ಹರಿಯಾಣದ ಫರಿದಾಬಾದ್‌ನ 23 ವರ್ಷದ ರಶ್ಮಿಗೆ ಮುಂಬೈ ಪೊಲೀಸ್ ಅಧಿಕಾರಿಯಿಂದ ಕರೆ ಬರುತ್ತದೆ, ಅದರಲ್ಲಿ ಸೈಬರ್‌ಸ್ಟಾಕಿಂಗ್‌ಗಾಗಿ ನಿಮ್ಮ ವಿರುದ್ಧ ದೂರು ದಾಖಲಾಗಿದೆ ಮತ್ತು ನಿಮ್ಮ ಹೆಸರಿನಲ್ಲಿ ಮುಂಬೈನಲ್ಲಿ ತೆರೆದಿರುವ ಬ್ಯಾಂಕ್ ಖಾತೆಯನ್ನು ಅಕ್ರಮ ಹಣ ವರ್ಗಾವಣೆಗೆ ಬಳಸಲಾಗಿದೆ ಎಂದು ತಿಳಿಸುತ್ತಾರೆ, ಮುಂದುವರೆದು ತನ್ನ ಉನ್ನತ ಮಹಿಳಾ ಅಧಿಕಾರಿಗೆ ವಾಟ್ಸಾಪ್ ವೀಡಿಯೊ ಕಾಲ್ ಮೂಲಕ ಕರೆಗೆ ಸೇರಿಸುತ್ತಾರೆ. ತಾನು ಯಾವುದರಲ್ಲೂ ಭಾಗಿಯಾಗಿಲ್ಲ ಮತ್ತು ತಾನು ಎಂದಿಗೂ ಮುಂಬೈಗೆ ಪ್ರಯಾಣಿಸಿಲ್ಲ ಎಂದು ರಶ್ಮಿ ಮನವಿ ಮಾಡಿಕ್ಕೊಂಡಾಗ, ಸೈಬರ್ ಸ್ಟಾಕಿಂಗ್ ಮತ್ತು ಬ್ಯಾಂಕ್ ಖಾತೆಗೆ ಬಳಸಲಾದ ಸಿಮ್ ಕಾರ್ಡ್‌ನೊಂದಿಗೆ ನಿಮ್ಮ ಆಧಾರ್ ಬಳಸಲಾಗಿದೆ ಹಾಗಾಗಿ ತನಿಖೆ ಮುಗಿಯುವವರೆಗೆ ನಿಮ್ಮನ್ನು ಡಿಜಿಟಲ್ ಬಂಧನದಲ್ಲಿರಿಸಲಾಗುತ್ತದೆ ಎಂದು ಮಹಿಳಾ ಅಧಿಕಾರಿ ಸ್ಪಷ್ಟವಾಗಿ ಹೇಳುತ್ತಾರೆ, ಮುಂದುವರೆದು ನೀವು ಈ ಬಗ್ಗೆ ತನಿಖೆ ಮುಗಿಯುವವರೆಗೆ ಯಾರಿಗೂ ಬಹಿರಂಗಪಡಿಸುವಂತಿಲ್ಲಾ ಮತ್ತು ನೀವು ಬಹಿರಂಗಪಡಿಸುವ ವ್ಯಕ್ತಿಗಳನ್ನು ಅಪರಾಧದಲ್ಲಿ ಪಾಲುದಾರರನ್ನಾಗಿ ಸೇರಿಸಲಾಗುತ್ತದೆ ಮತ್ತು ನೀವು ನಮ್ಮ ಅನುಮತಿಯಿಲ್ಲದೆ ಕರೆಯನ್ನು ಸ್ವಿಚ್ ಆಫ್ ಮಾಡುವಂತಿಲ್ಲಾ ಎಂದು ತಿಳಿಸುತ್ತಾರೆ. ಆಶ್ಚರ್ಯದ ವಿಷಯವೇನೆಂದರೆ ಇದು 17 ದಿನಗಳವರೆಗೆ ಮುಂದುವರಿಯುತ್ತದೆ ಮತ್ತು ಈ ಮಧ್ಯೆ, ದೈಹಿಕವಾಗಿ ಬಂಧನಕ್ಕೊಳಗಾಗುವುದನ್ನು ತಪ್ಪಿಸಲು ರಶ್ಮಿ ತನ್ನ ಎಲ್ಲಾ ಉಳಿತಾಯದ ಮೊತ್ತವಾದ 2.5 ಲಕ್ಷ ರೂಪಯಿಗಳನ್ನು ಅವರಿಗೆ ವರ್ಗಾಯಿಸುತ್ತಾರೆ. ಇಲ್ಲಿ ರಶ್ಮಿ “ಡಿಜಿಟಲ್ ಅರೆಸ್ಟ್” ಎಂಬ ಸೈಬರ್ ಅಪರಾಧಕ್ಕೆ ಬಲಿಯಾಗಿರುತ್ತಾರೆ.
