜೊತೆಗೆ ತಾಂತ್ರಿಕವಲ್ಲದ ಕೌಶಲ್ಯಗಳಾದ ವಿಶ್ಲೇಷಣಾತ್ಮಕ ಚಿಂತನೆ, ಸಮಸ್ಯೆ ಪರಿಹಾರ, ಸಂವಹನ, ತಂಡ ಪ್ರವೃತ್ತಿ ಮತ್ತು ಸೂಕ್ಷ್ಮ ದೃಷ್ಟಿ ಇರಬೇಕು. ಉದ್ಯಮ ಪ್ರಮಾಣೀಕರಣ(ಸರ್ಟಿಫಿಕೇಷನ್ಸ್) ಗಳಾದ CompTIA’s Security+, CompTIA’s Network+, Certified in Risk and Information Systems Control (CRISC) ಮತ್ತು Certified Information Systems auditor (CISA) ನಿಮಗೆ ಉತ್ತಮ ಉದ್ಯೋಗ/ಸಂಬಳ ಪಡೆಯಲು ಸಹಾಯಕವಾಗಬಹುದು. ಈ ಉದ್ಯೋಗಕ್ಕೆ ನೀವು ಮೊದಲ ವರ್ಷದಲ್ಲಿ 3.5-13 ಲಕ್ಷದವರೆಗೆ ಸಂಬಳವನ್ನು ನೀರಿಕ್ಷಿಸಬಹುದು. ಇಲ್ಲಿ ನೀವು ಸೈಬರ್ ಸೆಕ್ಯುರಿಟಿ ಅಡ್ಮಿನಿಸ್ಟ್ರೇಟರ್ ನಿಂದ ಶುರು ಮಾಡಿ ಸೀನಿಯರ್/ಲೀಡ್ ಸೆಕ್ಯುರಿಟಿ ಎಂಜಿನಿಯರ್,ಸೈಬರ್ ಸೆಕ್ಯೂರಿಟಿ ಸ್ಪೆಷಲಿಸ್ಟ್/ಡಿಸೈನರ್/ಆರ್ಕಿಟೆಕ್ಟ್/ಮ್ಯಾನೇಜರ್ ಹುದ್ದೆವರೆಗೂ ಹೋಗಬಹುದು.
ಸೈಬರ್ ಸೆಕ್ಯೂರಿಟಿ ಕೌಶಲ್ಯಗಳನ್ನು ಎಲ್ಲಿ ಕಲಿಯಬಹುದು?
ನೀವು ಮೇಲೆ ತಿಳಿಸಿದ ತಂತ್ರಿಕ ಮತ್ತು ತಾಂತ್ರಿಕವಲ್ಲದ ಕೌಶಲ್ಯಗಳನ್ನು ಕಲಿಯಲು ನೀವು ಆಫ್‌ಲೈನ್ ಅಥವಾ ಆನ್ಲೈನ್ ಮಾದ್ಯಮದಲ್ಲಿ ಕಲಿಯಬಹುದು. ಆಫ್‌ಲೈನ್ ಮಾದ್ಯಮದಲ್ಲಿ ನೀವು ಕಾಲೇಜುಗಳಲ್ಲಿ (ಕರ್ನಾಟಕ ಮತ್ತು ಭಾರತ) ಮತ್ತು ಆನ್ಲೈನ್ ಮಾಧ್ಯಮದಲ್ಲಿ ಕೂಡ ಕಲಿಯಬಹುದು. ಅದು ಡಿಪ್ಲೋಮ, ಪದವಿ, ಸ್ನಾತಕೋತ್ತರ ಪದವಿ ಅಥವಾ ಸರ್ಟಿಫಿಕೇಷನ್ ಕೋರ್ಸ್ ಆಗಿರಬಹುದು, ಇಂತಹ ಕೋರ್ಸಗಳು ನಿಮಗೆ ಉಚಿತವಾಗಿ (YouTube, udemy, simplilearn ಇತ್ಯಾದಿ) ಕೂಡ ದೊರೆಯುತ್ತದೆ, ಆದರೆ ಕಲಿತ ಜ್ಞಾನದ ಪ್ರಮಾಣೀಕರಣಕ್ಕಾಗಿ ನೀವು ಮೇಲೆ ತಿಳಿಸಿದ ನಿಮ್ಮ ನೇಚ್ಚಿನ ಉದ್ಯೋಗಕ್ಕೆ ಅವಶ್ಯಕವಾದ ಸರ್ಟಿಫಿಕೇಷನ್ಸ್ ಅನ್ನು ಮಾಡಿಕೊಳ್ಳಬೇಕಾಗುತ್ತದೆ.