ಇವತ್ತಿನ ಕಾಲದಲ್ಲಿ ನಮಗೆ ನಿಮಗೆ ಜ್ಞಾಪಕ ಇಟ್ಕೋಳೊಕ್ಕೆ ಪರೆದಾಡತಾ ಇರೋ ಒಂದೇ ವಿಷಯ ಅಂದ್ರೆ ಅದು ಯಾವ ಅಕೌಂಟ್ ಗೆ ಯಾವ ಪಾಸ್ವರ್ಡ್ ಇಟ್ಟಿದ್ವಿ ಅನ್ನುವುದು. ಇದು ಡಿಜಿಟಲ್ ಯುಗ, ನಮೆಲ್ಲಾ ವ್ಯವಹಾರವು ಇಂಟರ್ನೆಟ್/ಸ್ಮಾರ್ಟ್ ಫೋನ್/ಕಂಪ್ಯೂಟರ್ ಮುಖಂತರವೇ ಆಗಿಹೋಗಿದೆ. ಸೆಕ್ಯೂರಿಟಿ ಕಾರಣಕ್ಕೆ ಪ್ರತಿಯೊಂದು ಬ್ಯಾಂಕ್/ಇಮೇಲ್/ಶಾಪಿಂಗ್/ಸೋಶಿಯಲ್ ಮೀಡಿಯಾ ಅಕೌಂಟಿಗೂ ಅದರದೇ ಆದ ಬೇರೆ ಬೇರೆ ಪಾಸ್ವರ್ಡ್ ಪಾಲಿಸಿ ಇರುತ್ತೆ, ಪಾಸ್ವರ್ಡ್ ಬದಲಿಸುವ ಅವಧಿ(expiry) ಕೂಡ ಭಿನ್ನವಾಗಿರುತ್ತದೆ, ಹಾಗಾಗಿ ನಾವು ವಿಧಿಯಿಲ್ಲದೆ ಬೇರೆ ಬೇರೆ ಪಾಸ್ವರ್ಡ್ ಜ್ಞಾಪಕದಲ್ಲಿ ಇಡಬೇಕಾಗುತ್ತದೆ. ಇಲ್ಲಿ ನಮ್ಮ ಸೋಂಬೇರಿತನ ಅಥವಾ ಜುಗಾಡ್ ಬುದ್ದಿ ಕೆಲಸಮಾಡುತ್ತದೆ ಮತ್ತು ನಾವು ಸುಲಭವಾಗಿ ನೆನೆಪಿಗೆ ಬರುವಂತ ಒಂದೇ/ಒಂದೇ ಮಾದರಿಯ ಎಷ್ಟು ಚಿಕ್ಕದು ಸಾಧ್ಯವೋ ಅಂತಹ ಪಾಸ್ವರ್ಡ್ ಗಳನ್ನೂ ನಮ್ಮ ಎಲ್ಲಾ ಅಕೌಂಟ್ ಗಳಿಗೂ ಬಳಸುತ್ತೇವೆ, ಅದರಿಂದ ಸೈಬರ್ ಅಪರಾಧಿಗಳ ದಾಳಿಗೆ ಸುಲಭವಾಗಿ ಬಲಿಯಾಗುತ್ತೇವೆ ಮತ್ತು ನಮ್ಮ ಹಣ ಮತ್ತು ಖಾಸಗಿ ಮಾಹಿತಿಯನ್ನು ಕಳೆದುಕೊಳ್ಳುತ್ತೇವೆ. ಈ ಅಂಕಣದಲ್ಲಿ ನಾನು ಪಾಸ್ವರ್ಡ್ ಹೇಗೆ ಚಾಲ್ತಿಗೆ ಬಂತು ಮತ್ತು ನಿಮಗೆ ನಿಮ್ಮ ವಿವಿಧ ಅಕೌಂಟ್ ಗಳಿಗೆ ಹೇಗೆ ಸುಲಭವವಾಗಿ ಜ್ಞಾಪಕದಲ್ಲಿರುವ ಹಾಗೆ ಬಲಿಷ್ಠ ಪಾಸ್ವರ್ಡ್ಳ ಗಳನ್ನು ಹೇಗೆ ಇಡಬಹುದು ಎಂಬುದರ ಕುರಿತು ಕೆಲವು ಟಿಪ್ಸ್ಗಳನ್ನು ನೀಡಲು ಪ್ರಯತ್ನಿಸುತ್ತೇನೆ.
