ಕಳೆದ ಅಂಕಣದಿಂದ ನಾನು ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡುತ್ತಿದ್ದೇನೆ. ಕಳೆದ ವಾರದ ಅಂಕಣದಲ್ಲಿ, ನಾನು ಸೈಬರ್ ಸೆಕ್ಯೂರಿಟಿ ಎಂದರೇನು, ಅದರ ಅವಶ್ಯಕತೆ ಏನು, ಸೈಬರ್ ಸೆಕ್ಯೂರಿಟಿ ಮಾರುಕಟ್ಟೆ ಎಷ್ಟು ದೊಡ್ಡದು ಮತ್ತು ಹತ್ತು ಪ್ರವೇಶ ಮಟ್ಟದ ಉದ್ಯೋಗಾವಕಾಶಗಳ ಒಂದು ಕಿರು ಪರಿಚಯವನ್ನು ಮಾಡಿಕೊಟ್ಟಿದ್ದೆ. ಇಂದಿನ ಅಂಕಣದಲ್ಲಿ ನಾನು ಆ ಹತ್ತು ಪ್ರವೇಶ ಮಟ್ಟದ ಉದ್ಯೋಗಾವಕಾಶಗಳ ಪೈಕಿ ಮೊದಲ ಎರಡು ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳಾದ ಸೈಬರ್ ಸೆಕ್ಯೂರಿಟಿ ಅನಲಿಸ್ಟ್ ಮತ್ತು ಸೈಬರ್ ಸೆಕ್ಯೂರಿಟಿ ಸ್ಪೆಷಲಿಸ್ಟ್ ಬಗ್ಗೆ ತಿಳಿಸಿಕೊಡಲಿದ್ದೇನೆ, ಮುಖ್ಯವಾಗಿ ಆ ಉದ್ಯೋಗದ ಲಕ್ಷಣಗಳು/ಜವಾಬ್ದಾರಿಗಳು, ಕೌಶಲ್ಯಗಳು, ವಿದ್ಯಾರ್ಹತೆ, ಸರ್ಟಿಫಿಕೇಷನ್ಸ್, ಸಂಬಳ, ಸಿಗುವ ಕೆಲಸದ ಶೀರ್ಷಿಕೆಗಳು(ಜಾಬ್ ಟೈಟಲ್) ಮತ್ತು ವೃತ್ತಿ ಬೆಳವಣಿಗೆ(ಕೆರಿಯರ್ ಪ್ರೊಗ್ರೆಶನ್ಸ್) ಬಗ್ಗೆ ಸ್ಥೂಲವಾಗಿ ತಿಳಿಸಿಕೊಡಲಿದ್ದೇನೆ.
ಸೈಬರ್ ಸೆಕ್ಯೂರಿಟಿ ಅನಲಿಸ್ಟ್ ಉದ್ಯೋಗಾವಕಾಶಗಳ ಕಿರು ಪರಿಚಯ
ಸೈಬರ್ ಸೆಕ್ಯೂರಿಟಿ ಅನಲಿಸ್ಟ್ ಅಥವಾ ವಿಶ್ಲೇಷಕರು ಒಂದು ಸಂಸ್ಥೆಯ ಡಿಜಿಟಲ್ ಮೂಲಸೌಕರ್ಯದಲ್ಲಿ ಭದ್ರತಾ ಸಂಬಂದಿತ ಘಟನೆಗಳ ಮೇಲ್ವಿಚಾರಣೆ ಮಾಡಲು, ತಡೆಗಟ್ಟಲು ಮತ್ತು ಪ್ರತಿಕ್ರಿಯಿಸಲು ಜವಾಬ್ದಾರರಾಗಿರುವ ಐಟಿ ವೃತ್ತಿಪರರಾಗಿರುತ್ತಾರೆ. ಅವರು ವ್ಯವಸ್ಥೆ/ಸಾದನಗಳಲ್ಲಿನ ದುರ್ಬಲತೆಗಳನ್ನು ಗುರುತಿಸುವ ಮೂಲಕ, ಭದ್ರತಾ ಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಮತ್ತು ಸಂಭಾವ್ಯ ಉಲ್ಲಂಘನೆಗಳಿಗೆ ಪ್ರತಿಕ್ರಿಯಿಸುವ ಮೂಲಕ ಸಂಸ್ಥೆಯ ಸೂಕ್ಷ್ಮ ಡೇಟಾವನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಈ ಹುದ್ದೆಗೆ ಅವರು ಕಂಪ್ಯೂಟರ್ ಸಂಬಂದಿತ ವಿಷಯದಲ್ಲಿ ಪದವಿ/ಡಿಪ್ಲೋಮ ಹೊಂದಿದ್ದರೆ ಉತ್ತಮ, ಮುಖ್ಯವಾಗಿ ಅವರಿಗೆ ವಿವಿದ ಆಪರೇಟಿಂಗ್ ಸಿಸ್ಟಮ್, ನೆಟ್‌ವರ್ಕಿಂಗ್ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಷನ್, ಸೆಕ್ಯೂರಿಟಿ ಉಪಕರಣ/ಪರಿಕರಗಳ ಜ್ಞಾನ, ಪ್ರೋಗ್ರಾಮಿಂಗ್ ಮತ್ತು ಸ್ಕ್ರಿಪ್ಟಿಂಗ್ ಕೌಶಲ್ಯಗಳು ಇರಬೇಕು. ಇದರ ಜೊತೆಗೆ ತಾಂತ್ರಿಕವಲ್ಲದ ಕೌಶಲ್ಯಗಳಾದ ವಿಶ್ಲೇಷಣಾತ್ಮಕ ಚಿಂತನೆ, ಸಮಸ್ಯೆ ಪರಿಹಾರ, ಸಂವಹನ, ತಂಡ ಪ್ರವೃತಿ ಮತ್ತು ಸೂಕ್ಷ್ಮ ದೃಷ್ಟಿ ಇರಬೇಕು. ಉದ್ಯಮ ಪ್ರಮಾಣೀಕರಣ(ಸರ್ಟಿಫಿಕೇಷನ್ಸ್) ಗಳಾದ CompTIA Security+, Certified Ethical Hacker (CEH), ಮತ್ತು Certified Information Systems Security Professional (CISSP) ನಿಮಗೆ ಉತ್ತಮ ಉದ್ಯೋಗ/ಸಂಬಳ ಪಡೆಯಲು ಸಹಾಯಕವಾಗಬಹುದು. ಈ ಉದ್ಯೋಗಕ್ಕೆ ನೀವು ಮೊದಲ ವರ್ಷದಲ್ಲಿ 3-12 ಲಕ್ಷದವರೆಗೆ ಸಂಬಳವನ್ನು ನೀರಿಕ್ಷಿಸಬಹುದು. ಇಲ್ಲಿ ನೀವು ಸೈಬರ್ ಸೆಕ್ಯೂರಿಟಿ/ಇನ್ಫಾರ್ಮಶನ್ ಸಿಸ್ಟಮ್ ಅನಲಿಸ್ಟ್ ನಿಂದ ಶುರು ಮಾಡಿ ಸೀನಿಯರ್/ಲೀಡ್ ಅನಲಿಸ್ಟ್ , ಸೈಬರ್ ಸೆಕ್ಯೂರಿಟಿ ಕನ್ಸಲ್ಟೆಂಟ್ ಹಾಗು ಚೀಫ್ ಇನ್ಫಾರ್ಮಶನ್ ಸೆಕ್ಯೂರಿಟಿ ಆಫೀಸರ್ ಹುದ್ದೆವರೆಗೂ ಹೋಗಬಹುದು.
