ಸುಲೇಖಾ 27 ವರ್ಷ ವಯಸ್ಸಿನ ಯುವತಿ, ಮದುವೆಯಾಗಿಲ್ಲ ಮತ್ತು ಭಾರತದ ಪ್ರಮುಖ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಾಳೆ. ಒಂದು ದಿನ ಅವಳ ಫೇಸ್‌ಬುಕ್ ಖಾತೆಯಲ್ಲಿ ರಾಕೇಶ್‌ನಿಂದ ಬಂದ ಸ್ನೇಹಿತರ ವಿನಂತಿಯನ್ನು ಅವಳು ಸ್ವೀಕರಿಸುತ್ತಾಳೆ. ಅವರು ಕೆಲವು ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಮತ್ತು ಕ್ರಮೇಣ ಅವರು ಸಾಮಾಜಿಕ ಮಾಧ್ಯಮ ಸ್ನೇಹಿತರಾಗುತ್ತಾರೆ ಮತ್ತು ಫೋನ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಒಂದು ದಿನ ರಾಕೇಶ್ ತನ್ನ ಹುಟ್ಟುಹಬ್ಬವನ್ನು ಆಚರಿಸಲು ಅವಳನ್ನು ಊಟಕ್ಕೆ ಆಹ್ವಾನಿಸುತ್ತಾನೆ ಮತ್ತು ಊಟದ ಸಮಯದಲ್ಲಿ ಸುಲೇಖಾಗೆ ತನ್ನ ಪ್ರೀತಿಯನ್ನು ಪ್ರಸ್ತಾಪಿಸುತ್ತಾನೆ ಮತ್ತು ಮದುವೆಯಾಗಲು ಆಸಕ್ತಿ ಹೊಂದಿದ್ದೀರಾ ಎಂದು ಕೇಳುತ್ತಾನೆ. ಅದಕ್ಕೆ ಸುಲೇಖಾ, ತನ್ನ ಕುಟುಂಬವು ಈಗಾಗಲೇ ತನಗಾಗಿ ಸಂಬಂಧವನ್ನು ನೋಡಿದೆ ಮತ್ತು ಅದಕ್ಕೆ ಒಪ್ಪಿಗೆಯನ್ನೂ ನೀಡಿದ್ದೇನೆ ಎಂದು ಅವನಿಗೆ ತಿಳಿಸುತ್ತಾಳೆ. ರಾಕೇಶ್ ಹತಾಶನಾಗುತ್ತಾನೆ ಆದರೆ ಅವಳನ್ನು ಮರೆಯಲು ಸಾಧ್ಯವಾಗುವುದಿಲ್ಲ, ಅವನು ಅವಳನ್ನು ಗೆಲ್ಲಬಹುದೆಂಬ ಭರವಸೆಯಿಂದ ಪ್ರಣಯ ಕವಿತೆಗಳು ಮತ್ತು ಸಂದೇಶಗಳನ್ನು ಅವಳಿಗೆ ಫೇಸ್‌ಬುಕ್‌ನಲ್ಲಿ ಕಳುಹಿಸಲು ಪ್ರಾರಂಭಿಸುತ್ತಾನೆ. ಸುಲೇಖಾ ಆರಂಭದಲ್ಲಿ ಅವನ ಸಂದೇಶಗಳನ್ನು ನಿರ್ಲಕ್ಷಿಸುತ್ತಾಳೆ ಆದರೆ ಸಂದೇಶಗಳ ಸಂಖ್ಯೆ ಹೆಚ್ಚಾದಾಗ ಅವಳು ರಾಕೇಶನಿಗೆ ಸಂದೇಶಗಳನ್ನು ಕಳುಹಿಸುವುದನ್ನು ನಿಲ್ಲಿಸುವಂತೆ ಎಚ್ಚರಿಸುತ್ತಾಳೆ ಮತ್ತು ಅವನು ಕೇಳದಿದ್ದರಿಂದ ಅವಳು ಅವನನ್ನು ಬ್ಲಾಕ್ ಮಾಡುತ್ತಾಳೆ. ಅದಾದ ಕೆಲವೇ ದಿನಗಳಲ್ಲಿ ಅವಳಿಗೆ ಹೊಸ ಸಮಸ್ಯೆ ಶುರುವಾಗುತ್ತದೆ, ಅವನು ಅವಳಿಗೆ sms, ಇಮೇಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ರೋಮ್ಯಾಂಟಿಕ್ ಹಾಗು ಅಶ್ಲೀಲ ಕವಿತೆಗಳು, ಚಿತ್ರಗಳು ಮತ್ತು ವೀಡಿಯೊಗಳನ್ನು ವಿವಿಧ ಹೆಸರುಗಳು ಮತ್ತು ಮೊಬೈಲ್ ಸಂಖ್ಯೆಗಳಿಂದ ಸಂದೇಶಗಳನ್ನು ಕಳುಹಿಸಲು ಶುರು ಮಾಡುತ್ತಾನೆ. ಕೆಲವು ಸಂದೇಶಗಳಲ್ಲಿ, ಆಕೆಯ ಇತ್ತೀಚಿನ ಚಟುವಟಿಕೆಗಳು ಮತ್ತು ಅವಳು ಭೇಟಿ ನೀಡಿದ ಸ್ಥಳಗಳ ವಿವಿರಗಳಿರುತ್ತವೆ. ಆಕೆಯ ಆನ್ಲೈನ್ ಇಮೇಲ್ಗಳು, ಸಂದೇಶಗಳು ಮತ್ತು ಬ್ರೌಸಿಂಗ್ ಹಿಸ್ಟರಿಯನ್ನು ಯಾರೋ ನಿಗಾವಹಿಸುತ್ತಿದ್ದಾರೆ ಎಂದು ಅವಳಿಗೆ ಅನ್ನಿಸಲಿಕ್ಕೆ ಶುರುವಾಗುತ್ತದೆ. ನಂತರ ಆಕೆಯ ಸ್ನೇಹಿತರು ಮತ್ತು ಸಂಬಂಧಿಕರಿಗೆ ಸುಲೇಖಾ ಹೆಸರಿನಲ್ಲಿ ವಿವಿಧ ರೀತಿಯ ಅವಹೇಳನಕಾರಿ ಮತ್ತು ಮಾನಹಾನಿಕರ ಮೆಸೇಜುಗಳು ಮತ್ತು ಚಿತ್ರಗಳನ್ನು ಒಳಗೊಂಡ ಆಕೆಯ ಇಮೇಲ್ ಮತ್ತು ಅವಳ ಸಾಮಾಜಿಕ ಪ್ರೊಫೈಲ್‌ಗಳನ್ನು ಅನುಕರಿಸುವ ಸಂದೇಶಗಳು ಬರಲಾರಂಭಿಸುತ್ತದೆ . ಸುಲೇಖಾ ಸೈಬರ್ ಸ್ಟಾಕಿಂಗ್ ಸೈಬರ್ ಅಪರಾಧಕ್ಕೆ ಬಲಿಯಾಗಿರುತ್ತಾಳೆ.