ಪ್ರತಿ ವರ್ಷ ಮೇ ತಿಂಗಳ ಮೊದಲ ಗುರುವಾರ ವಿಶ್ವ ಪಾಸ್ವರ್ಡ್ ದಿನಾಚರಣೆ ಆಚರಿಸುತ್ತಾರೆ, ಅದರ ಮೂಲ ಉದ್ದೇಶ ಬಲಿಷ್ಠ ಪಾಸ್ವರ್ಡ್ ಅವಶ್ಯಕತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದಾಗಿರುತ್ತದೆ. ಇತಿಹಾಸಕಾರರ ಪ್ರಕಾರ ರೋಮಿನ ಮಿಲಿಟರಿ ಸಂದೇಶ ವಾಹಕರ ಮದ್ಯೆ ಮೊದಲ ದಾಖಲಾಗಿರುವ ಪಾಸ್ವರ್ಡ್ ಬಳಕೆ ನಡೆದಿತ್ತು. ಆದುನಿಕ ಕಂಪ್ಯೂಟರ್/ಡಿಜಿಟಲ್ ಪಾಸ್ವರ್ಡ್ ವಿಶ್ವಕ್ಕೆ ಪರಿಚಯಿಸಿದ ಹೆಗ್ಗಳಿಕೆ ಅಮೆರಿಕಾದ MIT ಕಂಪ್ಯೂಟರ್ ವಿಜ್ಞಾನಿ ಫೆರ್ನಾಂಡೋ ಕಾರ್ಬಾಟೊ ಗೆ ಸಲ್ಲುತ್ತದೆ. ಕುತೂಹಲದ ವಿಷಯವೇನೆಂದರೆ 1960 ರಲ್ಲಿ ಮೊದಲ ಕಂಪ್ಯೂಟರ್ ಪಾಸ್ವರ್ಡ್ ಬಳಕೆಗೆ ಬರುತ್ತದೆ ಮತ್ತು 1962 ರಲ್ಲಿ ಮೊದಲ ಪಾಸ್ವರ್ಡ್ ಕಳ್ಳತನವಾಗುತ್ತದೆ. ಒಂದು ಸೂತ್ರದ ಪ್ರಕಾರ ನಾವೆಲ್ಲರೂ ನಮ್ಮ ಜೀವಿತಾವಧಿಯಲ್ಲಿ ಸರಾಸರಿ 162 ಪಾಸ್ವರ್ಡ್ ಗಳನ್ನೂ ಬಳಸಿದ್ದೇವೆ ಮತ್ತು ತುಂಬ ಬಳಕೆಯಲ್ಲಿರುವ ಪಾಸ್ವರ್ಡ್ 123456 ಮತ್ತು password. ಇನ್ನೊಂದು ವರದಿಯ ಪ್ರಕಾರ, 2024 ರಲ್ಲಿ ಕೇವಲ 8 ಸಂಖ್ಯೆಯ ಪಾಸ್ವರ್ಡ್ ಅನ್ನು ಕೇವಲ 37 ಸೆಕೆಂಡಿನಲ್ಲಿ, ಕೇವಲ 8 ಸಣ್ಣ ಅಕ್ಷರದ ಪಾಸ್ವರ್ಡನ್ನು 22 ಗಂಟೆಗಳಲ್ಲಿ, 8 ಮಿಶ್ರ ಅಕ್ಷರದ ಪಾಸ್ವರ್ಡನ್ನು 8 ತಿಂಗಳಲ್ಲಿ, 8 ಮಿಶ್ರ ಅಕ್ಷರ/ಸಂಖ್ಯೆ ಪಾಸ್ವರ್ಡನ್ನು 3 ವರ್ಷಗಳಲ್ಲಿ, ಮತ್ತು 8 ಮಿಶ್ರ ಅಕ್ಷರ/ಸಂಖ್ಯೆ/ಸಿಂಬಲ್ ಪಾಸ್ವರ್ಡನ್ನು 7 ವರ್ಷಗಳಲ್ಲಿ ಸೈಬರ್ ಅಪರಾಧಿಗಳು ಭೇದಿಸುತ್ತಾರೆ.
ಸುಲಭ-ಬಲಿಷ್ಠ ಪಾಸ್ವರ್ಡ್ ಇಡುವುದರ ಬಗ್ಗೆ ಬೆಸ್ಟ್ ಟಿಪ್ಸ್ :-
- ದುರ್ಬಲ ಪಾಸ್ವರ್ಡ್ ಬೇಡವೇ ಬೇಡ, ಅಂದರೆ ಅದರಲ್ಲಿ ನಿಮ್ಮ/ಹೆಂಡತಿ/ಮಕ್ಕಳ ಹೆಸರು, ಊರು, ಹುಟ್ಟಿದ ದಿನಾಂಕ ಇತ್ಯಾದಿ ಸಾಮಾನ್ಯ ಪದಗಳನ್ನು ಬಳಸಬೇಡಿ.
