Site icon

ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳ ಒಂದು ಸ್ಥೂಲ ಪರಿಚಯ

cyber security job

ನನಗೆ ಅನೇಕ ಪೋಷಕರು, ವಿದ್ಯಾರ್ಥಿಗಳು ಮತ್ತು ಬೇರೆ/IT ಕೆಲಸದಲ್ಲಿರುವವರು ಸೈಬರ್ ಸೆಕ್ಯೂರಿಟಿ ಉದ್ಯೋಗ ಅವಕಾಶಗಳ ಬಗ್ಗೆ ಕೇಳುತ್ತಲೇ ಇರುತ್ತಾರೆ. ಈ ಅಂಕಣದಿಂದ ಮೊದಲುಗೊಂಡು ನಾನು ಬರುವ ಅನೇಕ ಲೇಖನಗಳಲ್ಲಿ ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡಲಿದ್ದೇನೆ. ಇಂದಿನ ಅಂಕಣದಲ್ಲಿ ನಾನು ಸೈಬರ್ ಸೆಕ್ಯೂರಿಟಿ ಎಂದರೇನು, ಅದರ ಅವಶ್ಯಕತೆ ಏನು, ಸೈಬರ್ ಸೆಕ್ಯೂರಿಟಿ ಮಾರುಕಟ್ಟೆ ಎಷ್ಟು ದೊಡ್ಡದು ಮತ್ತು ಉದ್ಯೋಗಾವಕಾಶಗಳ ಒಂದು ಕಿರು ಪರಿಚಯವನ್ನು ಮಾಡಿಕೊಡಲಿದ್ದೇನೆ. ಮುಂದಿನ ಅಂಕಣಗಳಲ್ಲಿ ವಿವಿಧ ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳ ಬಗ್ಗೆ ಸುದೀರ್ಘವಾಗಿ ಬರೆಯಲಿದ್ದೇನೆ. ನಾನು ಈ ಹಿಂದೆ ಅನೇಕ ಸೈಬರ್ ಸೆಕ್ಯೂರಿಟಿ ಕುರಿತಾದ ಲೇಖನಗಳನ್ನು ಬರೆದಿದ್ದೇನೆ, ಅದನ್ನು ನೀವು ಇಲ್ಲಿ ಓದಬಹುದು.

ಸೈಬರ್ ಸೆಕ್ಯೂರಿಟಿ ಎಂದರೇನು?

ಸೈಬರ್ ಸೆಕ್ಯೂರಿಟಿ ಅಥವಾ ಸೈಬರ್ ಸುರಕ್ಷತೆ ಅಥವಾ ಸೈಬರ್ ಭದ್ರತೆ, ಯಾವುದೇ ರೀತಿಯ ಸೈಬರ್ ದಾಳಿಯಿಂದ ವ್ಯವಸ್ಥೆಗಳು, ನೆಟ್‌ವರ್ಕ್‌ಗಳು, ಸಾಧನಗಳು(ಕಂಪ್ಯೂಟರ್/ಸ್ಮಾರ್ಟ್ ಫೋನ್/IoT), ಸಾಫ್ಟ್ವೇರ್ ಪ್ರೋಗ್ರಾಮ್ಗಳನ್ನು, ಮತ್ತು ಮಾಹಿತಿಯನ್ನು ರಕ್ಷಿಸುವ ಮತ್ತು ಮರುಪಡೆಯುವ ಸ್ಥಿತಿಯಾಗಿರುತ್ತದೆ. ಸೈಬರ್ ಸೆಕ್ಯುರಿಟಿಯನ್ನು ಮಾಹಿತಿ ತಂತ್ರಜ್ಞಾನ(IT) ಸೆಕ್ಯೂರಿಟಿ ಅಥವಾ ಇಲೆಕ್ಟ್ರಾನಿಕ್ ಮಾಹಿತಿ ಸುರಕ್ಷತೆ ಎಂದೂ ಕರೆಯುತ್ತಾರೆ. ಇದರಲ್ಲಿ ಪ್ರಮುಖವಾಗಿ ಸಾದನ/ಡಿವೈಸ್(ಕಂಪ್ಯೂಟರ್/ಮೊಬೈಲ್) ಸೆಕ್ಯೂರಿಟಿ, ನೆಟ್ವರ್ಕ್ ಸೆಕ್ಯೂರಿಟಿ, ಅಪ್ಲಿಕೇಶನ್ ಸೆಕ್ಯೂರಿಟಿ, ಮಾಹಿತಿ(ಇನ್ಫಾರ್ಮಶನ್) ಸೆಕ್ಯೂರಿಟಿ, ಆಪರೇಷನಲ್ ಸೆಕ್ಯೂರಿಟಿ, ಡಿಸಾಸ್ಟರ್ ರಿಕವರಿ ಮತ್ತು ವ್ಯವಹಾರ(ಬಿಸಿನೆಸ್) ನಿರಂತರತೆ(ಕಂಟಿನ್ಯೂಟಿ) ಎಂದು ಸ್ತೂಲವಾಗಿ ವಿಂಗಡಿಸುತ್ತಾರೆ.