ಸೈಬರ್ ಸ್ಟಾಕಿಂಗ್ ಎನ್ನುವುದು ಆ ವ್ಯಕ್ತಿಯ ಒಪ್ಪಿಗೆಯಿಲ್ಲದೆ ಅಥವಾ ಅವರಿಗೆ ತಿಳಿಯದಂತೆ ಅವರ ಆನ್ಲೈನ್ ವಿವರಗಳ ಸಂಪಾದನೆ ಮತ್ತು ಅದನ್ನು ಬಳಸಿ ಅವರನ್ನು ಆನ್ಲೈನ್ನಲ್ಲಿ ಸಂಪರ್ಕಿಸಲು ಅಥವಾ ಟ್ರೇಸ್ ಮಾಡಲು ಪ್ರಯತ್ನಿಸುವುದನ್ನು ಸೂಚಿಸುತ್ತದೆ. ಅದಕ್ಕೆ ಸೈಬರ್ ಅಪರಾಧಿಗಳು ಇಮೇಲ್, sms ಇತ್ಯಾದಿ ಎಲೆಕ್ಟ್ರಾನಿಕ್ ಸಂವಹನಗಳನ್ನು ಅಥವಾ ಫೇಸ್ಬುಕ್, ಇನ್ಸ್ಟಾಗ್ರಾಮ್ ಇತ್ಯಾದಿ ಸಾಮಾಜಿಕ ಮಾಧ್ಯಮಗಳನ್ನು ಅಥವಾ ಇತರ ತಂತ್ರಜ್ಞಾನ ಮಾಧ್ಯಮಗಳನ್ನು ಸೈಬರ್ ಸ್ಟಾಕಿಂಗ್ ಅಪರಾಧಗಳನ್ನು ಎಸಗಲು ಬಳಸುತ್ತಾರೆ. ಈ ಅಪರಾಧಗಳಲ್ಲಿ ಸೈಬರ್ ಅಪರಾಧಿಗಳು ಬಲಿಪಶುವಿನ ಚಟುವಟಿಕೆಗಳನ್ನು ಆನ್ಲೈನ್ನಲ್ಲಿ ಟ್ರ್ಯಾಕ್ ಮಾಡುವುದು ಮತ್ತು ಅದನ್ನು ಬಳಸಿ ಅವರನ್ನು ಬ್ಲ್ಯಾಕ್ಮೇಲ್, ಸುಲಿಗೆ, ಗುರುತಿನ ಕಳ್ಳತನ, ಸುಳ್ಳು ಆರೋಪಗಳನ್ನು ಮಾಡುವುದು, ಡಾಕ್ಸಿಂಗ್ ಅಥವಾ ಅವರಿರುವ ಜಾಗದ ಗುರುತು ಮತ್ತು ಅವರ ಚಟುವಟಿಕೆಗಳನ್ನು ಸಾರ್ವಜನಿಕರಿಗೆ ಪ್ರಕಟಿಸುವುದು ಇತ್ಯಾದಿಗಳನ್ನೂ ಮಾಡುತ್ತಾರೆ. ಈ ಅಪರಾಧದ ಹಿಂದಿನ ಉದ್ದೇಶವು ಆ ವ್ಯಕ್ತಿಯ ಮೇಲಿರುವ ಅಸೂಯೆ, ಗೀಳು, ಸೇಡು ಅಥವಾ ದ್ವೇಷವನ್ನು ಒಳಗೊಂಡಿರಬಹುದು. ಸೈಬರ್ ಸ್ಟಾಕಿಂಗ್ ಹೆಚ್ಚಾಗಿ ಮಹಿಳೆಯರ ಮೇಲೆ ನಡೆಸುವ ಸೈಬರ್ ಅಪರಾಧ, ಇತರ ಮಹಿಳೆಯರ ಮೇಲೆ ನಡೆಸುವ ಸೈಬರ್ ಅಪರಾಧಕ್ಕೆ ನೀವು ನನ್ನ ಮೂರು ಭಾಗದ ಮಹಿಳೆಯರ ಮೇಲೆ ನಡೆಸುವ ಸೈಬರ್ ಅಪರಾಧದ ಮುದ್ರಿತ ಲೇಖನವನ್ನು ಓದಿ.