- ನೀವು ಕಡಿಮೆಯೆಂದರೆ 8 ಮಿಶ್ರ ಅಕ್ಷರ/ಸಂಖ್ಯೆ/ಸಿಂಬಲ್ ಪಾಸ್ವರ್ಡನ್ನು ಬಳಸಿ. ಉದಾಹರಣೆಗೆ ನೀವು ನಿಮ್ಮ ಇಷ್ಟದ ಚಿತ್ರ/ವಸ್ತು/ತಿಂಡಿ ಯ ಕನ್ನಡದ ಹೆಸರನ್ನು ಇಂಗ್ಲಿಷ್ ನಲ್ಲಿ ಬಳಸಿ.
- ಪ್ರತಿಯೊಂದು ಪ್ರಮುಖ ಅಕೌಂಟ್ ಗಳಿಗೂ ಪ್ರತ್ಯೇಕ ಪಾಸ್ವರ್ಡ್ ಬಳಸಿ. ಪ್ರಮುಖವಲ್ಲದ ಹಣಕಾಸು ವ್ಯವಹಾರವಲ್ಲದ ಖಾತೆಗಳಿಗೆ ಬೇಕಾದರೆ ಒಂದೇ ಸಾಮಾನ್ಯ ಪಾಸ್ವರ್ಡ್ ಬಳಿಸಿ.
- ನಿಮ್ಮ ಎಲ್ಲಾ ಪಾಸ್ವರ್ಡ್ ಗಳನ್ನು ಹಾಳೆ/ಡೈರಿ/ಫೈಲ್/ಇಮೇಲ್ ನಲ್ಲಿ ಬರೆದಿಡಬೇಡಿ. ಇದಕ್ಕೆ ಬೇಕಾದರೆ ನೀವು ಒಳ್ಳೆಯ ಪಾಸ್ವರ್ಡ್ ಮ್ಯಾನೇಜರ್ ಬಳಸಬಹುದು.
- ನಿಮ್ಮ ಖಾತೆ ಮಲ್ಟಿ/ಟೂ ಫ್ಯಾಕ್ಟರ್ ಆಥೆಂಟಿಕೇಷನ್/ಸಿಂಗಲ್ ಸೈನ್-ಆನ್ ಸೌಲಭ್ಯ ಇದ್ದರೆ ಅದನ್ನು ಕಂಡಿತಾ ಬಳಸಿ, ಇದರಿಂದ ನಿಮ್ಮ ಪಾಸ್ವರ್ಡ್ ಜೊತೆ OTP ಮತ್ತು/ಅಥವಾ ಬಯೊಮೀಟ್ರಿಕ್ ಬಳಸಿ ಸುರಕ್ಷತೆಯನ್ನು ವೃದ್ಧಿಸಲಾಗುತ್ತದೆ.
- ಪಾಸ್ವರ್ಡ್ ಬದಲಾವಣೆಯ ನೋಟಿಫಿಕೇಶನ್ ಎನೇಬಲ್ ಮಾಡಿ ಮತ್ತು ಪಾಸ್ವರ್ಡ್ ಬದಲಿಸಲು ಮಲ್ಟಿ/ಟೂ ಫ್ಯಾಕ್ಟರ್ ಆಥೆಂಟಿಕೇಷನ್ ಸೌಲಭ್ಯ ಇದ್ದರೆ ಅದನ್ನು ಖಂಡಿತಾ ಬಳಸಿ.
- ಪ್ರಮುಖ ಖಾತೆಗಳಿಗೆ ಪ್ರತಿ 3-6 ತಿಂಗಳಿಗೊಮ್ಮೆ ನಿಮ್ಮ ಪಾಸ್ವರ್ಡ್ ಬದಲಾಯಿಸುತ್ತಿರಿ.
- ಬೇರೆ ಯಾರೊಂದಿಗೂ ನಿಮ್ಮ ಪಾಸ್ವರ್ಡ್ ಹಂಚಿಕೊಳ್ಳಬೇಡಿ, ಹಾಗೆ ಹಂಚಿಕೊಳ್ಳಲೇ ಬೇಕಾದರೆ ಸುಲಭವಾದ ಬೇರೆ ಪಾಸ್ವರ್ಡ್ ಇಟ್ಟು ಕೆಲಸವಾದ ನಂತರ ನಿಮ್ಮ ಮುಂಚಿನ ಬಲಿಷ್ಠ ಪಾಸ್ವರ್ಡ್ ಗೆ ಬದಲಾಯಿಸಿ.
- ನಿಮಗೆ ನಿಮ್ಮ ಖಾತೆ ಹ್ಯಾಕ್ ಆಗಿರಬಹುದು ಅನ್ನಿಸಿದರೆ, ಕೂಡಲೇ ಪಾಸ್ವರ್ಡ್ ಬದಲಾಯಿಸಿ.