ಸೈಬರ್ ಸೆಕ್ಯೂರಿಟಿ ಏಕೆ ಬೇಕು ?

ಸ್ಟಾಟಿಸ್ಟಾ ಸಂಶೋಧನಾ ಕಂಪನಿಯ ಮುದ್ರಿತ ಅಂಕಿ ಅಂಶದ ಪ್ರಕಾರ 2023 ರಲ್ಲಿ ಸೈಬರ್ ದಾಳಿಗಳಿಂದ ಆದ ನಷ್ಟವು $8 ಟ್ರಿಲಿಯನ್ ಆಗಿತ್ತು ಮತ್ತು 2026 ರ ವೇಳೆಗೆ ಅದು ವಿಶ್ವದಾದ್ಯಂತ $20 ಟ್ರಿಲಿಯನ್ಗೆ ತಲುಪಬಹುದು. National Crime Records Bureau (NCRB) ಪ್ರಕಾರ  2023 ರಲ್ಲಿ ಭಾರತದಲ್ಲಿ 11.29 ಲಕ್ಷ ಸೈಬರ್ ಅಪರಾಧಗಳು ದಾಖಲಾಗಿದ್ದವು, ಅದರಿಂದ ಆದ ನಷ್ಟ 749 ಕೋಟಿಗಳು. ಇದರಲ್ಲಿ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಆದ ಸೈಬರ್ ಅಪರಾಧಗಳಿಂದ ಆದ ನಷ್ಟ ಮತ್ತು ದಾಖಲಾಗದ ಪ್ರಕರಣಗಳಿಂದ ಆದ ನಷ್ಟ ಮೇಲೆ ತಿಳಿಸಿದ ನಷ್ಟಕ್ಕಿಂತ ಕನಿಷ್ಠ ಹತ್ತು ಪಾಲು ಹೆಚ್ಚು ಎಂದು ಒಂದು ಅಂದಾಜಾಗಿರುತ್ತದೆ. ಈ ನಷ್ಟವನ್ನು ತಪ್ಪಿಸಲು ಮತ್ತು ಕಡಿಮೆ ಮಾಡಲು ಸೈಬರ್ ಸೆಕ್ಯೂರಿಟಿ ಸಂಸ್ಥೆಗಳಿಗೆ ಅತ್ಯಾವಶ್ಯಕವಾಗಿರುತ್ತದೆ. ಯಾಕೆಂದರೆ ಇಂದಿನ ಡಿಜಿಟಲ್ ದುನಿಯಾದಲ್ಲಿ ಸೈಬರ್ ಸೆಕ್ಯುರಿಟಿ ಇಲ್ಲದಿದ್ದರೆ ನಮ್ಮ ರೈಲುಗಳು, ವಿಮಾನಗಳು, ವಿದ್ಯುತ್/ನೀರು/ಗ್ಯಾಸ್ ಸರಬರಾಜು, ಆಸ್ಪತ್ರೆ ಇತ್ಯಾದಿಗಳನ್ನು ಸೈಬರ್ ಅಪರಾಧಿಗಳು/ಭಯೋತ್ಪಾದಕರು ಸಮರ್ಪಕವಾಗಿ ಕೆಲಸ ಮಾಡದಂತೆ ತಡೆಯಬಹುದು. ಸುಲಭವಾಗಿ ಹೇಳಬೇಕಾದರೆ, ಸೈಬರ್ ಸೆಕ್ಯೂರಿಟಿ ನಾವು ತಿಳಿದಿರುವ ಮತ್ತು ಆನಂದಿಸುವ ಜೀವನಶೈಲಿಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.

ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳ ಗಾತ್ರ ಎಷ್ಟು?

2023 ರಲ್ಲಿ ವಿಶ್ವದ ಸೈಬರ್ ಸೆಕ್ಯೂರಿಟಿ ಮಾರ್ಕೆಟ್ ಗಾತ್ರ $159 ಬಿಲಿಯನ್ ಮತ್ತು ಭಾರತದ ಸೈಬರ್ ಸೆಕ್ಯೂರಿಟಿ ಮಾರ್ಕೆಟ್ ಗಾತ್ರ $4 ಬಿಲಿಯನ್ ಆಗಿದ್ದು, ಇದು 2028 ರ ವೇಳೆಗೆ ಭಾರತದಲ್ಲಿ $9.21 ಬಿಲಿಯನ್ ಮತ್ತು ವಿಶ್ವದಲ್ಲಿ $298.5 ಬಿಲಿಯನ್ ಆಗಲಿದೆ ಎಂದು ಸ್ಟಾಟಿಸ್ಟಾ ಎಂಬ ಸಂಸ್ಥೆ ಹೇಳುತ್ತದೆ. ಹಾಗಾಗಿ ಮುಂಬರುವ ವರ್ಷಗಳಲ್ಲಿ ಸೈಬರ್ ಸೆರ್ಕ್ಯುರಿಟಿ ಉದ್ಯೋಗಾವಕಾಶಗಳು ಸಾಕಷ್ಟು ಸೃಷ್ಟಿಯಾಗಲಿದ್ದು, ಇದು ಉತ್ತಮ ಸಂಬಳಾವಕಾಶವನ್ನು ಕೊಡುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಹೊಸ ರೀತಿಯ ಕೆಲಸ ಮಾಡಬೇಕೆನ್ನುವವರಿಗೆ ಸೈಬರ್ ಸೆಕ್ಯೂರಿಟಿ ಒಳ್ಳೆಯ ವಿಷಯವಾಗಿರುತ್ತದೆ. ಎಕನಾಮಿಕ್ ಟೈಮ್ಸ್ ವರದಿಯೊಂದರ ಪ್ರಕಾರ ಕೇವಲ ಭಾರತದಲ್ಲೇ 3 ಲಕ್ಷಕ್ಕೂಅಧಿಕ ಸೈಬರ್ ಸೆಕ್ಯೂರಿಟಿ ತಜ್ಞರ ಕೊರತೆಯಿದೆ.

ಯಾರು ಬೇಕಾದರೂ ಸೈಬರ್ ಸೆಕ್ಯೂರಿಟಿ ತಜ್ಞರಾಗಬಹುದೇ?