ಸೈಬರ್ ಸ್ಟಾಕಿಂಗ್ ತಂತ್ರಗಳು ಅಥವಾ ಅದನ್ನು ಹೇಗೆ ಮಾಡಲಾಗುತ್ತದೆ:-
ಸೈಬರ್‌ಸ್ಟಾಕರ್‌ಗಳು ಬಳಸುವ ಕೆಲವು ಸಾಮಾನ್ಯ ತಂತ್ರಗಳು ಅಥವಾ ವಿಧಾನಗಳು ಇಂತಿವೆ, ನಿಮ್ಮ ಸಾಮಾಜಿಕ ಮಾಧ್ಯಮ ಚಟುವಟಿಕೆಗಳು, ಇಮೇಲ್‌ಗಳು, ಸಂದೇಶಗಳು ಮತ್ತು ಬ್ರೌಸಿಂಗ್ ಇತಿಹಾಸವನ್ನು ಅನುಸರಿಸಿ, ನೀವಿರುವ ಸ್ಥಳ, ನೀವು ಮಾಡಿದ ಚಟುವಟಿಕೆಗಳು ಮತ್ತು ನೀವು ಮಾತನಾಡುತ್ತಿರುವ ಜನರು ಮುಂತಾದ ನಿಮ್ಮ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಅಥವಾ ಡೇಟಿಂಗ್ ಅಥವಾ ಮ್ಯಾಟ್ರಿಮೋನಿಯಲ್ ಜಾಲತಾಣಗಳಲ್ಲಿ ನಕಲಿ ಪ್ರೊಫೈಲ್ ಅನ್ನು ರಚಿಸಬಹುದು ಮತ್ತು ಅದನ್ನು ನಿಮ್ಮನ್ನು ದೂಷಿಸಲು ಅಥವಾ ನಂಬಿಕೆಯನ್ನು ಗಳಿಸಲು ಮತ್ತು ನಿಮ್ಮ ಹೆಸರಿನಲ್ಲಿ ವಂಚನೆಗಳನ್ನು ಮಾಡಬಹುದು. ಅವರು ನಿಮ್ಮ ಪ್ರಸ್ತುತ ಸ್ಥಳ, ನೀವು ಮಾಡಿದ ಚಟುವಟಿಕೆಗಳನ್ನು ಸಹ ಸಮಾಜಕ್ಕೆ ಪ್ರಕಟಿಸಬಹುದು ಮತ್ತು ಆ ಮೂಲಕ ನಿಮ್ಮ ಜೀವನ ಮತ್ತು ಘನತೆಗೆ ಅಪಾಯವನ್ನು ಉಂಟುಮಾಡಬಹುದು. ಅವರು ಮಾಲ್‌ವೇರ್‌ಗಳು ಮತ್ತು ಸ್ಟಾಕರ್ ವೇರ್ ಸಾಫ್ಟ್‌ವೇರ್ ಅಥವಾ ಪ್ರೋಗ್ರಾಂಗಳನ್ನು ನಿಮ್ಮ ಫೋನ್ ಅಥವಾ ಕಂಪ್ಯೂಟರ್ನಲ್ಲಿ ಸ್ಥಾಪಿಸಬಹುದು ಮತ್ತು ಅದನ್ನು ಬಳಸಿ ನಿಮ್ಮ ಸಿಸ್ಟಮ್ ಅನ್ನು ಹ್ಯಾಕ್ ಮಾಡಬಹುದು ಮತ್ತು ನಿಮ್ಮ ಎಲ್ಲಾ ಚಟುವಟಿಕೆಗಳು ಮತ್ತು ಸಂವಹನವನ್ನು ಮೇಲ್ವಿಚಾರಣೆ ಮಾಡಬಹುದು.
ಸೈಬರ್ ಸ್ಟಾಕಿಂಗ್ ಸೈಬರ್ ಕ್ರೈಮ್ಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು :-
- ನಿಮ್ಮ ಸಾಮಾಜಿಕ ಮಾಧ್ಯಮದ ಪ್ರೊಫೈಲ್ ಅನ್ನು ಲಾಕ್ ಮಾಡಿ ಅಥವಾ ಖಾಸಗಿಯಾಗಿ ಇರಿಸಿ.
- ಅವರ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸದೆ ನಿಮಗೆ ಬರುವ ಸ್ನೇಹಿತ ವಿನಂತಿಗಳನ್ನು ಸ್ವೀಕರಿಸಬೇಡಿ.
- ನಿಮ್ಮ ಠಿಕಾಣಿ ಅಥವಾ ಮಾಹಿತಿಯನ್ನು ಸಾರ್ವಜನಿಕ ವಾಹಿನಿಗಳಲ್ಲಿ ಹಂಚಿಕೊಳ್ಳಬೇಡಿ.
- ನೀವು ನಿಮ್ಮ ಪ್ರಯಾಣಿಸುವ ಸ್ಥಳ ಅಥವಾ ನಿಮ್ಮ ಪ್ರೀತಿಪಾತ್ರರ ಚಿತ್ರಗಳನ್ನು ಒಳಗೊಂಡಂತೆ ನಿಮ್ಮ ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಲು ಇಷ್ಟಪಟ್ಟರೆ, ಅದನ್ನು ತಿಳಿದಿರುವ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತ್ರ ಹಂಚಿಕೊಳ್ಳಲು ಅವರನ್ನೊಳಗೊಂಡ ಖಾಸಗಿ ಗ್ರೂಪಿನಲ್ಲಿ ಮಾತ್ರ ಹಂಚಿಕೊಳ್ಳಿ.