ಸೈಬರ್ ಸೆಕ್ಯೂರಿಟಿ ಸ್ಪೆಷಲಿಸ್ಟ್ ಉದ್ಯೋಗಾವಕಾಶಗಳ ಕಿರು ಪರಿಚಯ
ಸೈಬರ್ ಸೆಕ್ಯುರಿಟಿ ಸ್ಪೆಷಲಿಸ್ಟ್ (ತಜ್ಞರು) ಸೈಬರ್ ಬೆದರಿಕೆ/ಸಂಚುಗಳನ್ನು ಪತ್ತೆಹಚ್ಚಲು ಮತ್ತು ಸೂಕ್ತ ಭದ್ರತಾ ಕ್ರಮಗಳನ್ನು ಅಳವಡಿಸುವ ಮೂಲಕ ಸಂಸ್ಥೆಯ ಸೂಕ್ಷ್ಮ ಮಾಹಿತಿಯನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುತ್ತಾರೆ. ಅವರು ಸಂಸ್ಥೆಗಳ ಡೇಟಾ ಭದ್ರತಾ ಕಾರ್ಯಾಚರಣೆಗಳ ಮೇಲ್ವಿಚಾರಣೆಯ ಕೆಲಸ, ಸಾಫ್ಟ್‌ವೇರ್ ಸಿಸ್ಟಮ್‌ಗಳು, ನೆಟ್‌ವರ್ಕ್‌ಗಳು ಮತ್ತು ಡೇಟಾ ಸೆಂಟರ್‌ಗಳು ಸೇರಿದಂತೆ ಸಂಪೂರ್ಣ ಐಟಿ ಮೂಲಸೌಕರ್ಯವನ್ನು ಸುರಕ್ಷಿತವಾಗಿರಿಸುತ್ತಾರೆ ಮತ್ತು ಸಂಸ್ಥೆಯ ಸೆಕ್ಯೂರಿಟಿ ಪಾಲಿಸಿ ರಚಿಸುವುದು ಹಾಗು ಅದನ್ನು ಸಂಸ್ಥೆಯ ಎಲ್ಲಾ ಉದ್ಯೋಗಿಗಳು ಅದನ್ನು ಪಾಲಿಸುವಂತೆ ನೋಡಿಕೊಳ್ಳುತ್ತಾರೆ. ಈ ಹುದ್ದೆಗೆ ಅವರು ಕಂಪ್ಯೂಟರ್ ಸಂಬಂದಿತ ವಿಷಯದಲ್ಲಿ ಪದವಿ/ಡಿಪ್ಲೋಮ ಹೊಂದಿದ್ದರೆ ಉತ್ತಮ, ಮುಖ್ಯವಾಗಿ ಅವರಿಗೆ ವಿವಿದ ಆಪರೇಟಿಂಗ್ ಸಿಸ್ಟಮ್, ನೆಟ್‌ವರ್ಕಿಂಗ್ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಷನ್, ಸೆಕ್ಯೂರಿಟಿ ಉಪಕರಣ/ಪರಿಕರಗಳ ಜ್ಞಾನ, ಎಥಿಕಲ್ ಹ್ಯಾಕಿಂಗ್, ಪ್ರೋಗ್ರಾಮಿಂಗ್ ಮತ್ತು ಸ್ಕ್ರಿಪ್ಟಿಂಗ್ ಕೌಶಲ್ಯಗಳು ಇರಬೇಕು. ಇದರ ಜೊತೆಗೆ ತಾಂತ್ರಿಕವಲ್ಲದ ಕೌಶಲ್ಯಗಳಾದ ವಿಶ್ಲೇಷಣಾತ್ಮಕ ಚಿಂತನೆ, ಸಮಸ್ಯೆ ಪರಿಹಾರ, ಸಂವಹನ, ತಂಡ ಪ್ರವೃತಿ ಮತ್ತು ಸೂಕ್ಷ್ಮ ದೃಷ್ಟಿ ಇರಬೇಕು. ಉದ್ಯಮ ಪ್ರಮಾಣೀಕರಣಗಳಾದ CompTIA Network+, CompTIA Security+, Certified Ethical Hacker (CEH), Certified Information Security Manager (CISM) ಮತ್ತು Certified Information Systems Security Professional (CISSP) ನಿಮಗೆ ಉತ್ತಮ ಉದ್ಯೋಗ/ಸಂಬಳ ಪಡೆಯಲು ಸಹಾಯಕವಾಗಬಹುದು. ಈ ಉದ್ಯೋಗಕ್ಕೆ ನೀವು ಮೊದಲ ವರ್ಷದಲ್ಲಿ 4 – 26 ಲಕ್ಷದವರೆಗೆ ಸಂಬಳವನ್ನು ನೀರಿಕ್ಷಿಸಬಹುದು. ಇಲ್ಲಿ ನೀವು ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ನೆಟ್ವರ್ಕ್ ಇಂಜಿನಿಯರ್ ಅಥವಾ ಸಿಸ್ಟಮ್ ಇಂಜಿನಿಯರ್ ಶೀರ್ಷಿಕೆಯಿಂದ ಶುರು ಮಾಡಿ ಸಿಸ್ಟಮ್/ನೆಟ್ವರ್ಕ್ ಮ್ಯಾನೇಜರ್ ಅಥವಾ ಡಿಸೈನರ್/ಆರ್ಕಿಟೆಕ್ಟ್ ಆಗಬಹುದು.
