ಪ್ರೌಢಶಾಲೆಯ ಶಿಕ್ಷಕರಾದ ರಮೇಶನ ಫೋನಿಗೆ ಒಂದು ಸಂದೇಶ ಬರುತ್ತದೆ “ನಿಮ್ಮ ಲೋನ್ ಸ್ಯಾಂಕ್ಷನ್ ಆಗಿದೆ, ವಿವರಿಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.”, ಎಂದಿರುತ್ತದೆ. ವೈಯುಕ್ತಿಕ ಸಾಲಕ್ಕೆ ಅಪ್ಲಿಕೇಶನ್ ಹಾಕಿದ್ದ ರಮೇಶ ಕಾತುರದಿಂದ ಆ ಲಿಂಕನ್ನು ಕ್ಲಿಕ್ ಮಾಡಿ ತೆರೆಯುತ್ತಾರೆ, ಆದರೆ ಅದು ಓಪನ್ ಆಗುವುದಿಲ್ಲಾ. ನಂತರ ಅವರ ಬ್ಯಾಂಕ್ ಅಕೌಂಟ್ ನಿಂದ 45,000 ರುಪಾಯಿ ಕಡಿತವಾಗಿರುವುದು ಗೊತ್ತಾಗುತ್ತದೆ, ಪೊಲೀಸರ ಬಳಿ ಕಂಪ್ಲೇಂಟ್ ಕೊಡಲು ಹೋದಾಗ ಗೊತ್ತಾಗುತ್ತದೆ ತಮ್ಮ ಫೋನ್ ಹ್ಯಾಕ್ ಆಗಿದೆ ಎಂದು.
ಹ್ಯಾಕಿಂಗ್ ಎನ್ನುವುದು ಕಂಪ್ಯೂಟರ್/ಸ್ಮಾರ್ಟ್ ಫೋನ್ ಅಥವಾ ನೆಟ್ವರ್ಕ್ನಲ್ಲಿನ ದೌರ್ಬಲ್ಯಗಳನ್ನು ಗುರುತಿಸುವ ಮತ್ತು ಅದನ್ನು ಬಳಸಿಕೊಂಡು ಆ ಕಂಪ್ಯೂಟರ್/ಸ್ಮಾರ್ಟ್ ಫೋನ್ ಅನ್ನು ಹಾನಿಯನ್ನುಂಟು ಮಾಡುವುದು ಅಥವಾ ಅದರಲ್ಲಿರುವ ಮಾಹಿತಿಯನ್ನು ಕದಿಯುವುದು ಅಥವಾ ದುರ್ಬಳಕೆ ಮಾಡುವುದಾಗಿರುತ್ತದೆ. ಸೈಬರ್ ಖದೀಮರು ನಿಮ್ಮ ಸ್ಮಾರ್ಟ್ ಫೋನಿನಲ್ಲಿ ನಿಮಗೆ ಗೊತ್ತಿಲ್ಲದೇ ಒಂದು ಆಪ್ ಅಥವಾ ಪ್ರೋಗ್ರಾಮ್ ಅನ್ನು ಸ್ಥಾಪಿಸುತ್ತಾರೆ ಮತ್ತು ಅದನ್ನು ಬಳಸಿ ಮಾಹಿತಿ ಕದ್ದು ನಿಮ್ಮ ಮೇಲೆ ವಿವಿಧ ಸೈಬರ್ ಅಪರಾಧಗಳನ್ನು ಎಸಗುತ್ತಾರೆ.
ಎಲ್ಲಾ ಹ್ಯಾಕಿಂಗ್ ಗಳು ಅಪರಾಧ ಮಾಡಲು ಮಾಡಿರುವುದರಿಲ್ಲಾ, ಹ್ಯಾಕಿಂಗ್ ನಲ್ಲೂ ಬ್ಲಾಕ್ ಹ್ಯಾಟ್, ವೈಟ್ ಹ್ಯಾಟ್ ಮತ್ತು ಗ್ರೇ ಹ್ಯಾಟ್ ಹ್ಯಾಕಿಂಗ್ ಎಂಬ ಪ್ರಭೇದಗಳಿವೆ, ಅವುಗಳಲ್ಲಿ ಬ್ಲಾಕ್ ಹ್ಯಾಟ್ ಹ್ಯಾಕಿಂಗ್ ಮಾತ್ರ ದುರುದ್ದೇಶಪೂರಿತವಾಗಿ ಮಾಡಲಾಗುತ್ತದೆ, ವೈಟ್ ಹ್ಯಾಟ್ ಹ್ಯಾಕರ್ಸ್ ಗಳನ್ನು ಹೊಸ ಡಿವೈಸ್ ಅಥವಾ ಸಾಫ್ಟ್ವೇರ್ ನಲ್ಲಿರುವ ದೌರ್ಬಲ್ಯಗಳನ್ನು ಗುರುತಿಸಲು ಕಂಪನಿಗಳು ಬಳಸುತ್ತಾರೆ ಮತ್ತು ಗ್ರೇ ಹ್ಯಾಟ್ ಹ್ಯಾಕರ್ಸ್ ಸ್ವತಂತ್ರವಾಗಿ ನಿಮ್ಮ ಡಿವೈಸ್ ಅಥವಾ ಸಾಫ್ಟ್ವೇರ್ ನಲ್ಲಿರುವ ದೌರ್ಬಲ್ಯಗಳನ್ನು ಗುರುತಿಸಿ ಪಬ್ಲಿಕ್ ಮಾಡುತ್ತಾರೆ ಅಥವಾ ಕಂಪನಿಯಿಂದ ದೌರ್ಬಲ್ಯದ ವಿವರಗಳನ್ನು ತಿಳಿಸಲು ಹಣ ಪಡೆಯುತ್ತಾರೆ, ಅದನ್ನು “ಬಗ್ ಬೌಂಟಿ” ಎಂದು ಕರೆಯುತ್ತಾರೆ.
ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಎಂದು ತಿಳಿದುಕ್ಕೊಳಲು ಈ ಕುರುಹುಗಳನ್ನು ಗಮನಿಸಿ :–
- ನಿಮಗೆ ಗೊತ್ತಿಲದೇ ಹೊಸ ಆಪ್ ಒಂದು ನಿಮ್ಮ ಫೋನ್ ನಲ್ಲಿ ಕಾಣಿಸುವುದು.
- ನಿಮ್ಮ ಫೋನ್ ಕಾರಣವಿಲ್ಲದೆ ಬಿಸಿಯಾಗುವುದು ಅಥವಾ ಬ್ಯಾಟರಿ/ಡೇಟಾ ಖಾಲಿಯಾಗುವುದು ಅಥವಾ ವೇಗ/ಪ್ರತಿಕ್ರಿಯೆ ಸಮಯ ಕಡಿಮೆಯಾಗುವುದು.
- ನಿಮ್ಮ ಫೋನಿನಲ್ಲಿ ವಿವಿಧ ರೀತಿಯ ಜಾಹಿರಾತುಗಳು ಕಾಣಿಸುವುದು.
- ನಿಮ್ಮ ಸಂದೇಶಗಳನ್ನು ಅಥವಾ ಇಮೇಲ್ ಗಳನ್ನೂ ನಿಮಗಿಂತ ಮುಂಚೆ ಯಾರೋ ಓದಿರುವುದು.
ಹ್ಯಾಕಿಂಗ್ ನಿಂದ ನಿಮ್ಮನ್ನು ಮತ್ತು ನಿಮ್ಮ ಸ್ಮಾರ್ಟ್ ಫೋನ್ ಅನ್ನು ನೀವು ರಕ್ಷಿಸಿಕ್ಕೊಳಲು :-
- ಅಪರಿಚಿತ ಜನರಿಂದಿಗಿನ ಎಲ್ಲಾ ಡಿಜಿಟಲ್ ವಹಿವಾಟುಗಳು ಮತ್ತು ಅವರಿಂದ ಬಂದ ಸಂದೇಶಗಳು/ಆಫರ್ಗಳಿಗಾಗಿ ಯಾವಾಗಲೂ ‘ಶೂನ್ಯ ವಿಶ್ವಾಸ, ತಾಳ್ಮೆ ಮತ್ತು ದೃಢೀಕರಣ’ ತತ್ವವನ್ನು ಅನುಸರಿಸಿ.
- ಅಪರಿಚಿತರಿಂದ ಬಂದ ಯಾವುದೇ ಹೈಪರ್ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ ಅಥವಾ ಸಂದೇಶ ಅಥವಾ ಇಮೇಲ್ನಲ್ಲಿ ಒದಗಿಸಲಾದ ಯಾವುದೇ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಡಿ.
- ನಿಮ್ಮ ಎಲ್ಲಾ ಸೂಕ್ಷ್ಮ ಮತ್ತು ಪ್ರಮುಖ ವೆಬ್ಸೈಟ್ ಲಾಗಿನ್ಗಳಿಗೆ ಬಹು ಅಂಶದ ದೃಢೀಕರಣವನ್ನು(Multi factor authentication) ಬಳಸಿ.
- ಉತ್ತಮ ಆಂಟಿ ವೈರಸ್ ಮತ್ತು ಫೈರ್ವಾಲ್ ಸಾಫ್ಟ್ವೇರ್ ಅನ್ನು ಬಳಸಿ ಮತ್ತು ಅವುಗಳನ್ನು ಮತ್ತು ನಿಮ್ಮ ಫೋನ್ ಹಾಗು ಅದರಲ್ಲಿರುವ ಆಪ್ ಗಳನ್ನೂ ಆಗಾಗ ನವೀಕರಿಸುತ್ತಿರಿ.
- ಪಾಸ್ವರ್ಡ್ ನಿರ್ವಾಹಕ ಸಾಫ್ಟ್ವೇರ್ ಅನ್ನು ಬಳಸಿ ಮತ್ತು ನಿಮ್ಮ ಪ್ರಮುಖ ಖಾತೆಗಳಿಗಾಗಿ ವಿಭಿನ್ನ ಬಲವಾದ ಪಾಸ್ವರ್ಡ್ಗಳನ್ನು ಇರಿಸಿ.