- ಯಾವಾಗಲೂ ಬಲವಾದ ಪಾಸ್ವರ್ಡ್ಗಳನ್ನು ಬಳಸಿ ಮತ್ತು ಅವುಗಳನ್ನು ಆಗಾಗ್ಗೆ ಬದಲಾಯಿಸುತ್ತಿರಿ.
- ಉತ್ತಮ ಆಂಟಿವೈರಸ್ ಮತ್ತು ಫೈರ್ ವಾಲ್ ಸಾಫ್ಟ್ವೇರ್ ಬಳಸಿ ಮತ್ತು ಆಗಾಗ ಅದನ್ನು ನವೀಕರಿಸುತ್ತಿರಿ.
ನೀವು ಸೈಬರ್ ಸ್ಟಾಕಿಂಗ್ ಸೈಬರ್ ಅಪರಾಧಕ್ಕೆ ಬಲಿಯಾಗಿದ್ದರೆ :-
ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ಸಲ್ಲಿಸಿ. ಅಂತಹ ವಂಚಕರು ಮತ್ತು ವಂಚನೆಯ ಬಗ್ಗೆ ಸಂಬಂಧಿತ ಪ್ರಾಧಿಕಾರ ಅಥವಾ ಸಾಮಾಜಿಕ ಮಾಧ್ಯಮ ಜಾಲತಾಣಕ್ಕೆ ದೂರು ನೀಡಿ. ಆ ಬಳಕೆದಾರರನ್ನು ನಿರ್ಬಂಧಿಸಿ ಆದರೆ ಸಂಬಂದಿತ ಯಾವುದೇ ಮಾಹಿತಿಯನ್ನು ಅಳಿಸಬೇಡಿ, ಅದನ್ನು ಅಪರಾಧಿಗಳ ವಿರುದ್ಧ ಪುರಾವೆಯಾಗಿ ಬಳಸಬಹುದು. ಅಪರಿಚಿತರು ಕೊಟ್ಟ ಯಾವುದೇ ಸಾಫ್ಟ್ವೇರ್ ಅನ್ನು ನೀವು ಸ್ಥಾಪಿಸಿದ್ದರೆ ಅಥವಾ ಹೈಪರ್ ಲಿಂಕ್ ಅನ್ನು ಕ್ಲಿಕ್ ಮಾಡಿದ್ದರೆ ಅಥವಾ ಒದಗಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಿದ್ದರೆ, ಆ ಸಾಫ್ಟ್ವೇರ್ ಅನ್ನು ಅನ್ಇನ್ಸ್ಟಾಲ್ ಮಾಡಿ. ನಿಮ್ಮ ಎಲ್ಲಾ ಪ್ರಮುಖ ಬ್ಯಾಂಕಿಂಗ್, ಇಮೇಲ್ ಇತ್ಯಾದಿಗಳಂತಹ ಖಾತೆಗಳ ಪಾಸ್ವರ್ಡ್ಗಳು / ಪಿನ್ಗಳನ್ನು ಬದಲಾಯಿಸಿ. ನಿಮ್ಮ ಸಾಧನವನ್ನು ಫ್ಯಾಕ್ಟರಿ ರೀಸೆಟ್ ಅಥವಾ ಫಾರ್ಮ್ಯಾಟ್ ಮಾಡುವುದು ಉತ್ತಮ.