ಸರಿಯಾದ ಕಲಿಕೆ, ಆಸಕ್ತಿ ಮತ್ತು ಕೆಲವು ಪರೀಕ್ಷೆಗಳನ್ನು ಪಾಸ್ ಮಾಡಿದರೆ ಯಾರು ಬೇಕಾದರೂ ಸೈಬರ್ ಸೆಕ್ಯೂರಿಟಿ ಉದ್ಯೋಗವನ್ನು ಪಡೆಯಬಹುದು. ಸೈಬರ್ ಸೆಕ್ಯೂರಿಟಿ ನಾನ ತರಹದ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ, ಮೇಲೆ ತಿಳಿಸಿದಂತೆ ನೀವು ಒಂದು ಸೈಬರ್ ಸೆಕ್ಯೂರಿಟಿ ವಿಭಾಗದಲ್ಲಿ ಪರಿಣಿತಿಯನ್ನು  ಪಡೆಯಬಹುದು ಅಥವಾ ಕೆಳೆಗೆ ತಿಳಿಸಿದ ಹತ್ತು ಪ್ರವೇಶ ಮಟ್ಟದ ಸೈಬರ್‌ ಸೆಕ್ಯುರಿಟಿ ಉದ್ಯೋಗಗಳಲ್ಲೊಂದನ್ನು ಆರಿಸಿಕೊಂಡು ಅದರಲ್ಲಿ ಪರಿಣಿತಿ ಪಡೆಯಬಹುದು. ಆ ಹತ್ತು ಪ್ರವೇಶ ಮಟ್ಟದ ಸೈಬರ್‌ ಸೆಕ್ಯುರಿಟಿ ಉದ್ಯೋಗಗಳಾವುದೆಂದರೆ – ಸೆಕ್ಯೂರಿಟಿ ಅನಲಿಸ್ಟ್, ಸೆಕ್ಯೂರಿಟಿ ಸ್ಪೆಷಲಿಸ್ಟ್, ಇನ್ಸಿಡೆಂಟ್ ರೆಸ್ಪಾಂಡರ್, ಕ್ರಿಪ್ಟೋಗ್ರಾಫರ್, ಸೆಕ್ಯೂರಿಟಿ ಇಂಜಿನಿಯರ್, ಸೆಕ್ಯೂರಿಟಿ ಅಡ್ಮಿನಿಸ್ಟ್ರೇಟರ್, ಸೆಕ್ಯೂರಿಟಿ ಆಡಿಟರ್, ಫೋರೆನ್ಸಿಕ್ ಎಕ್ಸ್ಪರ್ಟ್, ಪೆನೇಟ್ರೇಶನ್ ಟೆಸ್ಟರ್ ಮತ್ತು ಸೊರ್ಸ್ ಕೋಡ್ ಆಡಿಟರ್. ನೀವು ಮೇಲೆ ವಿವರಿಸಿದ ಸೈಬರ್‌ ಸೆಕ್ಯುರಿಟಿ ವಿಭಾಗಗಳಲ್ಲಿ ಪರಿಣಿತಿ ಪಡೆಯಲು ಆನ್ಲೈನ್  ಅಥವಾ ಆಫ್ಲೈನ್ ತರಗತಿಗಳನ್ನು ತೆಗೆದುಕ್ಕೊಳಬಹುದು. ಯುಟ್ಯೂಬ್, ಅನೇಕ ಕಾಲೇಜ್/ವಿಶ್ವವಿದ್ಯಾಲಯ/ಸಂಸ್ಥೆಗಳ ಜಾಲತಾಣದಲ್ಲಿ ನೀವು ಉಚಿತ ಹಾಗು ಶುಲ್ಕಾಧಾರಿತ ಕೋರ್ಸ್ ಗಳನ್ನು ನೀವು ತೆಗೆದುಕ್ಕೊಳಬಹುದು ಮತ್ತು ಅವರು ನೀಡುವ ಸರ್ಟಿಫಿಕೇಷನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ನಿಮ್ಮ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಈ ಪ್ರತಿಯೊಂದು ಉದ್ಯೋಗದ ಬಗ್ಗೆ ನಾನು ವಿಸ್ತಾರವಾಗಿ ಹೇಗೆ ನೀವು ಪರಿಣಿತಿ ಪಡೆಯಬಹುದು ಎಂಬುದನ್ನು ಮುಂದಿನ ಅಂಕಣಗಳಲ್ಲಿ ವಿವರಿಸುತ್ತೇನೆ.

Exit mobile version