ಭಾರತದಾದ್ಯಂತ ಇದೇ ರೀತಿಯ ಅನೇಕ “ಡಿಜಿಟಲ್ ಅರೆಸ್ಟ್” ಘಟನೆಗಳು ವರದಿಯಾಗಿವೆ, ಅಲ್ಲಿ ಸೈಬರ್ ಅಪರಾಧಿಗಳು ಬಲಿಪಶುಗಳನ್ನು ಹೆದರಿಸುತ್ತಾರೆ, ಬೆದರಿಕೆಯ ಭಾಷೆ ಬಳಸಿ ಭಯಭೀತರಾಗಿಸುತ್ತಾರೆ, ಪುರಾವೆಗಳನ್ನು ಸೃಷ್ಟಿಸುತ್ತಾರೆ ಮತ್ತು ಯಾವುದೇ ಕಾನೂನು ಪರಿಣಾಮಗಳಿಂದ ಅಥವಾ ಅರೆಸ್ಟ್ ನಿಂದ ತಪ್ಪಿಸಿಕೊಳ್ಳಲು ದೊಡ್ಡ ಮೊತ್ತದ ಹಣವನ್ನು ಕೇಳುತ್ತಾರೆ. ಈ ಹಗರಣದಲ್ಲಿ, ಪೋಲೀಸ್ ಅಥವಾ ಕಸ್ಟಮ್ಸ್ ಏಜೆಂಟ್‌ಗಳನ್ನು ಒಳಗೊಂಡಂತೆ ಅನೇಕ ವಿಭಾಗದ ಅಧಿಕಾರಿಗಳಂತೆ ಸೈಬರ್ ಅಪರಾಧಿಗಳು ಸೋಗು ಹಾಕುತ್ತಾರೆ ಮತ್ತು ನೀವು ಡಿಜಿಟಲ್ ಬಂಧನಕ್ಕೆ ಒಳಪಡಿಸಿದ್ದೀರೆಂದು ಭಾವಿಸುವಂತೆ ನಂಬಿಸಿ ಮೋಸಗೊಳಿಸುತ್ತಾರೆ.
ಭಾರತದಲ್ಲಿ, ತನಿಖಾ ಅವಧಿಯಲ್ಲಿ ಯಾವುದೇ ಅಪರಾಧಕ್ಕಾಗಿ ವ್ಯಕ್ತಿಯನ್ನು ಡಿಜಿಟಲ್ ಬಂಧನ ಅಥವಾ ಅವರ ಡಿಜಿಟಲ್ ಚಲನೆಯನ್ನು ನಿರ್ಬಂಧಿಸಲು ಅಥವಾ ಲಾಕ್ ಮಾಡಲು ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ. ಡಿಜಿಟಲ್ ಅರೆಸ್ಟ್ ಹಗರಣಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ದೆಹಲಿ ಪೊಲೀಸರು 4 ಜನರನ್ನು ಬಂಧಿಸಿದ್ದಾರೆ. “ಡಿಜಿಟಲ್ ಅರೆಸ್ಟ್” ಹಗರಣಗಳು ಸೇರಿದಂತೆ ಸೈಬರ್ ಅಪರಾಧಗಳ ಪ್ರಸರಣದ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡಿದ್ದು ಮತ್ತು ಇದಕ್ಕೆ ದೆಹಲಿ ಹೈಕೋರ್ಟ್, ಕೇಂದ್ರ ಮತ್ತು ದೆಹಲಿ ರಾಜ್ಯ ಸರ್ಕಾರದಿಂದ “ಡಿಜಿಟಲ್ ಅರೆಸ್ಟ್” ಬಗ್ಗೆ ಪ್ರತಿಕ್ರಿಯೆಯನ್ನು ಕೇಳಿದೆ.