ಸಂತ್ರಸ್ತರಿಗೆ ಕಾನೂನುಬದ್ಧವಾಗಿ(ಭಾರತದಲ್ಲಿ) ಲಭ್ಯವಿರುವ ಪರಿಹಾರಗಳು :-
ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಮತ್ತು ಸೆಕ್ಷನ್ಗಳ ಅಡಿಯಲ್ಲಿ ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್ಗಳ ಅಡಿಯಲ್ಲಿ ದಾಖಲಿಸಬಹುದು :
- ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 292-294 (ಅಶ್ಲೀಲ ವಸ್ತುಗಳ ವಿತರಣೆ ಅಥವಾ ಚಲಾವಣೆ), ಸೆಕ್ಷನ್ 354 (ಮಹಿಳೆಯ ಮೇಲೆ ಆಕ್ರಮಣ ಮಾಡುವ ಉದ್ದೇಶದಿಂದ ಅವಳನ್ನು ಅವಮಾನಿಸುವ ಮತ್ತು ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವುದು), ಸೆಕ್ಷನ್ 354A-D (ಲೈಂಗಿಕ ಕಿರುಕುಳ ಮತ್ತು ಶಿಕ್ಷೆ), ಸೆಕ್ಷನ್ 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆಗಾಗಿ ಶಿಕ್ಷೆ), ಸೆಕ್ಷನ್ 419 (ಸೋಗು ಹಾಕುವ ವಂಚನೆಗಾಗಿ ಶಿಕ್ಷೆ), ಸೆಕ್ಷನ್ 420 (ವಂಚನೆ), ಸೆಕ್ಷನ್ 424 (ಮಾಹಿತಿಯ ಕಾನೂನುಬಾಹಿರ ಹೊರತೆಗೆಯುವಿಕೆ), ಸೆಕ್ಷನ್ 441 (ಕ್ರಿಮಿನಲ್ ಅತಿಕ್ರಮಣ), ಸೆಕ್ಷನ್ 499 (ಮಾನನಷ್ಟ), ಸೆಕ್ಷನ್ 500 (ಮಾನನಷ್ಟಕ್ಕಾಗಿ ಶಿಕ್ಷೆ), ವಿಭಾಗ 503 (ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆ ತರುವ ಬೆದರಿಕೆಗಳು), ಸೆಕ್ಷನ್ 507 (ಕ್ರಿಮಿನಲ್ ಬೆದರಿಕೆ), ವಿಭಾಗ 509 (ಖಾಸಗಿತನ ಮತ್ತು ನಮ್ರತೆಗೆ ಅವಮಾನ).
- ಮಾಹಿತಿ ತಂತ್ರಜ್ಞಾನ ಕಾಯಿದೆ 2000/08, ಸೆಕ್ಷನ್ 43 (ಕಂಪ್ಯೂಟರ್, ಕಂಪ್ಯೂಟರ್ ಸಿಸ್ಟಮ್, ಇತ್ಯಾದಿಗಳ ಹಾನಿಗಾಗಿ ದಂಡ ಮತ್ತು ಪರಿಹಾರ), ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿತ ಅಪರಾಧಗಳಿಗೆ ಶಿಕ್ಷೆ – ಡೇಟಾದ ಕಳ್ಳತನ, ಸಿಸ್ಟಮ್ಗೆ ವೈರಸ್ ಹರಡುವಿಕೆ, ಡೇಟಾ ನಾಶ, ಹ್ಯಾಕಿಂಗ್ ಅಥವಾ ಅಧಿಕೃತ ವ್ಯಕ್ತಿಗೆ ಕಂಪ್ಯೂಟರ್ ಅಥವಾ ನೆಟ್ವರ್ಕ್ಗೆ ಪ್ರವೇಶ), ಸೆಕ್ಷನ್ 66C (ಗುರುತಿನ ಕಳ್ಳತನ ಮತ್ತು ಗುರುತಿನ ಮಾಹಿತಿಯ ಮೋಸದ ಅಥವಾ ಅಪ್ರಾಮಾಣಿಕ ಬಳಕೆಗಾಗಿ ದಂಡ), ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಸೋಗು ಹಾಕುವ ವಂಚನೆಗೆ ಶಿಕ್ಷೆ), ಸೆಕ್ಷನ್ 66E (ಗೌಪ್ಯತೆ ಉಲ್ಲಂಘನೆ), ಸೆಕ್ಷನ್ 67 (ವಿದ್ಯುನ್ಮಾನ ಮಾಧ್ಯಮದಲ್ಲಿ ಅಶ್ಲೀಲ ಮತ್ತು ಲೈಂಗಿಕ ವಿಷಯವನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು), ಸೆಕ್ಷನ್ 67A (ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ವಸ್ತುಗಳ ಪ್ರಕಟಣೆ).
- ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯಿದೆ, 1986 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012 ರ ಅಡಿಯಲ್ಲಿ.