ಸೈಬರ್ ಸೆಕ್ಯೂರಿಟಿ ಅನಲಿಸ್ಟ್ ಮತ್ತು ಸೈಬರ್ ಸೆಕ್ಯೂರಿಟಿ ಸ್ಪೆಷಲಿಸ್ಟ್ ಉದ್ಯೋಗಗಳೆರಡರ ಕೆಲಸ ಸಂಸ್ಥೆಯನ್ನು ಸೈಬರ್ ದಾಳಿ ಮತ್ತು ಮಾಹಿತಿ ಸಂರಕ್ಷಣೆಯದಾಗಿದ್ದರು, ಇವೆರಡರಲ್ಲಿ ಅನೇಕ ಸೂಕ್ಷ್ಮ ವ್ಯತ್ಯಾಸಗಳಿವೆ. ಸೈಬರ್ ಸೆಕ್ಯೂರಿಟಿ ಸ್ಪೆಷಲಿಸ್ಟ್ ಹುದ್ದೆ, ಅನಲಿಸ್ಟ್ ಹುದ್ದೆಗಿಂತ ಕೆಲಸದ ವ್ಯಾಪ್ತಿಯಲ್ಲಿ ವಿಶಾಲವಾಗಿದ್ದು ಇದರಲ್ಲಿ ನಿಮಗೆ ಜ್ಞಾನದ ವ್ಯಾಪ್ತಿಯ ಜೊತೆಗೆ ಸಾಕಷ್ಟು ಆಳವಾಗಿ ಕೂಡ ಗೊತ್ತಿರಬೇಕಾಗಿರುತ್ತದೆ. ಅನಲಿಸ್ಟ್ ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಸ್ಪೆಷಲಿಸ್ಟ್ ಆ ವ್ಯವಸ್ಥೆಯ ಅಭಿವೃದ್ದಿಯ ಸಮಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಸೈಬರ್ ಸೆಕ್ಯೂರಿಟಿ ಕೌಶಲ್ಯಗಳನ್ನು ಎಲ್ಲಿ ಕಲಿಯಬಹುದು?
ನೀವು ಮೇಲೆ ತಿಳಿಸಿದ ತಂತ್ರಿಕ ಮತ್ತು ತಾಂತ್ರಿಕವಲ್ಲದ ಕೌಶಲ್ಯಗಳನ್ನು ಕಲಿಯಲು ನೀವು ಆಫ್‌ಲೈನ್ ಅಥವಾ ಆನ್ಲೈನ್ ಮಾದ್ಯಮದಲ್ಲಿ ಕಲಿಯಬಹುದು. ಆಫ್‌ಲೈನ್ ಮಾದ್ಯಮದಲ್ಲಿ ನೀವು ಕಾಲೇಜುಗಳಲ್ಲಿ (ಕರ್ನಾಟಕ ಮತ್ತು ಭಾರತ) ಮತ್ತು ಆನ್ಲೈನ್ ಮಾಧ್ಯಮದಲ್ಲಿ ಕೂಡ ಕಲಿಯಬಹುದು. ಅದು ಡಿಪ್ಲೋಮ, ಪದವಿ, ಸ್ನಾತಕೋತ್ತರ ಪದವಿ ಅಥವಾ ಸರ್ಟಿಫಿಕೇಷನ್ ಕೋರ್ಸ್ ಆಗಿರಬಹುದು, ಇಂತಹ ಕೋರ್ಸಗಳು ನಿಮಗೆ ಉಚಿತವಾಗಿ (YouTube, udemy, simplilearn ಇತ್ಯಾದಿ) ಕೂಡ ದೊರೆಯುತ್ತದೆ, ಆದರೆ ಕಲಿತ ಜ್ಞಾನದ ಪ್ರಮಾಣೀಕರಣಕ್ಕಾಗಿ ನೀವು ಮೇಲೆ ತಿಳಿಸಿದ ನಿಮ್ಮ ನೇಚ್ಚಿನ ಉದ್ಯೋಗಕ್ಕೆ ಅವಶ್ಯಕವಾದ ಸರ್ಟಿಫಿಕೇಷನ್ಸ್ ಅನ್ನು ಮಾಡಿಕೊಳ್ಳಬೇಕಾಗುತ್ತದೆ.