ಡಿಜಿಟಲ್ ಅರೆಸ್ಟ್ ಹಗರಣಗಳಿಂದ ನಿಮ್ಮನ್ನು ನೀವು ರಕ್ಷಿಸಿಕ್ಕೊಳಲು :-
- ಅಪರಿಚಿತ ಸಂಖ್ಯೆಗಳಿಂದ ಬರುವ ಎಲ್ಲಾ ಕರೆ/ಸಂದೇಶಗಳು/ಆಫರ್ ಮತ್ತು ಡಿಜಿಟಲ್ ವಹಿವಾಟುಗಳಲ್ಲಿ ಯಾವಾಗಲೂ ‘ಶೂನ್ಯ ವಿಶ್ವಾಸ, ತಾಳ್ಮೆ ಮತ್ತು ದೃಢೀಕರಣ’ ತತ್ವವನ್ನು ಅನುಸರಿಸಿ.
- ನಿಮಗೆ ಏನಾದರೂ ಸಂದೇಹ ಬಂದರೆ, ಪ್ರಶ್ನೆ ಮಾಡಿ ಅಥವಾ ಸಮಯ ಪಡೆದು ಪ್ರತಿಕ್ರಿಯಿಸಿ.
- ನೀವು ಅವರಿಂದ FIR ಮಾಹಿತಿಯನ್ನು ಪಡೆದುಕ್ಕೋಳ್ಳಿ ಮತ್ತು ಹತ್ತಿರದ ಪೊಲೀಸ್ ಠಾಣೆಯಲ್ಲಿ ಅಥವಾ ಯಾವ ರಾಜ್ಯದಲ್ಲಿ FIR ದಾಖಲಾಗಿದಿಯೋ ಆ ರಾಜ್ಯದ ಪೊಲೀಸ್ E-FIR ಅಥವಾ ಆನ್ಲೈನ್ FIR ವಿವರಗಳನ್ನು ಪಡೆಯುವ ಸೌಲಭ್ಯವಿದ್ದರೆ ಅದರಲ್ಲಿ ನೀವು ಪರಿಶೀಲಿಸಬಹುದು.
- ಪ್ರತಿಕ್ರಿಯಿಸುವ ಮೊದಲು ಅಥವಾ ಅವರ ಸೂಚನೆಗಳ ಪ್ರಕಾರ ಕಾರ್ಯನಿರ್ವಹಿಸುವ ಮೊದಲು ಹತ್ತಿರದ ಪೊಲೀಸ್ ಠಾಣೆ ಅಥವಾ ಸೈಬರ್ ಸಹಾಯವಾಣಿ ಅಥವಾ ನಿಮ್ಮ ವಕೀಲರೊಂದಿಗೆ ಪರಿಶೀಲಿಸುವ ಮೂಲಕ ಆರೋಪವನ್ನು ದೃಢೀಕರಿಸಿ.
- ಅಪರಿಚಿತರಿಂದ ಬರುವ ಹೈಪರ್ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ ಅಥವಾ ಸಂದೇಶ/ಇಮೇಲ್ನಲ್ಲಿ ಒದಗಿಸಲಾದ ಯಾವುದೇ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಡಿ.
- ಆಧಾರ್ ಅಥವಾ ಪ್ಯಾನ್ ವಿವರಗಳು ಅಥವಾ ನಿಮ್ಮ ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳಂತಹ ವೈಯಕ್ತಿಕ ಸೂಕ್ಷ್ಮ ಮಾಹಿತಿಯನ್ನು ಎಂದಿಗೂ ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ.
- ಅಪರಿಚಿತರಿಂದ ಬರುವ ಫೋನ್/ಇಂಟರ್ನೆಟ್ ಮೂಲಕ ಹಣ ವರ್ಗಾವಣೆ ಬೇಡಿಕೆಗಳು, ತುರ್ತು ಕಾನೂನು ಕ್ರಮದ ಬೆದರಿಕೆಗಳು ಮತ್ತು ಪಾವತಿಯ ಅಸಾಮಾನ್ಯ ವಿಧಾನಗಳ ಬಗ್ಗೆ ಎಚ್ಚರದಿಂದಿರಿ.