- ವೆಬ್ ಸೈಟ್ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಿ. ಅಂದರೆ ವೆಬ್ಸೈಟ್ ನ url ‘https’ ನೊಂದಿಗೆ ಪ್ರಾರಂಭವಾಗಬೇಕು, ಇಲ್ಲದಿದ್ದರೆ ಅದು ನಕಲಿಯಾಗಿರಬಹುದು.
ನೀವು ಅಂತಹ ವಂಚನೆಗೆ ಬಲಿಯಾಗಿದ್ದರೆ :-
ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್ಸೈಟ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ನಿಮ್ಮ ಬ್ಯಾಂಕ್ಗೆ ಕರೆ ಮಾಡಿ ಮತ್ತು ಭಾದಿತ ಕ್ರೆಡಿಟ್/ಡೆಬಿಟ್ ಕಾರ್ಡ್ಗಳನ್ನು ನಿರ್ಬಂಧಿಸಿ ಮತ್ತು ವರ್ಗಾವಣೆ ಮಾಡಿದ ಮೊತ್ತದ ಮೇಲೆ ಡೆಬಿಟ್ ಫ್ರೀಜ್ ಅನ್ನು ಹೆಚ್ಚಿಸಿ. ನಿಮ್ಮ ಸ್ಮಾರ್ಟ್ ಫೋನ್ ಮಾಲ್ವೇರ್ನಿಂದ ಸೋಂಕಿಗೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ಅದನ್ನು ಬ್ಯಾಕಪ್ ತೆಗೆದುಕೊಂಡ ನಂತರ ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.
ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಪರಿಹಾರಗಳು :-
ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಸೆಕ್ಷನ್ ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಿಸಬಹುದು:
- ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 378(ಕಳ್ಳತನ), 419 (ಸೋಗು ಹಾಕುವ ಮೂಲಕ ವಂಚನೆಗೆ ಶಿಕ್ಷೆ) ಮತ್ತು 420 (ವಂಚನೆ), ಸೆಕ್ಷನ್ 424(ಕಾನೂನುಬಾಹಿರವಾಗಿ ಡೇಟಾವನ್ನು ಹೊರತೆಗೆಯುವುದು), ಸೆಕ್ಷನ್ 441(ಕ್ರಿಮಿನಲ್ ಅತಿಕ್ರಮಣ), ಸೆಕ್ಷನ್ 467(ಫೋರ್ಜರಿ), ಸೆಕ್ಷನ್ 468( ಫೋರ್ಜರಿ/ನಕಲಿಗಾಗಿ ಶಿಕ್ಷೆ), ಮತ್ತು ಸೆಕ್ಷನ್ 471 (ಫೋರ್ಜರಿ/ನಕಲಿ ದಾಖಲೆಯ ಬಳಕೆ).
- ಮಾಹಿತಿ ತಂತ್ರಜ್ಞಾನ ಕಾಯಿದೆ (IT) ಕಾಯಿದೆ 2000/08 ಸೆಕ್ಷನ್ 43 (ಕಂಪ್ಯೂಟರ್, ಕಂಪ್ಯೂಟಿಂಗ್ ಸಾಧನ ಇತ್ಯಾದಿಗಳಿಗೆ ಹಾನಿಗಾಗಿ ದಂಡ ಮತ್ತು ಪರಿಹಾರ), ಸೆಕ್ಷನ್ 65 (ಕಂಪ್ಯೂಟರ್ ಅನ್ನು ಹಾಳುಮಾಡುವುದು), ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿತ ಅಪರಾಧಗಳಿಗೆ ಶಿಕ್ಷೆ – ಡೇಟಾ ಕಳ್ಳತನ ಮಾಡುವ ವ್ಯಕ್ತಿ, ಸಿಸ್ಟಮ್ಗೆ ವೈರಸ್ ಹರಡುವುದು, ಡೇಟಾ ನಾಶಪಡಿಸುವುದು, ಹ್ಯಾಕಿಂಗ್ , ಅಥವಾ ಅಧಿಕೃತ ವ್ಯಕ್ತಿಗೆ ಕಂಪ್ಯೂಟರ್ ಅಥವಾ ನೆಟ್ವರ್ಕ್ಗೆ ಪ್ರವೇಶವನ್ನು ನಿರಾಕರಿಸುವುದು), ಸೆಕ್ಷನ್ 66C (ಇದು ಗುರುತಿನ ಕಳ್ಳತನಕ್ಕೆ ದಂಡವನ್ನು ಸೂಚಿಸುತ್ತದೆ ಮತ್ತು ವ್ಯಕ್ತಿಯ ಗುರುತಿನ ಮಾಹಿತಿಯನ್ನು ಮೋಸದಿಂದ ಅಥವಾ ಅಪ್ರಾಮಾಣಿಕವಾಗಿ ಬಳಸುವುದು) ಮತ್ತು ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಸೋಗು ಹಾಕುವ ಮೂಲಕ ಮಾಡಿದ ವಂಚನೆಗೆ ಶಿಕ್ಷೆ).