ನೀವು ಅಂತಹ ವಂಚನೆಗೆ ಬಲಿಯಾಗಿದ್ದರೆ :-
ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್‌ಸೈಟ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ವಂಚನೆಯ ಬಗ್ಗೆ ಆ ಬ್ಯಾಂಕ್/ಕೋರಿಯರ್ ಕಂಪನಿಯ ವೆಬ್‌ಸೈಟ್ ನಲ್ಲಿ ಅಥವಾ ಕರೆ ಮಾಡಿ ದೂರು ಸಲ್ಲಿಸಿ. ವರ್ಗಾವಣೆಯಾದ ಮೊತ್ತದ ಮೇಲೆ ಡೆಬಿಟ್ ಫ್ರೀಜ್ ಮಾಡಿ. ನಿಮ್ಮ ಸಾಧನವು ಮಾಲ್‌ವೇರ್‌ನಿಂದ ಸೋಂಕಿಗೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ಅದನ್ನು ಬ್ಯಾಕಪ್ ತೆಗೆದುಕೊಂಡ ನಂತರ ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.
ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಪರಿಹಾರಗಳು :-
ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಸೆಕ್ಷನ್ ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಿಸಬಹುದು:
- ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 378(ಕಳ್ಳತನ), 419 (ಸೋಗು ಹಾಕುವ ಮೂಲಕ ವಂಚನೆಗೆ ಶಿಕ್ಷೆ) ಮತ್ತು 420 (ವಂಚನೆ), ಸೆಕ್ಷನ್ 424(ಕಾನೂನುಬಾಹಿರವಾಗಿ ಡೇಟಾವನ್ನು ಹೊರತೆಗೆಯುವುದು), ಸೆಕ್ಷನ್ 441(ಕ್ರಿಮಿನಲ್ ಅತಿಕ್ರಮಣ), ಸೆಕ್ಷನ್ 467(ಫೋರ್ಜರಿ), ಸೆಕ್ಷನ್ 468( ಫೋರ್ಜರಿ/ನಕಲಿಗಾಗಿ ಶಿಕ್ಷೆ), ಮತ್ತು ಸೆಕ್ಷನ್ 471 (ಫೋರ್ಜರಿ/ನಕಲಿ ದಾಖಲೆಯ ಬಳಕೆ).
- ಮಾಹಿತಿ ತಂತ್ರಜ್ಞಾನ ಕಾಯಿದೆ (IT) ಕಾಯಿದೆ 2000/08 ಸೆಕ್ಷನ್ 43 (ಕಂಪ್ಯೂಟರ್, ಕಂಪ್ಯೂಟಿಂಗ್ ಸಾಧನ ಇತ್ಯಾದಿಗಳಿಗೆ ಹಾನಿಗಾಗಿ ದಂಡ ಮತ್ತು ಪರಿಹಾರ), ಸೆಕ್ಷನ್ 65 (ಕಂಪ್ಯೂಟರ್ ಅನ್ನು ಹಾಳುಮಾಡುವುದು), ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿತ ಅಪರಾಧಗಳಿಗೆ ಶಿಕ್ಷೆ – ಡೇಟಾ ಕಳ್ಳತನ ಮಾಡುವ ವ್ಯಕ್ತಿ, ಸಿಸ್ಟಮ್ಗೆ ವೈರಸ್ ಹರಡುವುದು, ಡೇಟಾ ನಾಶಪಡಿಸುವುದು, ಹ್ಯಾಕಿಂಗ್ , ಅಥವಾ ಅಧಿಕೃತ ವ್ಯಕ್ತಿಗೆ ಕಂಪ್ಯೂಟರ್ ಅಥವಾ ನೆಟ್ವರ್ಕ್ಗೆ ಪ್ರವೇಶವನ್ನು ನಿರಾಕರಿಸುವುದು), ಸೆಕ್ಷನ್ 66C (ಇದು ಗುರುತಿನ ಕಳ್ಳತನಕ್ಕೆ ದಂಡವನ್ನು ಸೂಚಿಸುತ್ತದೆ ಮತ್ತು ವ್ಯಕ್ತಿಯ ಗುರುತಿನ ಮಾಹಿತಿಯನ್ನು ಮೋಸದಿಂದ ಅಥವಾ ಅಪ್ರಾಮಾಣಿಕವಾಗಿ ಬಳಸುವುದು) ಮತ್ತು ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಸೋಗು ಹಾಕುವ ಮೂಲಕ ಮಾಡಿದ ವಂಚನೆಗೆ ಶಿಕ್ಷೆ).